ಕರಾವಳಿ

ಕೌಟುಂಬಿಕ ಬಾಂಧವ್ಯ ಭದ್ರಗೊಳಿಸಿ : “ಅಮೃತ ವೈಭವ ” ಉದ್ಘಾಟಿಸಿ ಸ್ವಾಮಿ ಪೂರ್ಣಾಮೃತಾನಂದ ಪುರಿ

Pinterest LinkedIn Tumblr

ಮಂಗಳೂರು, ಡಿಸೆಂಬರ್.16: ಮಂಗಳೂರಿನ ಮಾತಾ ಅಮೃತಾನಂದಮಯಿ ಮಠದಲ್ಲಿ ಭಾನುವಾರ ಮಠಾಧಿಪತಿಗಳಾದ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ ರ ದಿವ್ಯ ಉಪಸ್ಥಿತಿಯಲ್ಲಿ ಸತ್ಸಂಗ, ಧ್ಯಾನ, ಭಜನೆಗಳ ಆಧ್ಯಾತ್ಮಿಕ ಕಾರ್ಯಕ್ರಮ “ಅಮೃತ ವೈಭವ ” ಜರುಗಿತು.

ಮಾತಾ ಅಮೃತಾನಂದಮಯಿ ಮಠದ ಪ್ರಧಾನ ಕಾರ್ಯದರ್ಶಿ ಹಾಗೂ ಅಮ್ಮನವರ ಹಿರಿಯ ಶಿಷ್ಯ ಸಂಪೂಜ್ಯ ಸ್ವಾಮಿ ಪೂರ್ಣಾಮೃತಾನಂದ ಪುರಿಯವರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಶ್ರೀ ಗುರುಪಾದುಕಾ ಪೂಜೆಗೈದು ಆಶೀರ್ವಚನವಿತ್ತರು.

“ಯುವ ತಲೆಮಾರಿನ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಬದುಕನ್ನು ಉನ್ನತೀಕರಿಸುವ ದೃಷ್ಟಿಯಿಂದ ನಮ್ಮ ಕೌಟುಂಬಿಕ ಜೀವನವನ್ನು ಸುಂದರಗೊಳಿಸಬೇಕಾಗಿದೆ,ಕೌಟುಂಬಿಕ ಬಂಧ ಸಡಿಲವಾಗುವುದರಿಂದ ಯುವ ಜನತೆ ನಮ್ಮ ಪರಂಪರೆಯ ಕೊಂಡಿಯಿಂದ ದೂರ ಸಾಗುತ್ತಿದ್ದಾರೆ.ಅದರಿಂದಾಗಿ ಕೆಲವು ದುಶ್ಚಟಗಳಿಗೆ ಬಲಿ ಬೀಳುವ ವಿದ್ಯಮಾನಗಳು ಸಂಭವಿಸುತ್ತಿವೆ.

ಯುವ ಸಮುದಾಯದೊಂದಿಗೆ ಮತ್ತು ಮಕ್ಕಳೊಂದಿಗೆ ಹೆಚ್ಚು ಸಮಯ ಕಳೆಯಿರಿ,ಅವರಿಗೆ ನಮ್ಮ ಪುರಾಣ ಇತಿಹಾಸ ಮತ್ತು ಭವ್ಯ ಪರಂಪರೆಗಳನ್ನು ತಿಳಿ ಹೇಳಿರಿ, ಅವರೊಂದಿಗೆ ಪ್ರೀತಿ ವಿಶ್ವಾಸದಿಂದ ಹೆಚ್ಚಿನ ಸಮಯ ಕಳೆಯಿರಿ ಅದರಿಂದ ಸಮಾಜಕ್ಕೂ, ದೇಶಕ್ಕೂ ಒಳಿತಾಗುತ್ತದೆ” ಎಂದು ಸ್ವಾಮಿ ಪೂರ್ಣಾಮೃತಾನಂದ ಪುರಿಯವರು ಹೇಳಿದರು.

ಸುಶ್ರಾವ್ಯ ಭಜನೆಗಳು ನೆರೆದಿದ್ದ ಭಕ್ತರಲ್ಲಿ ಭಕ್ತಿ ಭಾವದ ಸಂತೃಪ್ತಿ ಮೂಡಿಸಿತು. ಈ ಸಂದರ್ಭದಲ್ಲಿ ಅಮೃತ ವಿದ್ಯಾಲಯದ ವಿದ್ಯಾರ್ಥಿಗಳು ವೇದ ಮಂತ್ರ ಪಠನ ಹಾಗೂ ಸಾಂಸ್ಕೃತಿಕ ಕಲಾ ಪ್ರದರ್ಶನ ನೀಡಿದರು.

ಮಾತಾ ಅಮೃತಾನಂದಮಯಿ ಮಠದ 9 ನೆಯ ವರ್ಷದ ಅಮಲ ಭಾರತ ಅಭಿಯಾನದ ಸ್ಮರಣ ಸಂಚಿಕೆಯನ್ನು ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯರು ಸ್ವಾಮೀಜಿಯವರಿಗೆ ನೀಡಿದರು.

ಕುಂದಾಪುರ, ಮುಲ್ಕಿಯ ಸೇವಾ ಸಮಿತಿಗಳ ನೂತನ ಪದಾಧಿಕಾರಿಗಳನ್ನು ಹಾಗೂ ಒಡಿಯೂರು,ಪುತ್ತೂರು,ಸುಳ್ಯಗಳ ಸಮನ್ವಯಕಾರರನ್ನು ಈ ಸಂದರ್ಭದಲ್ಲಿ ಸ್ವಾಮೀಜಿಯವರು ಸನ್ಮಾನಿಸಿದರು.

ಗೌರವಾಧ್ಯಕ್ಷ ಡಾ.ಜೀವರಾಜ್ ಸೊರಕೆ, ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಪಂಕಜ್ ವಸಾನಿ, ಕೋಶಾಧಿಕಾರಿ ಪ್ರೇಮರಾಜ್,ಉಪಾಧ್ಯಕ್ಷರುಗಳಾದ ಶ್ರೀ ಎಸ್.ಎ.ಪ್ರಭಾಕರ ಶರ್ಮ, ಡಾ.ರಾಜೇಶ್ವರಿ ದೇವಿ, ಡಾ.ವಿಜಯ ಲಕ್ಷ್ಮಿ, ಡಾ.ಮೀನಾಕ್ಷಿ ರಾಮಚಂದ್ರ, ಜೊತೆ ಕಾರ್ಯದರ್ಶಿಗಳಾದ ಶ್ರೀ ನಿತ್ಯಾನಂದ ಶೆಟ್ಟಿ, ಶಿಲ್ಪಾ ರೈ, ಶ್ರೀ ಕೆ.ಸದಾಶಿವ ಭಟ್,ಶ್ರೀಮತಿ ರಮಾ ಭಟ್,ಸಂಯೋಜಕ ಶ್ರೀ ‌ಮುರಳೀಧರ ಶೆಟ್ಟಿ, ಪ್ರಾಂಶುಪಾಲರಾದ ಶ್ರೀ ಆರ್.ಸಿ.ಭಟ್, ಉಪ ಪ್ರಾಂಶುಪಾಲೆ ಅನುಪಮಾ ರಾವ್ ಮೊದಲಾದವರು ಉಪಸ್ಥಿತರಿದ್ದರು.

ಸೇವಾ ಸಮಿತಿಯ ಅಧ್ಯಕ್ಷರಾದ ಡಾ.ವಸಂತ ಕುಮಾರ್ ಪೆರ್ಲ ಸ್ವಾಗತಿಸಿದರು,ಶಿಕ್ಷಕಿ ಶ್ರುತಿ ರಾವ್ ನಿರೂಪಿಸಿದರು.ಡಾ.ದೇವದಾಸ್ ವಂದನಾರ್ಪಣೆ ಮಾಡಿದರು. ಮಹಾಪ್ರಸಾದ ವಿತರಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.

Comments are closed.