ಕುಂದಾಪುರ: ತಾಲೂಕಿನ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಹಟ್ಟಿಯಂಗಡಿ ಗ್ರಾಮಪಂಚಾಯತ್ ವ್ಯಾಪ್ತಿಯ ಜಾಡಿ ಕಲ್ಕಂಬ ಎಂಬಲ್ಲಿ ಮಂಗಳವಾರ ಹಾಡು ಹಗಲಿನಲ್ಲಿಯೇ ವ್ಯಕ್ತಿಯೊಬ್ಬರನ್ನು ಅಪರಿಚಿತ ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಕೊಲೆ ಮಾಡಿರುವ ಘಟನೆ ನಡೆದಿದೆ.
ಕೊಲೆಯಾಗಿರುವ ವ್ಯಕ್ತಿಯನ್ನು ಕಂಡ್ಲೂರು ಸಮೀಪದ ವಾಲ್ತೂರು ಗ್ರಾಮದ ಜೋರ್ಮಕ್ಕಿಯ ನರಸಿಂಹ ಶೆಟ್ಟಿಯವರ ಪುತ್ರ ಬಾಬು ಶೆಟ್ಟಿ (55) ಎಂದು ಗುರುತಿಸಲಾಗಿದೆ. ಕುಂದಾಪುರದಿಂದ ತಲ್ಲೂರು ಮಾರ್ಗವಾಗಿ ನೇರಳಕಟ್ಟೆಗೆ ಸಾಗುವ ಹಾಗೂ ಹೆಮ್ಮಾಡಿ–ಕೊಲ್ಲೂರು ರಾಜ್ಯ ಹೆದ್ದಾರಿಯನ್ನು ಸಂಪರ್ಕಿಸುವ ಜಾಡಿ ರಸ್ತೆಯ ಕಲ್ಕಂಬ ಎಂಬಲ್ಲಿ ಮಧ್ಯಾಹ್ನ ದಾರಿಹೋಕರೊಬ್ಬರು ರಕ್ತಸಿಕ್ತ ಸ್ಥಿತಿಯಲ್ಲಿ ಬಿದ್ದಿರುವ ದೇಹವನ್ನು ಗಮನಿಸಿ, ಹಟ್ಟಿಯಂಗಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜೀವ್ ಶೆಟ್ಟಿಯವರಿಗೆ ಮಾಹಿತಿ ನೀಡಿದ್ದು ಈ ಹತ್ಯೆ ಬೆಳಕಿಗೆ ಬಂದಿದೆ.
ಮಂಗಳವಾರ ಮಧ್ಯಾಹ್ನ 12 ಗಂಟೆಯ ಸುಮಾರಿಗೆ ಜೋರ್ಮಕ್ಕಿಯ ತನ್ನ ಮನೆಯಿಂದ ಕುಂದಾಪುರಕ್ಕೆ ಹೋಗಿ ಬರುವುದಾಗಿ ಬೈಕ್‌ನಲ್ಲಿ ತೆರಳಿದ್ದ ಕೆಲವೇ ಹೊತ್ತಿನಲ್ಲಿ ಅವರ ಹತ್ಯೆ ನಡೆದಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಬೈಕ್‌ನಲ್ಲಿ ತೆರಳುತ್ತಿದ್ದ ಅವರನ್ನು ಹಿಂಬಾಲಿಸಿರುವ ದುಷ್ಕರ್ಮಿಗಳು ಮಾರಕಾಯುಧಗಳಿಂದ ದಾಳಿ ನಡೆಸಿದ್ದಾರೆ. ಗೇರು ಹಾಡಿಯೊಂದರ ಬಳಿಯಲ್ಲಿ ರಕ್ತ ಸಕ್ತ ದೇಹ ಬಿದ್ದಿದ್ದರೇ, ಅವರ ಬೈಕ್ ಗೇರು ಹಾಡಿಯ ಇನ್ನೊಂದು ತುದಿಯನ್ನು ಸಂಪರ್ಕಿಸುವ ರಸ್ತೆಯ ಬದಿಯಲ್ಲಿ ಬಿದ್ದಿದೆ. ಹತ್ಯೆಯಾದ ಬಾಬು ಶೆಟ್ಟಿಯವರ ಕುತ್ತಿಗೆ, ತಲೆ, ಎದೆ ಹಾಗೂ ಹೊಟ್ಟೆಯ ಭಾಗದಲ್ಲಿ ಮಾರಕಾಯುಧದಿಂದ ಇರಿತವಾದ ಗುರುತುಗಳು ಪತ್ತೆಯಾಗಿದ್ದು, ದಾಳಿ ನಡೆದಾಗ ಬೈಕ್ ಬಿಟ್ಟು ಹಾಡಿ ಮೂಲಕ ಓಡಿದ ಬಾಬು ಅವರನ್ನು ದುಷ್ಕರ್ಮಿಗಳು ಅಟ್ಟಿಸಿಕೊಂಡು ಬಂದು ಹತ್ಯೆ ಮಾಡಿದ್ದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಬಾಬು ಶೆಟ್ಟಿಯವರು 407 ಲಾರಿ ಇಟ್ಟುಕೊಂಡಿದ್ದು ವಿವಾಹಿತರಾಗಿರುವ ಅವರಿಗೆ ಪತ್ನಿ, ಓರ್ವ ಗಂಡು ಹಾಗೂ ಓರ್ವ ಪುತ್ರಿ ಇದ್ದಾರೆ. ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಕೊಲೆಯಾದ ಸ್ಥಳಕ್ಕೆ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ, ಜಿಲ್ಲಾ ಎಸ್.ಪಿ ನಿಶಾ ಜೇಮ್ಸ್, ಕುಂದಾಪುರ ಎಎಸ್‌ಪಿ ಹರಿರಾಂ ಶಂಕರ, ಸರ್ಕಲ್ ಇನ್ಸ್‌ಪೆಕ್ಟರ್ ಡಿ.ಆರ್.ಮಂಜಪ್ಪ, ಕುಂದಾಪುರ ಗ್ರಾಮಾಂತರ ಠಾಣೆಯ ಎಸ್.ಐ ರಾಜಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
ಪ್ರಕರಣವನ್ನು ದಾಖಲಿಸಿಕೊಂಡಿರುವ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ಶ್ವಾನದಳ, ಬೆರಳಚ್ಚು ತಜ್ಞರು ಹಾಗೂ ವಿಧಿ ವಿಜ್ಞಾನ ತಜ್ಞರು ಸ್ಥಳಕ್ಕೆ ಭೇಟಿ ನೀಡಿದ್ದಾರೆ.
ಶೀಘ್ರವೇ ಕೊಲೆಗಡುಕರ ಬಂಧನದ ವಿಶ್ವಾಸ: ಶಾಸಕ
ಬೈಂದೂರು ಶಾಂತಿ ಪ್ರಿಯ ಊರಾಗಿದ್ದು ಈ ಕ್ಷೇತ್ರದಲ್ಲಿ ಹಾಡುಹಗಲೇ ಕೊಲೆಯಾಗಿದ್ದು ಮೊದಲು. ಕ್ಷೇತ್ರದ ಜನ ನಿರ್ಭಯದಿಂದ ತಿರುಗುವ ಪರಿಸ್ಥಿತಿ ಆಗಬೇಕು. ಸಮಾಜಘಾತಕ ಶಕ್ತಿಗಳನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಮುಂದಾದರೆ ಸಂಪೂರ್ಣ ಸಹಕಾರ ನೀಡುತ್ತೇನೆ. ಯಾವುದೆ ಕಾರಣದಿಂದಲೂ ರೌಡಿಗಳಿಗೆ, ಪುಂಡುಪೋಕರಿಗಳಿಗೆ ಬೆಂಬಲ ನೀಡೋದಿಲ್ಲ. ದಕ್ಷ ಅಧಿಕಾರಿ ಎಎಸ್‌ಪಿ ನೇತ್ರತ್ವದ ಪೊಲೀಸರ ತಂಡ ಶೀಘ್ರದಲ್ಲಿ ಕೊಲೆಗಡುಕರನ್ನು ಬಂಧಿಸುತ್ತಾರೆ ಎನ್ನುವ ವಿಶ್ವಾಸ ಇದೆ.
– ಬಿ.ಎಂ.ಸುಕುಮಾರ ಶೆಟ್ಟಿ. ಶಾಸಕರು ಬೈಂದೂರು.
ಕೊಲೆಗೆ ಸಂಬಂಧಿಸಿದಂತೆ ಕುಟುಂಬದವರನ್ನು ವಿಚಾರಣೆ ಮಾಡಿದಾಗ ಜಾಗದ ಸಂಬಂಧಿಸಿದ ವಿಚಾರದಲ್ಲಿ ವಿವಾದ ಇತ್ತು ಎಂದು ಹೇಳಿರುವುದರಿಂದ ಈ ಆಯಾಮಗಳಲ್ಲೂ ತನಿಖೆ ನಡೆಸಲಾಗುತ್ತದೆ. ಶ್ವಾನದಳ, ಫೊರೇನ್ಸಿಕ್ ವಿಭಾಗದವರು ಈಗಾಗಲೇ ಪರಿಶೀಲನೆ ನಡೆಸಿದ್ದಾರೆ. ಕ್ರೂರ ರೀತಿಯಲ್ಲಿ ಹತ್ಯೆ ನಡೆದಿರುವುದರಿಂದ ಕುಂದಾಪುರ ಇನ್ಸ್‌ಪೆಕ್ಟರ್ ಹಾಗೂ ಡಿಸಿಐಬಿ ಇನ್ಸ್‌ಪೆಕ್ಟರ್ ಅವರ ನೇತ್ರತ್ವದಲ್ಲಿ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
– ನಿಶಾ ಜೇಮ್ಸ್. ಎಸ್.ಪಿ ಉಡುಪಿ.
(ವರದಿ- ಯೋಗೀಶ್ ಕುಂಭಾಸಿ)
Comments are closed.