ಕುಂದಾಪುರ: ಬೈಂದೂರು ವಿಧಾನಸಭಾ ಕ್ಷೇತ್ರದ ಯಡಮೊಗೆ ಗ್ರಾಮದ ಬಹುವರ್ಷಗಳ ಬೇಡಿಕೆಯಾದ ಸೇತುವೆ ಮತ್ತು ರಸ್ತೆ ನಿರ್ಮಾಣ ಕಾರ್ಯದ ಗುದ್ದಲಿ ಪೂಜೆಯನ್ನು ಬೈಂದೂರು ಶಾಸಕ ಬಿ.ಎಂ. ಸುಕುಮಾರ ಶೆಟ್ಟಿ ಬುಧವಾರ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಲೋಕೋಪಯೋಗಿ ಇಲಾಖೆಯ ಅಂದಾಜು 2.5 ಕೋಟಿ ಅನುದಾನದಲ್ಲಿ ಬಹುಬೇಡಿಕೆಯ ಈ ಸೇತುವೆ ಹಾಗೂ ಹೊಸಂಗಡಿಯಿಂದ ಯಡಮೊಗೆಗೆ ಸಂಪರ್ಕದ ಒಂದೂವರೆ ಕಿಲೋಮೀಟರ್ ರಸ್ತೆ ಕಾಮಗಾರಿಯೂ ನಡೆಯಲಿದೆ. ಜನರಿಗೆ ಅತ್ಯಂತ ಅಗತ್ಯವಿರುವ ಹಿನ್ನೆಲೆ ಎರಡು ತಿಂಗಳೊಳಗೆ ಸೇತುವೆ ಹಾಗೂ ರಸ್ತೆ ಕಾಮಗಾರಿಯೂ ನಡೆದು ಸುಗಮ ಸಂಚಾರಕ್ಕೆ ಅನುಕೂಲವಾಗಿದೆ. ಯಡಮೊಗೆ ಜನರು ಮುಗ್ದರಾಗಿದ್ದು ಕಳೆದ ಬಾರಿ ಚುನಾವಣೆ ಸಂದರ್ಭ ಇಲ್ಲಿಗೆ ಸೇತುವೆ ಹಾಗೂ ರಸ್ತೆ ನಿರ್ಮಾಣದ ಆಶ್ವಾಸನೆ ನೀಡಿದ್ದು ಅದರಂತೆಯೇ ಆಧ್ಯತೆ ಮೇರೆಗೆ ಇಲ್ಲಿನ ಅಭಿವೃದ್ಧಿ ಕಾರ್ಯಕ್ಕೆ ಕಾಯಕಲ್ಪ ಒದಗಿಸಲಾಗಿದೆ ಎಂದರು.
ಯಡಮೊಗೆ ಸೇತುವೆಯಿಂದ ಕಮಲಶಿಲೆ ರಸ್ತೆ ಸಂಪರ್ಕದ ಸುಮಾರು 5 ಕಿ.ಮಿ ರಸ್ತೆ ನಿರ್ಮಾಣಕ್ಕೆ ಈಗಾಗಲೇ ಅನುದಾನ ಮಂಜೂರಾಗಿದೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ರಾಘವೇಂದ್ರ ಅವರು ಬೈಂದೂರು ಕ್ಷೇತ್ರದ ಅಭಿವೃದ್ಧಿಗೆ ಸರ್ವ ಸಹಕಾರ ನೀಡುತ್ತಿದ್ದಾರೆ. ಯಡಮೊಗೆಯು ಗ್ರಾಮೀಣ ಭಾಗವಾಗಿದ್ದು ಇಲ್ಲಿನ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆಯುವಂತಾಗಬೇಕು ಈ ಮೂಲಕ ಊರಿನ ಸರ್ವತೋಮುಖ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡಬೇಕು ಎಂದರು.
ಈ ಸಂದರ್ಭ ಜಿ.ಪಂ ಸದಸ್ಯ ರೋಹಿತ್ ಕುಮಾರ್ ಶೆಟ್ಟಿ, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಲಚಂದ್ರ ಭಟ್, ಯಡಮೊಗೆ ಗ್ರಾ.ಪಂ ಅಧ್ಯಕ್ಷೆ ಸಣ್ಣಮ್ಮ ನಾಯ್ಕ್, ಸದಸ್ಯ ಗುಂಡು ಶೆಟ್ಟಿ, ಗುತ್ತಿಗೆದಾರ ಸದಾನಂದ ಶೆಟ್ಟಿ ಕೆದೂರು, ಸ್ಥಳೀಯರಾದ ಸುಬ್ರಮಣ್ಯ ಕನ್ನಂತ , ಪ್ರಾಣೇಶ ಯಡಿಯಾಳ, ಲೋಕೋಪಯೋಗಿ ಇಂಜಿನಿಯರ್ ದುರ್ಗಾದಾಸ್, ಜ್ಯೂನಿಯರ್ ಇಂಜಿನಿಯರ್ ರಾಘವೇಂದ್ರ ಮೊದಲಾದವರು ಉಪಸ್ಥಿತರಿದ್ದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.