ಕರಾವಳಿ

ಅನಧಿಕೃತ ಬಿಪಿಎಲ್ ಕಾರ್ಡ್‌ಗಳನ್ನು ಕೂಡಲೇ ಇಲಾಖೆಗೆ ಹಾಜರುಪಡಿಸದಿದ್ದರೆ ಕಾನೂನು ಕ್ರಮ

Pinterest LinkedIn Tumblr

ಮಂಗಳೂರು ಜನವರಿ 23 : ಬಿಪಿಎಲ್ ಪಡಿತರ ಚೀಟಿ ಪಡೆಯಲು ಸರಕಾರವು ಮಾನದಂಡಗಳನ್ನು ನಿಗದಿ ಪಡಿಸಿದೆ. ಆದರೆ, ಅನೇಕ ಜನರು ಬಿಪಿಎಲ್ ಪಡಿತರ ಚೀಟಿ ಪಡೆಯಲು ಅನರ್ಹರಾಗಿದ್ದರೂ ಸಹ ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆದುಕೊಂಡಿರುವುದು ಕಂಡು ಬಂದಿರುತ್ತದೆ. ಅನರ್ಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ತಾವಾಗಿಯೇ ಇಲಾಖೆಗೆ ಹಾಜರು ಪಡಿಸುವಂತೆ ಅನರ್ಹ ಬಿಪಿಎಲ್ ಪಡಿತರ ಚೀಟಿದಾರರ ಗಮನಕ್ಕೆ ತರುವಂತೆ ಎಲ್ಲಾ ನ್ಯಾಯಬೆಲೆ ಅಂಗಡಿದಾರರಿಗೆ ತಿಳಿಸಲಾಗಿದೆ.

ಗ್ರಾಮ ಪಂಚಾಯತಿ ಕಚೇರಿ ಸೂಚನಾ ಫಲಕದಲ್ಲಿ ಪ್ರಕಟ ಪಡಿಸಲು ಕ್ರಮ ಕೈಗೊಂಡಿದ್ದರೂ, ಕೆಲವೇ ಪಡಿತರ ಚೀಟಿದಾರರು ಮಾತ್ರ ಬಿಪಿಎಲ್ ಪಡಿತರ ಚೀಟಿಯನ್ನು ಕಚೇರಿಗೆ ಹಾಜರು ಪಡಿಸಿರುತ್ತಾರೆ. ಆದಾಗ್ಯೂ ಇನ್ನೂ ನಿಗದಿತ ಮಾನದಂಡಗಳ ಹೊರತಾಗಿ ಅನರ್ಹರು ಹೊಂದಿರುವ ಬಿಪಿಎಲ್ ಪಡಿತರ ಚೀಟಿಗಳನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ವಾಹನಗಳ ಮಾಲಿಕತ್ವದ ಬಗ್ಗೆ ಆರ್‍ಟಿಓ ಡಾಟಾ, ಖಾಸಗಿ/ಸರಕಾರಿ/ನಿಗಮ/ಮಂಡಳಿಗಳ ಸಿಬ್ಬಂದಿಗಳ ಮಾಹಿತಿಯನ್ನು ಪಡೆದು, ಪಡಿತರ ಚೀಟಿಯೊಂದಿಗೆ ಜೋಡಣೆಯಾಗಿರುವ ಆಧಾರ್ ಸಂಖ್ಯೆಯನ್ನು ತಾಳೆ ನೋಡುವುದು, ಕಟ್ಟಡ/ಭೂಮಿ ವಿಸ್ತೀರ್ಣದ ವಿವರದ ಬಗ್ಗೆ ಸಂಬಂಧ ಪಟ್ಟ ಕಛೇರಿಯಿಂದ ಮಾಹಿತಿ ಪಡೆದುಕೊಳ್ಳುವುದು ಇವೇ ಮುಂತಾದ ಕ್ರಮ ಕೈಗೊಳ್ಳಲಾಗುವುದು.

ಈ ಸಂದರ್ಭದಲ್ಲಿ ಕಂಡು ಬಂದ ಅನರ್ಹ ಪಡಿತರ ಚೀಟಿದಾರರ ವಿರುದ್ಧದ ಕರ್ನಾಟಕ (ರೇಷನ್ ಕಾರ್ಡ್ ಅನಧಿಕೃತವಾಗಿ ಸ್ವಾಧೀನಪಡಿಸಿಕೊಳ್ಳುವುದನ್ನು ತಡೆಗಟ್ಟುವುದು) ಆದೇಶ 1977 ರ ಅನ್ವಯ ಕ್ರಮ ಕೈಗೊಳ್ಳಲಾಗುವುದು. ಆದುದರಿಂದ ಯಾರು ಅನರ್ಹ ಪಡಿತರ ಚೀಟಿ ಹೊಂದಿರುತ್ತಾರೆಯೋ ಅಂತಹವರು ಕೂಡಲೇ ತಮ್ಮ ಬಿಪಿಎಲ್ ಪಡಿತರ ಚೀಟಿಯನ್ನು ತಾಲೂಕು ಕಚೇರಿಗೆ ಹಾಜರುಪಡಿಸುವಂತೆ ತಹಶೀಲ್ದಾರರು, ಮಂಗಳೂರು ತಾಲೂಕು ಇವರ ಪ್ರಕಟಣೆ ತಿಳಿಸಿದೆ.

Comments are closed.