ಕರಾವಳಿ

ಪಾಲಿಕೆ ವೈಫಲ್ಯಗಳ ಕುರಿತು ಕಾಂಗ್ರೇಸ್ ಮುಖಂಡರು ಆತ್ಮಾವಲೋಕನ ಮಾಡಿಕೊಳ್ಳಲಿ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಶೀಘ್ರವೇ ಪರಿಷತ್ ಅಸ್ತಿತ್ವಕ್ಕೆ ಬರಲಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಅವರು ತಿಳಿಸಿದ್ದಾರೆ.

ರಾಜ್ಯದಲ್ಲಿ ಉಪಚುನಾವಣೆಯ ಕಾರಣದಿಂದ ಪಾಲಿಕೆಯ ಆಡಳಿತ ವ್ಯವಸ್ಥೆಯಲ್ಲಿ ವಿಳಂಬವಾಗಿದೆಯೇ ಹೊರತು ಮತ್ತೇನೂ ಅಲ್ಲ. ಆದರೆ ನಮ್ಮ ಮೇಲೆ ಆರೋಪ ಮಾಡುತ್ತಿರುವ ಕಾಂಗ್ರೇಸ್ ಮುಖಂಡರಿಗೆ ಕಳೆದ ಬಾರಿ ಆಡಳಿತ ಚುಕ್ಕಾಣಿ ಹಿಡಿದ ಕಾಂಗ್ರೇಸ್ ಒಂದು ವರ್ಷ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಸದೆ ಕಾಲಹರಣ ಮಾಡಿದ್ದು ಮರೆತು ಹೋಗಿದೆಯೇ ಎಂದು ಶಾಸಕ ಕಾಮತ್ ಪ್ರಶ್ನಿಸಿದ್ದಾರೆ.

ಕಂದಾಯ ವಸೂಲಾತಿ ವಿಚಾರದಲ್ಲಿ ಕಾಂಗ್ರೇಸ್ ಆಡಳಿತ ಸಂಧರ್ಭದಲ್ಲಿ ತನ್ನ ವೈಫಲ್ಯದಿಂದಾಗಿ ಪಾಲಿಕೆಯ ಖಜಾನೆ ತುಂಬಿಸಲು ಸಾಧ್ಯವಾಗಲಿಲ್ಲ ಎನ್ನುವ‌ ಸತ್ಯವನ್ನು ಕಾಂಗ್ರೇಸ್ ಮುಖಂಡರು ಒಪ್ಪಿಕೊಳ್ಳಬೇಕು. ಕಂದಾಯ ವಸೂಲಾತಿಯ ದೃಢವಾದ ದಾಖಲೆಗಳನ್ನು ಸಂರಕ್ಷಿಸುವಲ್ಲಿ ಕಾಂಗ್ರೇಸ್ ವಿಫಲವಾಗಿದೆ. ಹಾಗೂ ಈ ಎಲ್ಲಾ ತಪ್ಪುಗಳನ್ನು ಈಗಷ್ಟೇ ಆಡಳಿತಕ್ಕೆ ಬಂದಿರುವ ನಮ್ಮ ತಲೆಗೆ ಕಟ್ಟುವ ಪ್ರಯತ್ನ ಮಾಡಬೇಡಿ ಎಂದು ತಿರುಗೇಟು ನೀಡಿದ್ದಾರೆ.

ಆರೋಗ್ಯ ಕ್ಷೇತ್ರದಲ್ಲೂ 6-7 ನೇ ಸ್ಥಾನದಲ್ಲಿದ್ದ ಮಂಗಳೂರು ಮಹಾನಗರ ಪಾಲಿಕೆ 152ನೇ ಸ್ಥಾನಕ್ಕೆ ಕುಸಿದಿದೆ ಎನ್ನುವ ಆರೋಪ ವೊಂದನ್ನು ಕಾಂಗ್ರೇಸ್ ಮುಖಂಡರು ಮಾಡಿದ್ದಾರೆ. ಆ ಮೂಲಕ ತಮ್ಮ ಆಡಳಿತದ ಕೊನೆಯ ವರ್ಷದ ಸಾಧನೆಯನ್ನು ಅವರೇ ಜನರ ಮುಂದಿಟ್ಟಿದ್ದಾರೆ. ಆ ಆರೋಪಕ್ಕೂ ನಮಗೂ ಸಂಬಂಧವೇ ಇಲ್ಲ. ಪಾಲಿಕೆಯ ಕಳಪೆ ಸಾಧನೆಗೆ ಕಾಂಗ್ರೇಸ್ ಮುಖಂಡರೇ ಹೊಣೆಗಾರರು. ನಮ್ಮ ಆಡಳಿತಾವಧಿಯ ಪಲಿತಾಂಶವನ್ನು ಮುಂದಿನ ದಿನಗಳಲ್ಲಿ ತೋರಿಸಿಕೊಡುತ್ತೇವೆ ಎಂದು ಶಾಸಕ ಕಾಮತ್ ತಿಳಿಸಿದ್ದಾರೆ.

Comments are closed.