ಮಂಗಳೂರು,ಜನವರಿ, 08: ಮೇ 30ರಂದು ಅಡ್ಯಾರ್‌ಗಾರ್ಡನ್‌ನಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಐದನೇ ವರ್ಷದ ಪಟ್ಲ ಸಂಭ್ರಮಾಚರಣೆಯಲ್ಲಿ ಹವ್ಯಾಸಿ ಯಕ್ಷಗಾನ ಕಲಾವಿದರಿಗೆ ಸ್ಪರ್ಧೆಯನ್ನು ಆಯೋಜಿಸಲಾಗುವುದು ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ತಿಳಿಸಿದ್ದಾರೆ.
ಬಲ್ಲಾಳ್ ಬಾಗ್‌ನಲ್ಲಿರುವ ಪತ್ತುಮುಡಿ ಸೌಧದಲ್ಲಿ ಜರಗಿದ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸಭೆಯಲ್ಲಿ ಮಾತನಾಡಿದ ಪಟ್ಲ ಸತೀಶ್ ಶೆಟ್ಟಿ ಅವರು ೫ನೇ ವರ್ಷದ ಪಟ್ಲ ಸಂಭ್ರಮವನ್ನು ವಿಭಿನ್ನ ರೀತಿಯಲ್ಲಿ ನಡೆಸುವ ಕುರಿತು ಸಭೆಯಲ್ಲಿ ಚರ್ಚಿಸಿದರು.
ಬಡಗು ಮತ್ತು ತೆಂಕು ತಿಟ್ಟು ವಿಭಾಗದಲ್ಲಿ ಹವ್ಯಾಸಿ ಕಲಾವಿದರಿಗೆ ಒಂದು ಉತ್ತಮ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಪಟ್ಲ ಫೌಂಡೇಶನ್ ಟ್ರಸ್ಟ್ ಕಲಾವಿದರಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ.
ಯಕ್ಷಗಾನ ಬೇರೊಂದು ದಿಕ್ಕಿನಲ್ಲಿ ಸಾಗುತ್ತಿದ್ದು, ಯಕ್ಷಗಾನ ಪರಂಪರೆಯನ್ನು ಉಳಿಸಿಕೊಳ್ಳಲು ಹವ್ಯಾಸಿ ಕಲಾವಿದರನ್ನು ಉತ್ತೇಜಿಸಿ ಅವರಿಗೊಂದು ಅವಕಾಶ ನೀಡಲಾಗುತ್ತದೆ. ಆ ಮೂಲಕ ಯಕ್ಷಗಾನ ಪರಂಪರೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ಸ್ಪರ್ಧೆಯಲ್ಲಿ ಬಹುತೇಕ ಹವ್ಯಾಸಿ ಕಲಾವಿದರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲು ಅವಕಾಶವಿರುತ್ತದೆ ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.
ಆಸಕ್ತ ಹವ್ಯಾಸಿ ತಂಡಗಳು ಫೆಬ್ರವರಿ ತಿಂಗಳ ಒಳಗೆ ಹೆಸರನ್ನು ನೋಂದಾಯಿಸಬೇಕು. ಸ್ಪರ್ಧೆಯ ರೀತಿ ನಿಯಮಾವಳಿಗಳನ್ನು ಸದ್ಯದಲ್ಲೇ ತಿಳಿಸಲಾಗುವುದು. ಸ್ಪರ್ಧೆಯು ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಕಾರಣ ಅನೇಕ ತಂಡಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಅವರು ತಿಳಿಸಿದರು.
ಯಕ್ಷಗಾನಕ್ಕೆ ಆಗಬೇಕಾದ ಕೆಲಸಗಳು ಇನ್ನೂ ಬಹಳಷ್ಟಿದೆ. ಪಟ್ಲ ಫೌಂಡೇಶನ್ ಟ್ರಸ್ಟ್ ಆ ದಿಕ್ಕಿನಲ್ಲಿ ಕೆಲಸ ಮಾಡುತ್ತದೆ. ಪಟ್ಲ ಸಂಭ್ರಮ ಅಂದರೆ ಅದೊಂದು ಉತ್ಸವ, ಎಲ್ಲಾ ಕಲಾವಿದರು ಸ್ವಯಂಪ್ರೇರಿತರಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿದೆ ಎಂದು ಯಕ್ಷಗಾನ ವಿಮರ್ಶಕ, ಕಲಾವಿದ ಡಾ. ಪ್ರಭಾಕರ ಜೋಶಿ ತಿಳಿಸಿದರು.
ಸ್ಪರ್ಧೆ ಇದ್ದಾಗ ಕಲಾವಿದರು ತಯಾರಾಗುತ್ತಾರೆ, ತಂಡ ತಯಾರಾಗುತ್ತದೆ. ಹವ್ಯಾಸಿ ಬಳಗ ಮತ್ತು ಉದಯೋನ್ಮುಖ ಕಲಾವಿದರಿಗೊಂದು ಅವಕಾಶ ಕಲ್ಪಿಸಲು ಇದೊಂದು ಉತ್ತಮ ವೇದಿಕೆ ಎಂದು ಯಕ್ಷಗಾನ ಅಕಾಡೆಮಿ ಸದಸ್ಯ, ಪಟ್ಲ ಫೌಂಡೇಶನ್ ಟ್ರಸ್ಟ್‌ನ ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ತಿಳಿಸಿದರು.
ಸಭೆಯಲ್ಲಿ ಸರಪಾಡಿ ಅಶೋಕ ಶೆಟ್ಟಿ , ಸಂಜಯಕುಮಾರ್ ಶೆಟ್ಟಿ, ರಘುರಾಮ ಶೆಟ್ಟಿ ಬೆಳ್ತಂಗಡಿ, ಫ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ಸುಮಂಗಲ ಭಟ್, ಪೂರ್ಣಿಮಾ ಯತೀಶ್ ರೈ ಮೊದಲಾದವರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಟ್ರಸ್ಟ್‌ನ ಉಪಾಧ್ಯಕ್ಷ ಮನುರಾವ್, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ, ಜತೆ ಕಾರ್ಯದರ್ಶಿ ರಾಜೀವ ಪೂಜಾರಿ ಕೈಕಂಬ, ಕೋಶಾಧಿಕಾರಿ ಸುದೇಶ್ ಕುಮಾರ್ ರೈ, ಭುಜಬಲಿ ಧರ್ಮಸ್ಥಳ, ಸವಣೂರು ಸೀತಾರಾಮ ರೈ, ನಿತ್ಯಾನಂದ ಶೆಟ್ಟಿ, ನಿಟ್ಟೆ ಗುತ್ತು ರವಿರಾಜ್ ಶೆಟ್ಟಿ, ಜಯರಾಮ ಶೇಖ, ಕೆಂದ್ರಿಯಾ ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ಮೊಲದಲಾದವರು ಉಪಸ್ಥಿತರಿದ್ದರು. ಪುರುಷೋತ್ತಮ ಭಂಡಾರಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Comments are closed.