ಮಂಗಳೂರು, ಡಿಸೆಂಬರ್.21: : ಮಂಗಳೂರಿನಲ್ಲಿ ಗುರುವಾರ ನಡೆದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿತ್ತು. ಪರಿಸ್ಥಿತಿ ಕೈ ಮೀರಿತ್ತು. ಮಂಗಳೂರಿನ ಬಂದರ್ ಪೊಲೀಸ್ ಸ್ಟೇಶನ್ ಬಳಿಯ ಪರಿಸ್ಥಿತಿ ವಿಕೋಪಕ್ಕೆ ತಿರುಗಿತ್ತು. ಪ್ರತಿಭಟನಾಕಾರರು ಪೊಲೀಸ್ ಠಾಣೆಗೆ ನುಗ್ಗಿದ್ದರೆ ಅನಾಹುತವಾಗುತ್ತಿತ್ತು. ಹೀಗಾಗಿ ಅನಿವಾರ್ಯವಾಗಿ ಗೋಲಿಬಾರ್ ಮಾಡಲಾಯಿತು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.
ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಮಂಗಳೂರಿನಲ್ಲಿ ನಡೆದ ಪ್ರತಿಭಟನೆ ಹಾಗೂ ಹಿಂಸಾಚಾರ ಘಟನೆಗಳ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಶನಿವಾರ ಮಧ್ಯಾಹ್ನ ವಿಶೇಷ ವಿಮಾನದಲ್ಲಿ ನಗರಕ್ಕೆ ಆಗಮಿಸಿದ್ದು ಸರ್ಕಿಟ್ ಹೌಸ್ ನಲ್ಲಿ ಅಧಿಕಾರಿಗಳ ಸಭೆ ನಡೆಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.
ಜನರ ಮನವಿಯ ಮೇರೆಗೆ ನಗರದಲ್ಲಿ ಜಾರಿಯಲ್ಲಿರುವ ಕರ್ಫ್ಯೂವನ್ನು ಇಂದು ಮಧ್ಯಾಹ್ನ 3 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ತೆರವು ಗೊಳಿಸಲಾಗಿದ್ದು, ರವಿವಾರ ರಾತ್ರಿ ಮಾತ್ರ ಕರ್ಫ್ಯೂ ಜಾರಿಯಲ್ಲಿರಲಿದೆ. ಸೋಮವಾರದಿಂದ ಸಂಪೂರ್ಣ ಕರ್ಫ್ಯೂ ತೆರವು ಮಾಡಲಾಗುತ್ತದೆ ಎಂದು ಹೇಳಿದರು.
ಪೊಲೀಸ್ ಗೋಲಿಬಾರ್ ನಲ್ಲಿ ಮೃತರಾದವರ ಕುಟುಂಬಗಳಿಗೆ ಜಿಲ್ಲಾಧಿಕಾರಿಗಳು ಪರಿಹಾರ ಘೋಷಿಸುತ್ತಾರೆ ಎಂದು ಮುಖ್ಯಮಂತ್ರಿಗಳು ಹೇಳಿದರು.
ಅದಕ್ಕೂ ಮುನ್ನ ಮಂಗಳೂರು ವಿಮಾನ ನಿಲ್ದಾಣದಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಬಿಎಸ್ ವೈ ಸಭೆ ನಡೆಸಿದರು. ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಮರ್ ಕುಮಾರ್ ಪಾಂಡೆ ಅವರ ಜೊತೆ ಪರಿಸ್ಥಿತಿಯ ಬಗ್ಗೆ ಮಾತುಕತೆ ನಡೆಸಿದರು.
ಪೌರತ್ವ ತಿದ್ದುಪಡಿ ಕಾಯ್ದೆ ಪ್ರತಿಭಟನೆಯ ಸಮಯದಲ್ಲಿ ಗುರುವಾರ ಪೊಲೀಸರ ಗುಂಡೇಟಿಗೆ ಬಲಿಯಾದ ಇಬ್ಬರು ಯುವಕರ ಕುಟುಂಬಿಕರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.
Comments are closed.