ಮಂಗಳೂರು : ಕಾಸರಗೋಡಿನ ತುಳು-ಕನ್ನಡಿಗರ ಸ್ನೇಹ ಅನನ್ಯ. ತುಳುವ ನೆಲದವರೇ ಇಲ್ಲಿ ಕನ್ನಡ ಭಾಷೆಯನ್ನು ಕಟ್ಟಿ ಬೆಳೆಸಿದ್ದಾರೆ. ಆದುದರಿಂದಲೇ ಭಾಷೆ ಮತ್ತು ಸಂಸ್ಕೃತಿಗೆ ಪೆಟ್ಟು ಬಿದ್ದಾಗ ನಿರಂತರವಾಗಿ ದಿಟ್ಟತನದಿಂದ ಹೋರಾಟ ಮಾಡುತ್ತಾರೆ. ತುಳು ಕಾವ್ಯಗಳನ್ನು ವಾಚನ ಮತ್ತು ಪ್ರವಚನದ ಮೂಲಕ ಪ್ರಚಾರ ಪಡಿಸುತ್ತಿರುವುದು ತುಳು ಭಾಷೆಯ ಬೆಳವಣಿಗೆಗೆ ಒಂದು ಉತ್ತಮ ವೇದಿಕೆ. ತುಳು ಅಕಾಡೆಮಿಗಳು ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ದಕ್ಷಿಣಕನ್ನಡ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಹೇಳಿದರು.
ಅವರು ತುಳುವರ್ಲ್ಡ್ ಮತ್ತು ಜಾನಪದ ಪರಿಷತ್ ಗಡಿನಾಡ ಘಟಕದ ಸಂಯುಕ್ತಾಶ್ರಯದಲ್ಲಿ ನಡೆದ ಗಡಿನಾಡ ಜಾನಪದ ಮೇಳ ಮತ್ತು ತುಳು ಕಾವ್ಯಯಾನದ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ತುಳುವ ವಾಲ್ಮೀಕಿ ಎಂದು ಹೆಸರು ಪಡೆದ ಮಂದಾರ ಕೇಶವ ಭಟ್ಟರು ಬರೆದ ಬೀರದ ಬೋಲ್ಪು ಕಾವ್ಯದ ಪುಸ್ತಕವನ್ನು ಪ್ರವಚನಕಾರರಿಗೆ ನೀಡಿ ಉದ್ಘಾಟಿಸಿದರು.
ಕರ್ನಾಟಕ ಜಾನಪದ ಪರಿಷತ್ ಗಡಿನಾಡ ಘಟಕದ ಅಧ್ಯಕ್ಷ ಎ. ಆರ್. ಸುಬ್ಬಯ ಕಟ್ಟೆ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಮಂಜೇಶ್ವರ ಶಾಸಕ ಎಂ. ಸಿ. ಕಮರುದ್ದೀನ್. ಡಾ. ತಲ್ಲೂರು ಶಿವರಾಮ ಶೆಟ್ಟಿ, ಪೈವಳಿಕೆ ಅರಮನೆಯ ರಂಗ ತ್ರಯ ಬಲ್ಲಾಳ್, ಪ್ರಭಾಕರ ಕಲ್ಲೂರಾಯ ಬನದಗದ್ದೆ, ಪೈವಳಿಕೆ ಪಂಚಾಯತ್ ಅಧ್ಯಕ್ಷೆ ಭಾರತಿ ಜೆ ಶೆಟ್ಟಿ, ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ. ಕೆ. ಎಂ. ಅಶ್ರಫ್, ಅಜಿತ್ ಎಂ. ಸಿ. ಲಾಲ್ ಬಾಗ್, ಪ್ರೊ. ಎ. ಶ್ರೀನಾಥ್ ಕಾಸರಗೋಡು, ಮೊದಲಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಡಾ. ಮೂಡಂಬೈಲು ರವಿ ಶೆಟ್ಟಿ ಕತಾರ್, ಲಯನ್ ಗೋಪಾಲ ಸಿ. ಬಂಗೇರ ಉಡುಪಿ, ಜ್ಯೋತಿಷ್ಯ ರತ್ನ ಶ್ರೀ ಅಶೋಕ ಪುರೋಹಿತ ಮುಂಬೈ ಮೊದಲಾದವರಿಗೆ ಗಡಿನಾಡ ಸಿರಿ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ತುಳು ಕಾವ್ಯವಾಚನದಲ್ಲಿ ತುಳುವ ವಾಲ್ಮೀಕಿ ಶ್ರೀ ಮಂದಾರ ಕೇಶವ ಭಟ್ ಬರೆದ ಬೀರದ ಬೋಲ್ಪು ಕಾವ್ಯದ ಆಯ್ದ ಪದ್ಯಗಳನ್ನು ಶಿವಪ್ರಸಾದ್ ಎಡಪದವು ಮತ್ತು ಶಾಲಿನಿ ಹೆಬ್ಬರ್ ವಾಚಿಸಿದರು. ಡಾಕ್ಟರ್ ದಿನಕರ ಪಚ್ಚನಾಡಿ ಅವರು ಪ್ರವಚಸಿದರು. ಡಾ. ರಾಜೇಶ್ ಆಳ್ವ ಬದಿಯಡ್ಕ ತುಳು ಕಾವ್ಯಯಾನದ ಉದ್ದೇಶ ಲಕ್ಷ್ಯಗಳನ್ನು ತಿಳಿಸಿದರು. ಬಳಿಕ ಕೇರಳ ಕರ್ನಾಟಕದ ವಿವಿಧ ಜಾನಪದ ತಂಡಗಳಿಂದ ಜಾನಪದ ಕಲಾ ಪ್ರದರ್ಶನ ನಡೆಯಿತು.
Comments are closed.