ಕರಾವಳಿ

ಬೈಂದೂರು ಜಂಕ್ಷನ್ ಬಳಿ ಬಾಂಬ್ ಇಡಲು ಬಂದ ಇಬ್ಬರನ್ನು ಬಂಧಿಸಿದ ಪೊಲೀಸರು!

Pinterest LinkedIn Tumblr

ಕುಂದಾಪುರ: ಬೈಂದೂರು ಜಂಕ್ಷನ್ ಅಂಡರ್ ಪಾಸ್ ಬಳಿ ಟೈಂ ಬಾಂಬ್ ಇಡಲು ಬಂದ ಇಬ್ಬರು ಆಗಂತುಕರನ್ನು ಬೈಂದೂರು ಪ್ರೊಬೇಶನರಿ ಪಿಎಸ್ಐಗಳು ಬಂಧಿಸಿ ವಿಚಾರಣೆ ನಡೆಸಿದ ಘಟನೆ ಒಂದಷ್ಟು ಹೊತ್ತು ಬೈಂದೂರಿನಲ್ಲಿ ಒಂದಷ್ಟು ಹೊತ್ತು ಆತಂಕ ಸೃಷ್ಟಿ ಮಾಡಿದ್ದು ಇದು ರೀಯಲ್ ಅಲ್ಲ ರೀಲ್ ಎಂಬುದು ತಿಳಿದ ಮೇಲೆ ನಿರಾಳರಾಗಿದ್ದಾರೆ.

ಸಾಗರ್ ರಕ್ಷಕ- ರೀಲ್ ಬಾಂಬ್!
ಉಡುಪಿ ಜಿಲ್ಲಾ ಪೊಲೀಸ್ ಇಲಾಖೆ, ಕರಾವಳಿ ಕಾವಲು ಪಡೆ ವತಿಯಿಂದ ಡಿ.5 ಮತ್ತು 6 ರಂದು ಜಿಲ್ಲಾದ್ಯಂತ ಸಾಗರ್ ರಕ್ಷಕ್ ಹೆಸರಲ್ಲಿ ಅಣಕು ಕಾರ್ಯಾಚರಣೆ ನಡೆಸಲಾಗುತ್ತಿದ್ದು ಈ ಹಿನ್ನೆಲೆ ಬಾಂಬ್ ಇಡುವ ಮತ್ತು ಅವರನ್ನು ಹಿಡಿಯುವ ಅಣುಕು ಕಾರ್ಯಾಚರಣೆ ನಡೆಯಿತು.

ಸಂಜೆ 6.15 ರ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಂದೂರು ಅಂಡರ್ ಪಾಸ್ ಬಳಿ ಅನುಮಾನಾಸ್ಪದವಾಗಿ ನಿಂತಿರುವುದು ಕಂಡಿದ್ದು‌ ಇದನ್ನು ಗಮನಿಸಿದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಬೈಂದೂರು ಪೊಲೀಸ್ ಠಾಣೆಯ ಪ್ರೊಬೇಶನರಿ ಪಿಎಸ್ಐಯವರಾದ ಇನೂಸ್ ಗಡ್ಡೇಕರ್, ಸುದರ್ಶನ್ ಹಾಗೂ ಇಲಾಖೆ ಜೀಪು ಚಾಲಕ ಸುಧೀರ್ ಅವರು ಇಬ್ಬರನ್ನು ವಶಕ್ಕೆ ಪಡೆದು ಅವರು ತಂದಿದ್ದ ಬ್ಯಾಗಿನಲ್ಲಿದ್ದ ಬಾಂಬ್ ಕೂಡ ವಶಕ್ಕೆ ಪಡೆದಿದ್ದಾರೆ. ಆದರೆ ಇಷ್ಟೆಲ್ಲವೂ ಕೂಡ ಪೊಲೀಸರ ನಡುವೆ ಟಾಸ್ಕ್ ಆಗಿತ್ತು. ರೆಡ್ ಫೋರ್ಸ್ ಅವರು ಬಾಂಬ್ ಇಡಲು ಬಂದಿದ್ದು ಬ್ಲ್ಯೂ ಫೋರ್ಸ್ ಇದನ್ನು ಮೊದಲೇ ಕಂಡುಹಿಡಿದು ತಡೆಗಟ್ಟಿದ್ದಾರೆ.

ಒಟ್ಟಿನಲ್ಲಿ‌ ಜನರಲ್ಲಿ ಕಾನೂನು‌ ಅರಿವು, ಜಾಗೃತಿ ಹಾಗೂ ಅಪರಾಧ ಚಟುವಟಿಕೆಗಳ ನಿಯಂತ್ರಣದಲ್ಲಿ ಜನರು ಯಾವ ರೀತಿ ಎಚ್ಚರಿಕೆ ವಹಿಸಬೇಕು ಎಂಬುದರ ಬಗ್ಗೆ ಜಾಗೃತಿ‌ ಮೂಡಿಸಲು ‘ಸಾಗರ್ ರಕ್ಷಕ’ ಸಹಕಾರಿಯಾಗಿದ್ದು ಸಾರ್ವಜನಿಕರಿಂದ ಉತ್ತಮ ಸ್ಪಂದನೆ ಸಿಕ್ಕಿದೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.