ಮಂಗಳೂರು, ಜನವರಿ.03: ಕನ್ನಡದ ಖ್ಯಾತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿ ಸಹಿತಾ ಏಳು ಮಂದಿ ಪ್ರಸಕ್ತ (2020ನೇ) ಸಾಲಿನ ಸಂದೇಶ ಪ್ರಶಸ್ತಿಗೆ ಅಯ್ಕೆಯಾಗಿದ್ದಾರೆ ಎಂದು ಸಂದೇಶ ಪ್ರಶಸ್ತಿ ಸಮಿತಿಯ ಅಧ್ಯಕ್ಷ ನಾ.ಡಿ.ಸೋಜ ತಿಳಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಸಂದೇಶ ಪ್ರಶಸ್ತಿ ಪುರಸ್ಕೃತರ ಪಟ್ಟಿ ಪ್ರಕಟಿಸಿ ಮಾತನಾಡಿದ ಅವರು, ಕನ್ನಡದ ಖ್ಯಾತ ಸಾಹಿತಿ ಬೊಳುವಾರು ಮಹಮ್ಮದ್ ಕುಂಞಿವರಿಗೆ ಪ್ರಸಕ್ತ (2020ನೇ) ಸಾಲಿನ ‘ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ’ ನೀಡಲಾಗುವುದು. ಸಂದೇಶ ಪ್ರತಿಷ್ಠಾನದ ವತಿಯಿಂದ ನೀಡಲಾಗುವ ಈ ಪ್ರಶಸ್ತಿಗೆ ಬೊಳುವಾರು ಅವರ ‘ಸ್ವಾತಂತ್ರದ ಓಟ’ ಕಾದಂಬರಿ ಆಯ್ಕೆಯಾಗಿದೆ ಎಂದು ತಿಳಿಸಿದರು.
ಉಳಿದಂತೆ ‘ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ’ಗೆ ವಲೇರಿಯನ್ ಡಿಸೋಜ (ವಲ್ಲಿ ವಗ್ಗ), ಶಿವ ಕುಮಾರ್ ಅವರಿಗೆ ‘ಸಂದೇಶ ಮಾಧ್ಯಮ ಪ್ರಶಸ್ತಿ’, ಹೆಲೆನ್ ಡಿ ಕ್ರೂಝ್ ಅವರಿಗೆ ‘ಸಂದೇಶ ಕೊಂಕಣಿ ಪ್ರಶಸ್ತಿ’, ಡಾ.ಕೆ.ಎಸ್.ಪವಿತ್ರಾರಿಗೆ ‘ಸಂದೇಶ ಕಲಾ ಪ್ರಶಸ್ತಿ’, ಜುಸ್ತಿನಾ ಡಿಸೋಜರಿಗೆ ‘ಸಂದೇಶ ಶಿಕ್ಷಣ ಪ್ರಶಸ್ತಿ’ ಹಾಗೂ ವಿನ್ಸೆಂಟ್ ಪ್ರಕಾಶ್ ಕಾರ್ಲೋ ಅವರಿಗೆ ‘ಸಂದೇಶ ವಿಶೇಷ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ ಎಂದು ನಾ.ಡಿ.ಸೋಜ ವಿವರಿಸಿದರು.
ಪ್ರಶಸ್ತಿಯು 25,000 ನಗದು ಹಾಗೂ ಸನ್ಮಾನ ಪತ್ರವನ್ನು ಒಳಗೊಂಡಿರುತ್ತದೆ. ಫೆಬ್ರವರಿ 9ರಂದು ಸಂಜೆ 5 ಗಂಟೆಗೆ ನಂತೂರು ಸಂದೇಶ ಪ್ರತಿಷ್ಠಾನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದವರು ಹೇಳಿದರು.ಇದೇ ಸಂದರ್ಭ ‘ಸಂದೇಶ’ ಹೆಸರಿನ ಗೃಹ ಪತ್ರಿಕೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂದೇಶ ಪ್ರತಿಷ್ಠಾನದ ನಿರ್ದೇಶಕ ವಂ. ಫಾ| ಫ್ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ, ಟ್ರಸ್ಟಿ ರಾಯ್ ಕ್ಯಾಸ್ತಲಿನೋ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಸಂದೇಶ ಪ್ರಶಸ್ತಿಗಳು ಮತ್ತು ಪುರಸ್ಕೃತರ ವಿವರ :
1. ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿ- ಶ್ರೀ ಬೊಳುವಾರು ಮಹಮ್ಮದ್ ಕುಂಇ~
ಕರಾವಳಿ ಕರ್ನಾಟಕದ ಪುತ್ತೂರಿನ ಬೊಳುವಾರು ಎಂಬಲ್ಲಿ ೧೯೫೧ ರಲ್ಲಿ ಜನಿಸಿದ ಶ್ರೀ ಬೊಳುವಾರು ಮಹಮ್ಮದ್ ಕುಂಇ~ ಇವರು ಮೈಸೂರು ವಿಶ್ವವಿದ್ಯಾಲಯದಿಂದ ಕುವೆಂಪು ಬಂಗಾರದ ಪದಕ ಸಹಿತ ಕನ್ನಡ ಸ್ನಾತಕೋತ್ತರ ಪದವಿಯನ್ನು ಪಡೆದಿರುತ್ತಾರೆ. ಸಿಂಡಿಕೇಟ್ ಬ್ಯಾಂಕಿನ ಪ್ರಚಾರ ವಿಭಾಗದಲ್ಲಿ ೪೦ ವರ್ಷಗಳ ಕಾಲ ಸೇವೆ ಸಲ್ಲಿಸಿ ಮುಖ್ಯ ಪ್ರಬಂಧಕರಾಗಿ ನಿವೃತ್ತಿಗೊಂಡು ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿದ್ದಾರೆ.
ಇವರು ಕೇಂದ್ರ ಸಾಹಿತ್ಯ ಅಕಾಡೆಮಿಯ ೬೫ ವರ್ಷಗಳ ಇತಿಹಾಸದಲ್ಲಿ ಯಾವುದೇ ಭಾಷೆಯ ಸೃಜನಶೀಲ ಗದ್ಯ ಕೃತಿಗಳಿಗಾಗಿ ೨ ಬಾರಿ ಪ್ರಶಸ್ತಿಗಳನ್ನು ಗಳಿಸಿದ ದೇಶದ ಏಕೈಕ ಸಾಹಿತಿ ಎಂಬ ದಾಖಲೆ ನಿರ್ಮಿಸಿರುತ್ತಾರೆ. ಸುಮಾರು ೨೫೦ ಕ್ಕೂ ಮಿಕ್ಕಿ ಸಣ್ಣ ಕತೆಗಳನ್ನು ಬರೆದಿರುವ ಇವರು ಕನ್ನಡದ ಪ್ರಮುಖ ಕಥೆಗಾರರೆಂದು ಗುರುತಿಸಲ್ಪಟ್ಟಿರುತ್ತಾರೆ.
ಸೃಜನಶೀಲ ಗದ್ಯ ಕೃತಿಗಳಿಗಾಗಿ ವಿಶೇಷ ಪ್ರಶಸ್ತಿ ಪಡೆದಿರುವ ಇವರ ಸ್ವಾತಂತ್ರದ ಓಟ ಎಂಬ ೧೧೧೧ ಪುಟಗಳ ಮಹಾ ಕಾದಂಬರಿಯು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿರುತ್ತದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಸರಕಾರದ ರಾಜ್ಯೋತ್ಸವ ಪ್ರಶಸ್ತಿ ಸನ್ಮಾನಿತರಾದ ಇವರು ಮಕ್ಕಳ ಸಾಹಿತ್ಯ, ಕನ್ನಡ ಕಾದಂಬರಿ, ಸಾಹಿತ್ಯ ಕೃತಿಗಳು ಗದ್ಯ ಕೃತಿಗಳ ಮೂಲಕ ಕನ್ನಡ ಸಾಹಿತ್ಯ ಲೋಕಕ್ಕೆ ನೀಡಿದ ಕೊಡುಗೆಗಳು ಅನೇಕ.
2. ಸಂದೇಶ ಕೊಂಕಣಿ ಸಾಹಿತ್ಯ ಪ್ರಶಸ್ತಿ- ಶ್ರೀ ವಲ್ಲಿ ವಗ್ಗ (ಶ್ರೀ ವಲೇರಿಯನ್ ಡಿ’ಸೋಜ)
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ವಗ್ಗದಲ್ಲಿ ೧೯೪೭ ದಲ್ಲಿ ಜನಿಸಿದ ಶ್ರೀ ವಲೇರಿಯನ್ ಡಿ’ಸೋಜ ಇವರು ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ವಲ್ಲಿ ವಗ್ಗ ಎಂದೇ ಪ್ರಸಿದ್ದರು. ವೃತ್ತಿಯಲ್ಲಿ ಕೈಗಾರಿಕೋದ್ಯಮಿ ಆಗಿದ್ದ ಇವರು ಈಗ ವೃತ್ತಿಯಿಂದ ನಿವೃತ್ತಿಗೊಂಡು ತಮ್ಮ ಸಾಹಿತ್ಯ ಸೇವೆಯನ್ನು ಮುಂದುವರೆಸುತ್ತಿದ್ದಾರೆ. ಕಳೆದ ೫೫ ವರ್ಷಗಳಿಂದ ವಿವಿಧ ಕೊಂಕಣಿ ಪತ್ರಿಕೆಗಳಲ್ಲಿ, ಪುಸ್ತಕಗಳಲ್ಲಿ ಹಾಗೂ ವೆಬ್ಸೈಟ್‌ಗಳಲ್ಲಿ ಇವರು ಬರೆದ ೧೫೦ ಸಣ್ಣ ಕಥೆಗಳು, ೧೪೦ ಕವಿತೆಗಳು, ೧೨೦ ಲೇಖನಗಳು ಪ್ರಕಟಣೆಗೊಂಡಿರುತ್ತವೆ. ಇವರು ಕೊಂಕಣಿಯಲ್ಲಿ ಬರೆದ ಸರಿಸುಮಾರು ೪೦ ಕಥೆಗಳು ಕನ್ನಡಕ್ಕೆ ಅನುವಾದಗೊಂಡು ಪ್ರಸಿದ್ದ ಪತ್ರಿಕೆಗಳಲ್ಲಿ ಪ್ರಕಟಗೊಂಡಿರುತ್ತವೆ.
ಶ್ರೀ ವಲ್ಲಿ ವಗ್ಗ ಇವರು ಬರೆದ ೮ ಪುಸ್ತಕಗಳು ಪ್ರಕಟಗೊಂಡಿರುತ್ತವೆ. ಇವರು ಬರೆದ ‘ಖಾಂದಿಖುರಿಸ್’ ಕೊಂಕಣಿ ನಾಟಕವು ಈಗಾಗಲೇ ೧೩ ಪ್ರದರ್ಶನಗಳನ್ನು ಕಂಡಿರುತ್ತದೆ. ಅಲ್ಲದೆ ಪ್ರಸಿದ್ದ ಅಂಕಣಕಾರರಾಗಿರುವ ಇವರ ಅಂಕಣ ಲೇಖನಗಳು ಇಂದಿಗೂ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಳ್ಳುತ್ತಿವೆ.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ, ಕೊಂಕ್ಣಿ ಕುಟಾಮ್ ಬಾಹ್ರೇಯ್ನ್ ಹಾಗೂ ದಾಯ್ಜಿದುಬಾಯ್ ಪ್ರಶಸ್ತಿಗಳಿಂದ ಸನ್ಮಾನಿತರಾದ ಇವರು ಕೊಂಕಣಿ ಸಾಹಿತ್ಯ ಕ್ಷೇತ್ರದಲ್ಲಿ ಬರವಣಿಗೆಯೊಂದಿಗೆ ಅನೇಕ ಕೊಂಕಣಿ ಸಾಹಿತ್ಯ ಸಂಬಂಧಿತ ಸಂಘ ಸಂಸ್ಥೆಗಳಲ್ಲಿ ಗುರುತರ ಪ್ರತಿನಿಧಿತ್ವ ವಹಿಸಿ ಕೊಂಕಣಿ ಸಾಹಿತ್ಯ ಕ್ಷೇತ್ರಕ್ಕೆ ಸೇವೆಯನ್ನು ಸಲ್ಲಿಸುತ್ತಿದ್ದಾರೆ.
3. ಸಂದೇಶ ಮಾಧ್ಯಮ ಪ್ರಶಸ್ತಿ: ಶ್ರೀ ಶಿವಕುಮಾರ್
ಪ್ರಸ್ತುತ ಬೆಂಗಳೂರಿನಲ್ಲಿ ವಾಸವಾಗಿರುವ ಶ್ರೀ ಶಿವಕುಮಾರ್ ಇವರದು ಇಂಜಿನಿಯರಿಂಗ್ ವೃತ್ತಿಯಾದರೆ ಸಾಹಿತ್ಯ ಇವರ ಪ್ರವೃತ್ತಿಯಾಗಿರುತ್ತದೆ. ರಾ. ಶಿ. ಯವರನಂತರ ಅಪರಂಜಿ ನಗೆ ಮಾಸಿಕ ಪತ್ರಿಕೆಯನ್ನು ಪ್ರಾರಂಭಿಸಿ ಕಳೆದ ೩೨ ವರ್ಷಗಳಿಂದ ಸಂಪಾದಕರಾಗಿ ಪತ್ರಿಕೆಯನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಕಳೆದ ೨ ದಶಕಗಳಿಂದ ಸಾಹಿತ್ಯ ಕೃಷಿಯನ್ನು ನಡೆಸುತ್ತಿದ್ದು ಈಗಾಗಲೆ ೧೨ ಪುಸ್ತಕಗಳನ್ನು ಬರೆದಿರುತ್ತಾರೆ. ಹಾಸ್ಯ ಸಾಹಿತ್ಯ ಮತ್ತು ವಿಜ್ಞಾನ ಇವರಿಗೆ ಪ್ರಿಯವಾದ ಪ್ರಕಾರಗಳಾಗಿದ್ದು ಸೃಜನಶೀಲತೆ ಹಾಗೂ ಹಾಸ್ಯದೊಂದಿಗೆ ಜನ ಸಾಮನ್ಯರಿಗೆ ಪ್ರಚಲಿತ ವಿಚಾರಗಳನ್ನು ತಲುಪಿಸುತ್ತಿದ್ದಾರೆ.
ಇವರು ನಗೆ ಸಾಹಿತ್ಯಕ್ಕಾಗಿ ಕರ್ನಾಟಕ ಸಾಹಿತ್ಯ ಅಕಾಡಮಿ ಪುರಸ್ಕಾರ ಪಡೆದಿರುತ್ತಾರೆ.
4. ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ – ಶ್ರೀಮತಿ ಹೆಲೆನ್ ಡಿ’ಕ್ರೂಜ್
ಯೆ.. ಯೆ.. ಕತ್ರಿನಾ… ಖ್ಯಾತಿಯ ಶ್ರೀಮತಿ ಹೆಲೆನ್ ಡಿ’ಕ್ರೂಜ್ ಇವರು ತಮ್ಮ ಸುಮಧುರ ಕಂಠದಿಂದ ಅನೇಕ ಕೊಂಕಣಿ ಹಾಡುಗಳ ಮೂಲಕ ದೇಶ ವಿದೇಶದಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುತ್ತಾರೆ. ಸಂಗೀತ ಕುಟುಂಬದಲ್ಲಿಯೇ ಹುಟ್ಟಿ ಬೆಳದ ಇವರ ಸಂಗೀತ ಪಯಣವು ಆಫ್ರಿಕಾ – ಮಂಗಳೂರು – ಮುಂಬಯ್ – ಕುವೈಟ್‌ಗಳಲ್ಲಿ ನಡೆದು, ‘ಸುರ್ಯಾಚಿಂ ಕಿರ್ಣಾಂ’ ಎಂಬ ಪ್ರಥಮ ಹಾಡನ್ನು ೧೯೬೧ ರಲ್ಲಿ ರೇಡಿಯೊದಲ್ಲಿ ಹಾಡಿದ ಇವರು ರೇಷ್ಮೆಯಂತಹ ನುಣುಪಾದ ಹಾಗೂ ಇಂಪಾದ ಹಾಡುಗಾರಿಕೆಯ ಮೂಲಕ ಸಂಗೀತ ಪ್ರೇಮಿಗಳ ಮನಸೂರೆಗೊಂಡಿರುತ್ತಾರೆ.
ಚಂದ್ರೆಮ್ ಉದೆವ್ನ್, ಸೆಜಾರಿ, ಘರಾಚೊ ದಿವೊ, ಸಂಜೆಚ್ಯಾ ವೆಳಾರ್ ಇವರ ಪ್ರಸಿದ್ಧ ಇತರ ಗೀತೆಗಳಾಗಿದ್ದು ಇವರು ರಾಷ್ಟ್ರ ಹಾಗೂ ಅಂತರಾಷ್ಟ್ರ ಮಟ್ಟದಲ್ಲಿ ಅನೇಕ ಯಶಸ್ವಿ ಸಂಗೀತ ಪ್ರದರ್ಶನಗಳನ್ನು ನೀಡಿರುತ್ತಾರೆ. ೧೯೯೦ ರಲ್ಲಿ ಕುವೈಟ್‌ನಲ್ಲಿ ಇರುವ ಕೊಂಕಣಿ ಹಾಡುಗಾರರನ್ನು ಸಂಘಟಿಸಿ, ತಾರಾಂ ಆನಿ ಲಾರಾಂ ಎಂಬ ಸಿ.ಡಿ.ಯನ್ನು ಹೊರತಂದಿರುತ್ತಾರೆ.
5. ಸಂದೇಶ ಕಲಾ ಪ್ರಶಸ್ತಿ- ಡಾ| ಕೆ. ಎಸ್. ಪವಿತ್ರ
ಡಾ| ಕೆ. ಎಸ್. ಪವಿತ್ರ ಇವರು ಖ್ಯಾತ ಮನೋವೈದ್ಯೆ, ಸಂಶೋಧಕಿ, ಕಲಾವಿದೆ, ನೃತ್ಯ ಸಂಯೋಜಕಿ, ಸಮರ್ಥ ಆಯೋಜಕಿ ಹಾಗೂ ನೃತ್ಯ ಗುರುಗಳಾಗಿದ್ದು ಶಿವಮೊಗ್ಗೆಯಲ್ಲಿದ್ದುಕೊಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಕ್ರೀಯಾಶೀಲಾರಾಗಿರುತ್ತಾರೆ. ಭರತನಾಟ್ಯದಲ್ಲಿ ವಿದ್ವತ್ ಪದವಿ ಪಡೆದಿರುವ ಇವರು, ಶ್ರೀ ವಿಜಯ ಕಲಾನಿಕೇತನ (ರಿ) ಶಿವಮೊಗ್ಗ ಇದರ ನಿರ್ದೇಶಕರಾಗಿ ಕಲಾ ಸೇವೆಯನ್ನು ನೀಡುತ್ತಿದ್ದಾರೆ.
ಭರತನಾಟ್ಯ ಕಲಾವಿದೆ – ಸಂಯೋಜಕಿಯಾಗಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ವೇದಿಕೆಗಳಲ್ಲಿ ಡಾ| ಕೆ. ಎಸ್. ಪವಿತ್ರ ಇವರು ನಿರ್ದೇಶಿಸಿ ಪ್ರಸ್ತುತ ಪಡಿಸಿರುವ ನೃತ್ಯರೂಪಕಗಳು ಸಂಶೋಧನಾತ್ಮಕ – ಸೃಜನಶೀಲ ನೆಲೆಯಲ್ಲಿ ರೂಪುಗೊಂಡಿರುತ್ತವೆ.
ಹಲವು ರಾಷ್ಟ್ರೀಯ, ರಾಜ್ಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿರುವ ಇವರು ಭಾರತ ಸರಕಾರದ ಅಂತರಾಷ್ಟ್ರೀಯ ಉತ್ಸವದಲ್ಲಿ ಪಾಲ್ಗೊಳ್ಳಲು ಆಯ್ಕೆಯಾಗಿರುವ ೨೫ ರಾಷ್ಟ್ರೀಯ ಕಲಾವಿದರಲ್ಲಿ ಒಬ್ಬರಾಗಿರುತ್ತಾರೆ.
6. ಸಂದೇಶ ಶಿಕ್ಷಣ ಪ್ರಶಸ್ತಿ – ಶ್ರೀಮತಿ ಜುಸ್ತಿನ್ ಡಿ’ಸೋಜ
ದಾವಣೆಗೆರೆಯ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾಗಿ ಕಳೆದ ಐದು ದಶಕಗಳಿಂದ ಸೇವೆ ಸಲ್ಲಿಸುತ್ತಿರುವ ಇವರು ಶಿಕ್ಷಣದೊಂದಿಗೆ ಕ್ರೀಡೆ, ಸಾಂಸ್ಕೃತಿಕ, ವೈಜ್ಞಾನಿಕ ಮತ್ತು ಕಲಾ ಪ್ರದರ್ಶನಗಳಿಗೆ ಮುಕ್ತ ವೇದಿಕೆ ಕಲ್ಪಿಸಿ ಮಕ್ಕಳಲ್ಲಿ ನಾಯಕತ್ವಗುಣಗಳನ್ನು ಬೆಳೆಸಲು ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಿರುತ್ತಾರೆ.
ಇವರು ತಮ್ಮ ಶಿಕ್ಷಣ ಸಂಸ್ಥೆಯನ್ನು ಪರಿಸರ ಸ್ನೇಹಿ ಹಾಗೂ ಕಸಮುಕ್ತ ಶಾಲೆ ಎಂದು ಗುರುತಿಸುವಲ್ಲಿ ವಿಶೇಷ ಶ್ರಮ ವಹಿಸಿರುತ್ತಾರೆ. ಅನೇಕ ಸಾಹಿತ್ಯ ಸಂಘಟನೆಗಳ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಿದ್ದಗಂಗೆಯ ಸಿರಿ ಎಂಬ ಪುಸ್ತಕವನ್ನು ಪ್ರಕಟಿಸಿರುತ್ತಾರೆ. ಅನೇಕ ಸವಾಲುಗಳನ್ನು ಮೆಟ್ಟಿಲಾಗಿಸಿಕೊಂಡು ಹಂತಹಂತವಾಗಿ ಬೆಳೆದು ಬಂದಿರುತ್ತಾರೆ.
ಇವರ ಅವಿರತ ಶ್ರಮಕ್ಕಾಗಿ ಕಾಯಕ ಸೇವಾಧುರೀಣೆ, ಶಿಕ್ಷಣ ಶ್ರೀ, ಶಿಕ್ಷಣ ಸಿರಿ, ಶ್ರಮಿಕ ಮಹಿಳೆ, ಶಾರದ, ಅವ್ವ, ಕಾಯಕ ಶ್ರೀ, ವೃತ್ತಿ ಚೈತನ್ಯ ರತ್ನ, ಶಿಕ್ಷಣ ಶಿರೋಮಣಿ, ವಿದ್ಯಾಧರೆ ಸರಸ್ವತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿಯೊಂದಿಗೆ ಅನೇಕ ಪ್ರಶಸ್ತಿಗಳಿಂದ ಸನ್ಮಾನಿತರಾಗಿರುತ್ತಾರೆ.
7. ಸಂದೇಶ ವಿಶೇಷ ಪ್ರಶಸ್ತಿ – ಸಾಧನೆ – ಶ್ರೀ ವಿನ್ಸೆಂಟ್ ಪ್ರಕಾಶ್ ಕಾರ್ಲೊ
ಮಂಗಳೂರಿನ ಶ್ರೀ ವಿನ್ಸೆಂಟ್ ಪ್ರಕಾಶ್ ಕಾರ್ಲೊರವರು ಪ್ರಸಿದ್ಧ ದೇಹದಾರ್ಡ್ಯ ಪಟುವಾಗಿದ್ದು ಅನೇಕ ಯುವಕರ ಪ್ರೇರಣಾ ಶಕ್ತಿಯಾಗಿರುತ್ತಾರೆ. ಇವರು ಅಂತರಾಷ್ಟ್ರೀಯ ಮಟ್ಟದ ೧೧ ಪವರ್ ಲಿಫ್ಟಿಂಗ್ ಸ್ಪರ್ಧೆಗಳಲ್ಲಿ ನಮ್ಮ ದೇಶವನ್ನು ಪ್ರತಿನಿಧಿಸಿ ೨ ಚಿನ್ನ, ೧ ಬೆಳ್ಳಿ, ೨ ಕಂಚಿನ ಪದಕ ಪಡೆದಿರುತ್ತಾರೆ. ಅಲ್ಲದೆ ರಾಷ್ಟ್ರಮಟ್ಟದ ೨೪ ಸ್ಪರ್ಧೆಗಳಲ್ಲಿ ಹಾಗೂ ರಾಜ್ಯಮಟ್ಟದ ೨೮ ಸ್ಪರ್ಧೆಗಳಲ್ಲಿ ಭಾಗವಹಿಸಿ ೨೮ ಚಿನ್ನ, ೧೭ ಬೆಳ್ಳಿ ಹಾಗೂ ೭ ಕಂಚಿನ ಪದಕಗಳನ್ನು ಪಡೆದು ನಮ್ಮ ನಾಡಿಗೆ ಹಾಗೂ ದೇಶಕ್ಕೆ ಕೀರ್ತಿಯನ್ನು ತಂದಿರುತ್ತಾರೆ.
ಸ್ಟ್ರಾಂಗ್ ಮ್ಯಾನ್ ಆಫ್ ಇಂಡಿಯಾ, ಸ್ಟ್ರಾಂಗ್ ಮ್ಯಾನ್ ಆಫ್ ಸೌತ್ ಇಂಡಿಯಾ ಬಿರುದಿನೊಂದಿಗೆ ತಲಾ ೨ ಬಾರಿ ಗೌರವಿಸಲ್ಪಟ್ಟಿರುತ್ತಾರೆ.
Comments are closed.