ಮಂಗಳೂರು ಜನವರಿ 03 : 2019-20ನೇ ಸಾಲಿನ ಕರಾವಳಿ ಉತ್ಸವದ ಅಂಗವಾಗಿ ದ. ಕ. ಜಿಲ್ಲಾಡಳಿತ, ಕರಾವಳಿ ಉತ್ಸವ ಕ್ರೀಡಾ ಸಮಿತಿ ಇದರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಕ್ರೀಡೋತ್ಸವ ಜನವರಿ 11 ರಂದು ಬೆಳಿಗ್ಗೆ 9 ಗಂಟೆಗೆ ನಡೆಯಲಿದೆ.
ಕ್ರೀಡೆಗಳ ವಿವರ ಇಂತಿವೆ :
ಮಂಗಳೂರು ನೆಹರೂ ಮೈದಾನದಲ್ಲಿ ದ.ಕ ಜಿಲ್ಲಾ ಪ್ರೌಢ ಶಾಲಾ ಬಾಲಕರಿಗೆ ಫುಟ್‍ಬಾಲ್ ಪಂದ್ಯಾಟ, ಮಂಗಳಾ ಕ್ರೀಡಾಂಗಣದಲ್ಲಿ ಜಿಲ್ಲಾ ಪದವಿ ಕಾಲೇಜು ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ವಾಲಿಬಾಲ್ ಪಂದ್ಯಾಟ ಮತ್ತು ಜಿಲ್ಲಾ ಪ್ರೌಢ ಶಾಲಾ ಬಾಲಕಿಯರಿಗೆ ತ್ರೋಬಾಲ್ ಪಂದ್ಯಾಟ, ಯು. ಶ್ರೀನಿವಾಸ ಮಲ್ಯ ಒಳಾಂಗಣ ಕ್ರೀಡಾಂಗಣ ಮಂಗಳೂರಿನಲ್ಲಿ ಜಿಲ್ಲಾ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರಿಗೆ ಕುಸ್ತಿ ಪಂದ್ಯಾಟ, ಮಂಗಳಾ ಕ್ರೀಡಾಂಗಣ (ಹೊರಾಂಗಣ ಬಾಸ್ಕೆಟ್‍ಬಾಲ್ ಅಂಕಣ)ದಲ್ಲಿ ಜಿಲ್ಲೆಯ ಪುರುಷ ಹಾಗೂ ಮಹಿಳೆಯರಿಗೆ ಮುಕ್ತ ಬಾಸ್ಕೆಟ್ಬಾಲ್ ಪಂದ್ಯಾಟ ನಡೆಯಲಿದೆ.
ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಲು ಇಚ್ಚಿಸುವ ಕ್ರೀಡಾಪಟುಗಳು ತಮ್ಮ ಪ್ರವೇಶ ಪತ್ರವನ್ನು ಸಂಸ್ಥೆಯ ಮುಖ್ಯಸ್ಥರ ಮೂಲಕ ಜನವರಿ 9 ರೊಳಗೆ ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳಾ ಕ್ರೀಡಾಂಗಣ, ಮಂಗಳೂರು ಇವರಿಗೆ ಕಳುಹಿಸಿಕೊಡಬೇಕು. ಸ್ಪರ್ಧಾಳುಗಳು ಸ್ಪರ್ಧೆ ನಡೆಯುವ ದಿನದಂದು ಬೆಳಿಗ್ಗೆ 9 ಗಂಟೆಗೆ ಆಯಾಯ ಸ್ಪರ್ಧೆ ನಡೆಯುವ ಸ್ಥಳದಲ್ಲಿ ಹಾಜರಿರಬೇಕು.
ಹೆಚ್ಚಿನ ಮಾಹಿತಿಗಾಗಿ ಕಚೇರಿ ದೂರವಾಣಿ ಸಂಖ್ಯೆ 0824-2451264 ಸಂಪರ್ಕಿಸಬಹುದು ಎಂದು ಉಪನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಸದಸ್ಯ ಕಾರ್ಯದರ್ಶಿ, ಕರಾವಳಿ ಉತ್ಸವ ಕ್ರೀಡಾ ಸಮಿತಿ, ಮಂಗಳೂರು ಇವರ ಪ್ರಕಟಣೆ ತಿಳಿಸಿದೆ.
Comments are closed.