ಮಂಗಳೂರು ಡಿಸೆಂಬರ್ 19 : ಶಾಲೆ ಬಿಟ್ಟು ಹೊರಗೆ ಹೋದ ಮಕ್ಕಳನ್ನು ವೈಯಕ್ತಿಕವಾಗಿ ಟ್ರ್ಯಾಕ್ ಮಾಡಿ, ಮರಳಿ ಶಾಲೆಗೆ ಬರುವಂತೆ ಮುಖ್ಯವಾಹಿನಿಗೆ ತರಲು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಗೆ ದ.ಕ ಜಿಲ್ಲಾಧಿಕಾರಿ ಸಿಂಧು ಬಿ ರೂಪೇಶ್ ಸೂಚಿಸಿದ್ದಾರೆ.
ಅವರು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಮಟ್ಟದ ವಿವಿಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತಾಡಿದರು. ಯಾವುದೇ ಕಾರಣಕ್ಕೂ ಮಕ್ಕಳು ಶಾಲೆಯನ್ನು ಅರ್ಧದಲ್ಲಿಯೇ ಬಿಟ್ಟು ಹೋಗುವ ಪರಿಸ್ಥಿತಿ ಎದುರಾಗಬಾರದು. ಈ ನಿಟ್ಟಿನಲ್ಲಿ ಶಿಕ್ಷಕರೂ ಮಕ್ಕಳ ಚಟುವಟಿಕೆ ಮೇಲೆ ನಿರಂತರ ಗಮನಿಸುತ್ತಿಬೇಕು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿನ ಮಂಗಳಮುಖಿಯರು ಭಿಕ್ಷಾಟಣೆ ಮಾಡುವುದನ್ನು ನಿಲ್ಲಿಸಲು ಮಂಗಳಮುಖಿ ಸಮಿತಿ ಕ್ರಮಗಳನ್ನು ಕೈಗೊಂಡಿದ್ದು, ಬೇರೆ ಜಿಲ್ಲೆ, ರಾಜ್ಯಗಳಿಂದ ವಲಸೆ ಬಂದಿರುವ ಮಂಗಳಮುಖಿಯರು ನಗರದ ಹಲವು ಟೋಲ್ ಗೇಟ್‍ಗಳಲ್ಲಿ ಮಧ್ಯರಾತ್ರಿಯವರೆಗೂ ತೊಂದರೆ ಮಾಡುತ್ತಿದ್ದು ಇದರ ಕುರಿತು ನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತದೆ. ಲಿಂಗತ್ವ ಅಲ್ಪ ಸಂಖ್ಯಾತರ ಪುನರ್ವಸತಿ ಯೋಜನೆಯಡಿ ಆಯ್ಕೆಗೊಂಡ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿಕೊಡಲಾಗುವುದು, ಮತ್ತು ಇವರು ನಿವೇಶನದ ಕುರಿತು ನೀಡಿರುವ ಅರ್ಜಿಗಳ ಎಷ್ಟಿವೆ ಎಂಬ ಸಂಪೂರ್ಣ ಮಾಹಿತಿ ಕಲೆ ಹಾಕುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಅವರು ತಿಳಿಸಿದರು.
ಸ್ಕ್ಯಾನಿಂಗ್ ಸೆಂಟರ್‍ಗಳ ಕುಟುಕು ಕಾರ್ಯಾಚರಣೆ ನಿಯಮಿತವಾಗಿ ನಡೆಸುವಂತೆ ಕ್ರಮ ವಹಿಸಬೇಕು. ಬೆಳ್ತಂಗಡಿ ತಾಲೂಕು ಅತೀ ಕಡಿಮೆ ಲಿಂಗಾನುಪಾತ ಹೊಂದಿದ್ದು, ಬೆಳ್ತಂಗಡಿ ಸ್ಕ್ಯಾನಿಂಗ್ ಸೆಂಟರ್‍ಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚನೆ ನೀಡಿದರು.
ಸಂಕಷ್ಟದಲ್ಲಿರುವ ಮಹಿಳೆಯರಿಗೆ ತಾತ್ಕಾಲಿಕ ವಸತಿ ಒದಗಿಸುವ ಯೋಜನೆ (ಸ್ವಾಧಾರ ಗೃಹ ಯೋಜನೆ) ಇದರಲ್ಲಿ ಮಾನಸಿಕ ರೋಗಿಗಳ ಪುನರ್ವಸತಿಗೆ ಮಂಗಳೂರು ನಗರದಲ್ಲಿ ನಿವೇಶನ ಲಭ್ಯತೆ ಇಲ್ಲದ ಕಾರಣ ಹೊರವಲಯದಲ್ಲಿ ನಿವೇಶನಗಳನ್ನು ಗುರುತಿಸುವಂತೆ ಸಂಬಂಧ ಪಟ್ಟ ಇಲಾಖಾಧಿಕಾರಿಗಳಲ್ಲಿ ಹೇಳಿದರು.
ಭಾರತ ಸರ್ಕಾರದ ಯೋಜನೆಯಾದ ಸಖಿ ಒನ್ ಸ್ಟಾಪ್ ಸೆಂಟರ್‍ನಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಸೇವೆ, ಸಮಾಲೋಚನೆ, ಕಾನೂನು ನೆರವು ಮತ್ತು ತಾತ್ಕಾಲಿಕ ವಸತಿ ಒದಗಿಸುವ ನಿಟ್ಟಿನಲ್ಲಿ ಸಖಿ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಜಿಲ್ಲೆಯಲ್ಲಿ ಇದರ ಪ್ರಯೋಜನಕ್ಕೊಳಪಡುವ ಮಹಿಳೆಯರಿಗೆ, ಸಾರ್ವಜನಿಕರಿಗೆ ಈ ಯೋಜನೆಯ ಕುರಿತು ಪ್ರಥಮವಾಗಿ ಪ್ರಾಥಮಿಕ ಮಟ್ಟದಲ್ಲಿ ಮಾಹಿತಿ ನೀಡಬೇಕು ಹಾಗೂ ಯಾವುದೇ ಒಂದು ಯೋಜನೆಗಳು ಅನುಷ್ಠಾನಗೊಳ್ಳುತ್ತಿರುವ ಸಂಧರ್ಭಗಳಲ್ಲಿ ಆ ಯೋಜನೆಯ ಸಂಪೂರ್ಣ ಮಾಹಿತಿಯನ್ನು ಫಲಾನುಭವಿಗಳ ಗಮನಕ್ಕೆ ತರುವ ಕಾರ್ಯ ಮೊದಲು ನಡೆಯಬೇಕು.
ಒಂದು ಯೋಜನೆಯ ಮಹತ್ವ ಏನು, ಯೋಜನೆಯನ್ನು ಪಡೆಯಲು ಯಾರ್ಯಾರು ಅರ್ಹರು ಎಂಬುವುದರ ಕುರಿತು ಅರಿವು ನೀಡಬೇಕು, ಕೇವಲ ಒಂಧು ಭಾಗಕ್ಕೆ ಯೋಜನೆ ಸೀಮಿತವಾಗಿರದೇ ಇಡೀ ಜಿಲ್ಲೆಗೆ ಪಸರಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಉಸ್ಮಾನ್ ಎ, ಜಿಲ್ಲಾ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ರಾಮಕೃಷ್ಣ ರಾವ್, ಎನ್‍ಜಿಓ ಪ್ರತಿನಿಧಿಗಳು, ಸಂಬಂಧ ಪಟ್ಟ ಇಲಾಖಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.
Comments are closed.