ಮಂಗಳೂರು, ಜನವರಿ.15: ಕೇಂದ್ರ ಸರಕಾರ ಜಾರಿಗೊಳಿಸಲು ಉದ್ದೇಶಿಸಿರುವ ಎನ್‌ಆರ್‌ಸಿ, ಸಿಎಎ, ಎನ್‌ಪಿಆರ್ ವಿರುದ್ಧ ದ.ಕ. ಮತ್ತು ಉಡುಪಿ ಜಿಲ್ಲಾ ‘ದಿ ಮುಸ್ಲಿಂ ಸೆಂಟ್ರಲ್ ಕಮಿಟಿ’ಯ ನೇತೃತ್ವ ಹಾಗೂ ಸಮಾನ ಮನಸ್ಕ ಸಂಘಟನೆಗಳ ಸಹಯೋಗದಲ್ಲಿ ಜ.15ರಂದು ಅಪರಾಹ್ನ 2:30ಕ್ಕೆ ನಡೆಯುವ ಪ್ರತಿಭಟನಾ ಸಮಾವೇಶಕ್ಕೆ ಅಡ್ಯಾರ್ ಕಣ್ಣೂರು ರಾಷ್ಟ್ರೀಯ ಹೆದ್ದಾರಿ ಬಳಿಯ ಶಹಾ ಗಾರ್ಡನ್ ಮೈದಾನ ಸಜ್ಜಾಗಿದ್ದು, ಸಮಾವೇಶದಲ್ಲಿ ಸುಮಾರು ಒಂದು ಲಕ್ಷಕ್ಕಿಂತ ಅಧಿಕ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಎಂದು ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.
ಅಡ್ಯಾರ್ ಕಣ್ಣೂರಿನ ಮೈದಾನದಲ್ಲಿ ಸುಮಾರು 1 ಲಕ್ಷ ಮಂದಿಯ ಸಮ್ಮುಖದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಜಿ ಕೆ.ಎಸ್. ಮುಹಮ್ಮದ್ ಮಸೂದ್ ಅಧ್ಯಕ್ಷತೆಯಲ್ಲಿ ನಡೆಯುವ ಈ ಪ್ರತಿಭಟನಾ ಸಮಾವೇಶದಲ್ಲಿ ‘ನಾವು ಭಾರತೀಯರು’ ತಂಡದ ನಿವೃತ್ತ ಐಎಎಸ್ ಅಧಿಕಾರಿಗಳಾದ ಹರ್ಷ ಮಂದರ್ ಮತ್ತು ಕಣ್ಣನ್ ಗೋಪಿನಾಥನ್, ವಿಶ್ರಾಂತ ನ್ಯಾಯಮೂರ್ತಿ ಗೋಪಾಲಗೌಡ, ಮಾನವ ಹಕ್ಕುಗಳ ಹೋರಾಟಗಾರ ಶಿವಸುಂದರ್, ನ್ಯಾಯವಾದಿ ಸುಧೀರ್ ಕುಮಾರ್ ಮುರೊಳಿ ಮುಖ್ಯ ಭಾಷಣ ಮಾಡಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಖಾಝಿಗಳಾದ ಅಲ್‌ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್, ಅಲ್‌ಹಾಜ್ ಬೇಕಲ ಇಬ್ರಾಹೀಂ ಮುಸ್ಲಿಯಾರ್, ಸೈಯದ್ ಫಝಲ್ ಕೋಯಮ್ಮ ತಂಙಳ್, ದ.ಕ. ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಅಧ್ಯಕ್ಷ ಹಾಜಿ ಯುಕೆ ಕಣಚೂರು ಮೋನು, ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ, ಮಂಗಳೂರು ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನಾ, ಕೆಥೋಲಿಕ್ ಸಭಾದ ಅಧ್ಯಕ್ಷ ಪಾವ್ಲ್ ರೂಫಿ ಡಿಕಾಸ್ತಾ, ಶಾಸಕರಾದ ಯುಟಿ ಖಾದರ್, ಬಿಎಂ ಫಾರೂಕ್, ಮಾಜಿ ಶಾಸಕ ಮೊಯ್ದಿನ್ ಬಾವಾ, ಎಸ್‌ವೈಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಡಾ. ಅಬ್ದುರ್ರಶೀದ್ ಝೈನಿ, ಕರ್ನಾಟಕ ಸಮಸ್ತ ಮುಶಾವರ ರಾಜ್ಯ ಕಾರ್ಯದರ್ಶಿ ಯುಕೆ ಅಬ್ದುಲ್ ಅಝೀಝ್ ದಾರಿಮಿ, ಜಮಾಅತೆ ಇಸ್ಲಾಮಿ ಹಿಂದ್ ರಾಜ್ಯ ಕಾರ್ಯದರ್ಶಿ ಮುಹಮ್ಮದ್ ಕುಂಞಿ, ಪಿಎಫ್‌ಐ ರಾಜ್ಯಾಧ್ಯಕ್ಷ ಮುಹಮ್ಮದ್ ಶಾಕಿಬ್, ಎಸ್‌ಕೆಎಸ್‌ಎಂ ದಾವಾ ಕಾರ್ಯದರ್ಶಿ ಎಂಜಿ ಮುಹಮ್ಮದ್, ಯುನಿವೆಫ್ ರಾಜ್ಯಾಧ್ಯಕ್ಷ ರಫೀಉದ್ದೀನ್ ಕುದ್ರೋಳಿ, ಡಿವೈಎಫ್‌ಐ ದ.ಕ. ಜಿಲ್ಲಾಧ್ಯಕ್ಷ ಬಿಕೆ ಇಮ್ತಿಯಾಝ್ ಭಾಗವಹಿಸಲಿದ್ದಾರೆ ಎಂದು ಕೆ.ಎಸ್. ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.
ರಾಷ್ಟ್ರಧ್ವಜಕ್ಕೆ ಮಾತ್ರ ಅವಕಾಶ :
ಒಂದು ಕೈಯಲ್ಲಿ ರಾಷ್ಟ್ರಧ್ವಜ, ಮತ್ತೂಂದರಲ್ಲಿ ಸಂವಿಧಾನ, ಮನದಲ್ಲಿ ಅಹಿಂಸೆ, ಬಾಯಲ್ಲಿ ಜನಗಣ ಮನ ಇದು ಸಮಾವೇಶದ ಧ್ಯೇಯವಾಕ್ಯ. ಸಮಾವೇಶದಲ್ಲಿ ಭಾಗವಹಿಸುವವರು ರಾಷ್ಟ್ರಧ್ವಜ ಮತ್ತು ಮುಸ್ಲಿಮ್ ಸೆಂಟ್ರಲ್ ಕಮಿಟಿ ಸಿದ್ಧಪಡಿಸಿರುವ ಪ್ಲಕಾರ್ಡ್, ಘೋಷಣೆಗಳಿಗೆ ಮಾತ್ರ ಅವಕಾಶವಿದೆ. ಯಾವುದೇ ಪಕ್ಷ, ಸಂಘಟನೆಯ ಧ್ವಜ, ಘೋಷಣೆಗಳಿಗೆ ಅವಕಾಶವಿರುವುದಿಲ್ಲ. ಸಮಾವೇಶದಲ್ಲಿ ಭಾಗವಹಿಸುವವರು ಶಾಂತಿ, ಸಂಯಮ ಪಾಲಿಸಬೇಕು ಮತ್ತು ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು. ಮಹಿಳೆಯರು ಮತ್ತು ಮಕ್ಕಳು ಸಮಾವೇಶದಲ್ಲಿ ಭಾಗವಹಿಸುವ ಆವಶ್ಯಕತೆಯಿಲ್ಲ ಎಂದು ಕೆ.ಎಸ್. ಮುಹಮ್ಮದ್ ಮಸೂದ್ ತಿಳಿಸಿದ್ದಾರೆ.
ಸುಮಾರು 1,300 ಸಮವಸ್ತ್ರಧಾರಿ ಸ್ವಯಂಸೇವಕರು ಕಾರ್ಯನಿರ್ವಹಿಸಲಿದ್ದಾರೆ. ಪ್ರಮುಖ ಗಣ್ಯರ ಆಸನಕ್ಕೆ ಸುಮಾರು 500 ಕುರ್ಚಿಗಳನ್ನು ಮೀಸಲಿಡಲಾಗಿದೆ. ಈ ಮಧ್ಯೆ ಜಿಲ್ಲೆಯ ನಾನಾ ಮೂಲೆಗಳಿಂದ ಪ್ರತಿಭಟನಾ ಸ್ಥಳಕ್ಕೆ ಬರಲು ಬಹುತೇಕ ಮಸೀದಿಗಳ ಆಡಳಿತ ಕಮಿಟಿ, ಸಂಘ-ಸಂಸ್ಥೆಗಳು ಉಚಿತ ವಾಹನಗಳ ವ್ಯವಸ್ಥೆ ಮಾಡಿವೆ ಎಂದವರು ಮಾಹಿತಿ ನೀಡಿದ್ದಾರೆ.
ಎಸ್‌ಡಿಪಿಐ, ಜಮಾಅತೆ ಇಸ್ಲಾಮೀ ಹಿಂದ್, ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನಿ ಯುವ ಜನ ಸಂಘ,ಸುನ್ನಿ ಕೋ ಆರ್ಡಿನೇಶನ್,ಕುದ್ರೋಳಿಯ ಜಮೀಯ್ಯತುಸ್ಸಅದಾ ಸಂಘಟನೆ ಬೆಂಬಲ:
ಸಮಾವೇಶಕ್ಕೆ ದ.ಕ.ಜಿಲ್ಲಾ ಎಸ್‌ಡಿಪಿಐ ಸಂಪೂರ್ಣ ಬೆಂಬಲ ಘೋಷಿಸಿದೆ ಎಂದು ಎಸ್‌ಡಿಪಿಐ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಕರೆ ನೀಡಿದ್ದಾರೆ. ಜಮಾಅತೆ ಇಸ್ಲಾಮೀ ಹಿಂದ್ ದ.ಕ.ಜಿಲ್ಲಾ ಸಮಿತಿ, ಕರ್ನಾಟಕ ಮುಸ್ಲಿಂ ಜಮಾಅತ್, ಸುನ್ನಿ ಯುವ ಜನ ಸಂಘ ರಾಜ್ಯ ಸಮಿತಿ, ಸುನ್ನಿ ಕೋ ಆರ್ಡಿನೇಶನ್ ಕರ್ನಾಟಕ ಮತ್ತಿತರ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದೆ.
ಕುದ್ರೋಳಿ ಕಸಾಯಿ ಖಾನೆ ಬಂದ್: ಅಡ್ಯಾರ್ ಕಣ್ಣೂರಿನಲ್ಲಿ ನಡೆಯುವ ಪ್ರತಿಭಟನೆಯ ಯಶಸ್ಸಿಗಾಗಿ ಕುದ್ರೋಳಿಯ ಕಸಾಯಿ ಖಾನೆಯಲ್ಲಿ ಮಾಂಸದ ಮಾರಾಟ ಪ್ರಕ್ರಿಯೆ ಸ್ಥಗಿತಗೊಳಿಸಲಾಗುವುದು. ಹಾಗಾಗಿ ಎಲ್ಲರೂ ಬುಧವಾರ ಈ ಸಮ್ಮೇಳನವನ್ನು ಯಶಸ್ಸಿಗೊಳಿಸಬೇಕು ಎಂದು ಕುದ್ರೋಳಿಯ ಜಮೀಯ್ಯತುಸ್ಸಅದಾ ಸಂಘಟನೆಯ ಅಧ್ಯಕ್ಷ ಅಲಿ ಹಸನ್ ಕರೆ ನೀಡಿದ್ದಾರೆ.
ಕಾಂಗ್ರೆಸ್ ಬೆಂಬಲ ;
ಮುಸ್ಲಿಂ ಸೆಂಟ್ರಲ್ ಕಮಿಟಿ ನೇತೃತ್ವದಲ್ಲಿ ನಡೆಯುವ ಪ್ರತಿಭಟನೆಗೆ ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಬೆಂಬಲ ಘೋಷಿಸಿದೆ. ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಸದಸ್ಯರು ಸೇರಿದಂತೆ ಕಾರ್ಪೊರೇಟರ್‌ಗಳು, ಜಿಲ್ಲಾ, ತಾಲೂಕು ಮತ್ತು ಗ್ರಾ.ಪಂ. ಸದಸ್ಯರು, ಪಕ್ಷದ ಮುಖಂಡರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ ಎಂದು ಜಿಲ್ಲಾಧ್ಯಕ್ಷ ಕೆ. ಹರೀಶ್ ಕುಮಾರ್ ತಿಳಿಸಿದ್ದಾರೆ.
Comments are closed.