ಮಂಗಳೂರು, ಜನವರಿ.20: ಬಜ್ಪೆ ಕೆಂಜಾರು ಸಮೀಪವಿರುವ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅನುಮಾನಾಸ್ಪದ ಬ್ಯಾಗ್ಗೊಂದು ಸೋಮವಾರ ಪತ್ತೆಯಾಗಿದ್ದು, ಬಾಂಬ್ ಇಟ್ಟಿರುವ ಬಗ್ಗೆ ವದಂತಿ ಹರಡಿದೆ.
ವಿಮಾನ ನಿಲ್ದಾಣದ ಹೊರಭಾಗದ ಪ್ರಯಾಣಿಕರ ವಿಶ್ರಾಂತಿ ಜಾಗದಲ್ಲಿ ಟಿಫಿನ್ ಕ್ಯಾರಿಯರ್ ರೂಪದ ಶಂಕಾಸ್ಪದ ಬ್ಯಾಗ್ ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ನಿಲ್ದಾಣದಲ್ಲಿ ಸಿಕ್ಲಿರುವ ಬ್ಯಾಗ್ನ ಮಾಲಕರು ಯಾರೆಂದು ತಿಳಿದುಬಂದಿಲ್ಲ. ಬಜಪೆ ಪೊಲೀಸರು ಮತ್ತು ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ತಪಾಸಣೆ ನಡೆಸುತ್ತಿದ್ದಾರೆ. ಜೊತೆಗೆ ಬಾಂಬ್ ಸ್ಕ್ವಾಡ್ ನಿಂದ ಸ್ಥಳಕ್ಕೆ ಆಗಮಿಸಿದ್ದು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.
ವಾರಸುದಾರರು ಇಲ್ಲದೇ ಇರುವ ಬ್ಯಾಗ್ ಇರುವುದನ್ನು ಗಮನಿಸಿದ ಪ್ರಯಾಣಿಕರು ಕೂಡಲೇ ಭದ್ರತಾ ಸಿಬ್ಬಂದಿ ಗಮನಕ್ಕೆ ತಂದಿದ್ದಾರೆ. ಬ್ಯಾಗ್ ವಾರಸುದಾರರು ಯಾರು ಎಂಬುವುದು ಇದುವರೆಗೂ ಪತ್ತೆಯಾಗಿಲ್ಲ. ನಿಲ್ದಾಣದಲ್ಲಿ ಸಿಸಿ ಕ್ಯಾಮರಾಗಳನ್ನು ಅಳವಡಿಸಲಾಗಿದ್ದು ಪೊಲೀಸರು ಅದನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ಪ್ರಾಥಮಿಕ ಮಾಹಿತಿಗಳ ಪ್ರಕಾರ ಪತ್ತೆಯಾಗಿರುವ ಬ್ಯಾಗ್ ಲ್ಯಾಪ್ಟಾಪ್ ಬ್ಯಾಗ್ ಎನ್ನಲಾಗಿದ್ದು, ಬ್ಯಾಗ್ ಪರಿಶೀಲನೆ ನಡೆಸಲಾಗುತ್ತಿದ್ದು, ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸರು ಸ್ಥಳವನ್ನು ಸುತ್ತುವರೆದು ತನಿಖೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.
ತಪಾಸಣಾ ಪ್ರಕ್ರಿಯೆ ನಡೆಯುತ್ತಿದೆ. ಬ್ಯಾಗ್ ಯಾರಿಗೆ ಸಂಬಂಧಿಸಿದ್ದು ಎನ್ನುವುದರ ಕುರಿತು ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿರುವುದಾಗಿ ವರದಿಯಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Comments are closed.