ಕರಾವಳಿ

ಮೂರು ಗಂಟೆ ಕರ್ಫ್ಯೂ ಸಡಿಲಿಕೆ : ಮಾರುಕಟ್ಟೆಗೆ ಮುಗಿಬಿದ್ದ ಜನರು – ಮೀನು,ಕೋಳಿಗೆ ಹೆಚ್ಚಿನ ಡಿಮಾಂಡ್

Pinterest LinkedIn Tumblr

ಮಂಗಳೂರು, ಡಿಸೆಂಬರ್.21: ಪೌರತ್ವ ಕಾಯ್ದೆ ವಿರೋಧಿಸಿ ಗುರುವಾರ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆ ಹಿನ್ನೆಲೆ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶುಕ್ರವಾರದಿಂದ ಹೇರಲಾಗಿದ್ದ ಕರ್ಫ್ಯೂವನ್ನು ಶನಿವಾರ ಮಧ್ಯಾಹ್ನ 3 ಗಂಟೆಯಿಂದ ಸಂಜೆ 6ರವರೆಗೂ ಸಡಿಲಿಕೆಯಾಗಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆಯಿಂದ ಪೊಲೀಸರ ಗೋಲಿಬಾರ್‌ಗೆ ಇಬ್ಬರು ಬಲಿಯಾಗಿ ಪ್ರಕ್ಷುಬ್ದಗೊಂಡಿದ್ದ ಮಂಗಳೂರಿನಲ್ಲಿ ಕರ್ಪ್ಯೂ ಹೇರಿ, ಇಂಟರ್ ನೆಟ್ ಸೇವೆಯೂ ಇಲ್ಲದೆ ಗೃಹಬಂಧಿಗಳಾಂತಾಗಿದ್ದ ಮಂಗಳೂರು ಜನತೆಗೆ ಶನಿವಾರ ಮಧಾಹ್ನ 3 ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಕರ್ಪ್ಯೂ ಸಡಿಲಿಕೆ ಮಾಡಿರುವುದು ಬಿಗ್ ರಿಲೀಫ್ ಸಿಕ್ಕಂತಾಗಿದೆ. ಕರ್ಫ್ಯೂ ಸಡಿಲಿಕೆ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಜನಸಾಮಾನ್ಯರು ದಿನನಿತ್ಯ ಬಳಕೆ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದಾರೆ.

ಕರ್ಪ್ಯೂ ಸಡಿಲಿಕೆ ಮಾಹಿತಿ ಹರಡುತ್ತಿದ್ದಂತೆ ತರಕಾರಿ ಹಾಲು ಕೆಲವು ದಿನಸಿ ಅಂಗಡಿಗಳು ತೆರೆದಿದ್ದು, ಈ ಹಿನ್ನಲೆಯಲ್ಲಿ ಜನ ಅಗತ್ಯ ವಸ್ತುಗಳಿಗಾಗಿ ಅಂಗಡಿ -ಮುಂಗಟ್ಟುಗಳಿಗೆ ಮುಗಿಬಿದ್ದು ಖರೀದಿಸುವ ದೃಶ್ಯ ನಗರದಲ್ಲಿ ಸಾಮಾನ್ಯವಾಗಿ ಕಂಡುಬಂತು. ಕೆಲ ಅಂಗಡಿಗಳಿಗೆ ಜನ ಏಕಾಏಕಿ ಮುಗಿಬಿದ್ದ ಪರಿಣಾಮ ಒಮ್ಮೆಲೆ ಸಾಮಾನುಗಳು ಬಿಕರಿಯಾಯಿತು.

ಕಳೆದ ಎರಡು ದಿನಗಳಿಂದ ಬಿಕೋ ಎನ್ನುತ್ತಿದ್ದ ನಗರದ ರಸ್ತೆಗಳೆಲ್ಲ ಶನಿವಾರ 3 ಗಂಟೆ ನಂತರ ಕ್ರಮೇಣ ಜನ ಜಂಗುಳಿಯಿಂದ ಕೂಡಿಲಾರಂಭಿಸಿತು. ರಸ್ತೆಯಲ್ಲಿ ಬೈಕ್, ಕಾರು, ರಿಕ್ಷಾಗಳು ಓಡಲಾರಂಭಿಸಿದವು.

ನಗರದ ಕೇಂದ್ರ ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು-ಹಂಪಲು ಮಳಿಗೆಗಳು ತೆರೆಯಲ್ಪಟ್ಟವು. ದಿನಬಳಕೆಯ ವಸ್ತುಗಳನ್ನು ಗ್ರಾಹಕರು ಖುಷಿಯಿಂದಲೇ ಖರೀದಿಸಿದರು. ಕೆಲವು ಮಾರುಕಟ್ಟೆಯಲ್ಲಿ ಕೋಳಿ ಮಾರಾಟ ಹಾಗೂ ಮೀನು ಮಾರಾಟವು ಅಬ್ಬರದಿಂದ ಕೂಡಿತ್ತು. ಗ್ರಾಹಕರೂ ಕೋಳಿ ಹಾಗೂ ಮೀನಿನ ಬೆಲೆಗೆ ಗಮನ ಕೊಡದೇ ಮೀನು ಖರೀದಿಯಲ್ಲಿ ತೊಡಗಿರುವುದು ಕಂಡು ಬಂತು.

Comments are closed.