ಕುಂದಾಪುರ: ‘ಶಾಲಾ ವಠಾರ ನಿಧಾನವಾಗಿ ಚಲಿಸಿ….ಚಿರತೆಯಿದೆ ವೇಗವಾಗಿ ಚಲಿಸಿ’- ಹೀಗೊಂದು ಪ್ಲೇ ಕಾರ್ಡ್ ಪ್ರದರ್ಶನಗೊಂಡಿದ್ದು ಕುಂದಾಪುರ ತಾಲೂಕು ತೆಕ್ಕಟ್ಟೆ ಗ್ರಾಮಪಂಚಾಯತ್ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ. ಇಲ್ಲಿನ ಶ್ರೀ ನಂಧಿಕೇಶ್ವರ ದೇವಸ್ಥಾನ ಹಾಗೂ ಅಂಗನವಾಡಿ, ಶಾಲೆ ಇರುವ ಪರಿಸರದ ಪಕ್ಕದ ತೋಪಿನಲ್ಲಿ ಮತ್ತೊಂದು ಹೆಣ್ಣು ಚಿರತೆ ಬೋನಿಗೆ ಬಿದ್ದಿದ್ದು ಒಂದೂವರೆ ವರ್ಷದ ಅವಧಿಯಲ್ಲಿ ಸೆರೆಯಾದ ನಾಲ್ಕನೆ ಚಿರತೆ ಇದಾಗಿದೆ.
2 ವಾರದೊಳಗೆ 2ನೇ ಚಿರತೆ…
ನಾಯಿ, ಜಾನುವಾರು ಸೇರಿದಂತೆ ಸಾಕುಪ್ರಾಣಿಗಳ ಮೇಲೆ ದಾಳಿ ನಡೆಸುವುದು ಮಾತ್ರವಲ್ಲದೇ ಹಾಡುಹಗಲೇ ಪ್ರತಕ್ಷವಾಗಿ ಜನರಿಗೆ ಚಿರತೆಗಳು ನಿರಂತರವಾಗಿ ಉಪಟಳ ನೀಡುತ್ತಿದ್ದು ಮಾಲಾಡಿಯ ಎಕ್ರೆಗಟ್ಟಲೆ ಇರುವ ಈ ತೋಟದಲ್ಲಿ ಕಳೆದ ಒಂದೆರಡು ವರ್ಷದಿಂದ ಚಿರತೆ ಕಾಟ ಹೆಚ್ಚಿತ್ತು. ಈ ಹಿನ್ನೆಲೆ ಕಳೆದ ವರ್ಷ ಅರಣ್ಯ ಇಲಾಖೆ ಬೋನಿಟ್ಟಿದ್ದು 2018 ಆಗಸ್ಟ್ ತಿಂಗಳಲ್ಲಿ ಚಿರತೆಯೊಂದು ಬೋನಿಗೆ ಬಿದ್ದಿತ್ತು. ಬಳಿಕ ಚಿರತೆ ಆಗ್ಗಾಗೆ ಕಾಣಿಸಿಕೊಳ್ಳುತ್ತಿದ್ದು ಇದೇ ವರ್ಷ ಮತ್ತೆ ಬೋನಿಟ್ಟಿದ್ದು ಅಕ್ಟೋಬರ್ ತಿಂಗಳಲ್ಲಿ ಮತ್ತೊಂದು ಚಿರತೆ ಸೆರೆಯಾಗಿತ್ತು. ತದನಂತರೂ ಚಿರತೆ ಕಾಟ ಮುಂದುವರೆದಿದ್ದು ನವೆಂಬರ್ ತಿಂಗಳಲ್ಲಿ ಮತ್ತೆ ಬೋನಿಟ್ಟ ಇಲಾಖೆ ‘ಆಪರೇಶನ್ ಚೀತಾ’ ಕಾರ್ಯಾಚರಣೆ ನಡೆಸಿ ಡಿ.12ರಂದು ಮತ್ತೊಂದು ಚಿರತೆಯನ್ನು ಬೋನಿಗೆ ಬೀಳಿಸಿತ್ತು. ಸಾರ್ವಜನಿಕರ ಕೋರಿಕೆಯಂತೆ ಮತ್ತೆ ಬೋನ್ ಇಡಲಾಗಿದ್ದು ಮಂಗಳವಾರ ಬೆಳಿಗ್ಗೆ ಬೋನಿಗೆ ಮತ್ತೊಂದು ಹೆಣ್ಣು ಚಿರತೆ ಬಿದ್ದಿದೆ. ಸ್ಥಳೀಯ ನಿವಾಸಿಗಳಾದ ಸತೀಶ್ ದೇವಾಡಿಗ ಮತ್ತು ಸುರೇಶ್ ಅವರು ನಿತ್ಯ ಇಲಾಖೆ ಇಟ್ಟ ಬೋನಿಗೆ ನಾಯಿ ಕಟ್ಟಿ ಚಿರತೆ ಸೆರೆಗೆ ಸಹಕಾರ ನೀಡುತ್ತಿದ್ದರು.
ಚಿರತೆಯಿದೆ ವೇಗವಾಗಿ ಚಲಿಸಿ!
ಒಂದೂವರೆ ವರ್ಷದಲ್ಲಿ ನಾಲ್ಕು ಚಿರತೆ ಸೆರೆಯಾದ ಮಾಲಾಡಿ ತೋಟದ ಬಳಿಯೇ ಸರಕಾರಿ ಶಾಲೆ, ಅಂಗನವಾಡಿ ಹಾಗೂ ದೇವಸ್ಥಾನ ಸೇರಿದಂತೆ ವಸತಿ ಪ್ರದೇಶವಿದೆ. ನಿರಂತರವಾಗಿ ಚಿರತೆ ಕಾಟದಿಂದ ಇಲ್ಲಿನ ಜನರು ರೋಸಿ ಹೋಗಿದ್ದಾರೆ. ಹಾಡುಹಗಲಲ್ಲೇ ಚಿರತೆ ಪ್ರತ್ಯಕ್ಷವಾಗಿದ್ದರಿಂದ ಮಕ್ಕಳನ್ನು ಶಾಲೆಗೆ ಕಳಿಸಲು ಕೂಡ ಪೋಷಕರು ಹೆದರುತ್ತಾರೆ. ‘ಶಾಲಾ ವಠಾರ ನಿಧಾನವಾಗಿ ಚಲಿಸಿ….ಚಿರತೆಯಿದೆ ವೇಗವಾಗಿ ಚಲಿಸಿ’ ಎಂದು ತೋಟದ ಗೇಟಿಗೆ ಅಳವಡಿಸಿದ ಫ್ಲೇ ಕಾರ್ಡ್ ಈ ಬಾರಿ ಎಲ್ಲರನ್ನೂ ಆಕರ್ಷಿಸಿತ್ತು. ಚಿರತೆ ಕಣಲು ತೆಕ್ಕಟ್ಟೆ, ಮಾಲಾಡಿ, ಕುಂಭಾಸಿ, ವಕ್ವಾಡಿ ಆಸುಪಾಸಿನ ನೂರಾರು ಮಂದಿ ಆಗಮಿಸಿದ್ದರು.
ಇನ್ನೂ ಕೂಡ ಚಿರತೆ ಇರುವ ಬಗ್ಗೆ ಸಾರ್ವಜನಿಕರು ಗುಮಾನಿ ವ್ಯಕ್ತಪಡಿಸಿದ್ದು ಮತ್ತೆ ಬೋನ್ ಇಟ್ಟು ಕಾರ್ಯಾಚರಣೆ ಮುಂದುವರೆಸಲು ಸ್ಥಳೀಯರು ಆಗ್ರಹಿಸಿದ್ದಾರೆ. ತೆಕ್ಕಟ್ಟೆ ಗ್ರಾ.ಪಂ ಅಧ್ಯಕ್ಷ ಶೇಖರ್ ಕಾಂಚನ್, ಮಾಜಿ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ, ಸದಸ್ಯರಾದ ಸಂಜೀವ ದೇವಾಡಿಗ, ವಿಜಯ ಭಂಡಾರಿ, ಅರಣ್ಯ ಇಲಾಖೆಯ ಕುಂದಾಪುರ ಉಪವಲಯ ಅರಣ್ಯಾಧಿಕಾರಿ ಉದಯ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.
(ಚಿತ್ರ, ವರದಿ- ಯೋಗೀಶ್ ಕುಂಭಾಸಿ)
Comments are closed.