ಮಂಗಳೂರು : ಸುರತ್ಕಲ್ ಸಮೀಪದ ಇಡ್ಯಾ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದಲ್ಲಿ ಜನವರಿ 30 ರಿಂದ 9ರ ವರೆಗೆ ಅಷ್ಟಬಂಧ ಬ್ರಹ್ಮಕಲಶಾಭಿಷೇಕ, ಅಷ್ಟಪವಿತ್ರ ನಾಗಾಮಂಡಲೋತ್ಸವ, ಶ್ರೀ ಪಿಲಿಚಾಮುಂಡಿ ದೈವದ ಧರ್ಮನೇಮೋತ್ಸವ ಜರಗಲಿದೆ.
ಈ ಬಗ್ಗೆ ಶ್ರೀ ಕ್ಷೇತ್ರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿಯವರು ಫೆಬ್ರವರಿ 7ರಂದು ಶುಕ್ರವಾರ ಪೂರ್ವಾಹ್ನ 9.30ರಿಂದ 9.45ರ ಮೀನ ಲಗ್ನ ಸುಮುಹೂರ್ತದಲ್ಲಿ ಶ್ರೀ ವಿದ್ಯಾಧರ ಮುನಿ ಪ್ರತಿಷ್ಠಾಪಿತ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವರಿಗೆ ಬ್ರಹ್ಮಶ್ರೀ ಕುಡುಪು ನರಸಿಂಹ ತಂತ್ರಿಗಳ ನೇತೃತ್ವದಲ್ಲಿ ಅಷ್ಟಬಂಧ ಬ್ರಹ್ಮಕಲಶಾಭಿಷೇಕ ನಡೆಯಲಿದೆ. ರಾತ್ರಿ ವೇದಮೂರ್ತಿ ಸಗ್ರಿ ಶ್ರೀ ಗೋಪಾಲಕೃಷ್ಣ ಸಾಮಗ ಮದ್ದೂರು, ಶ್ರೀ ಕೃಷ್ಣಪ್ರಸಾದ ವೈದ್ಯ ಮತ್ತು ಬಳಗದವರಿಂದ ಅಷ್ಟಪವಿತ್ರ ನಾಗಮಂಡಲೋತ್ಸವ ನಡೆಯಲಿದೆ. ಫೆಬ್ರವರಿ 9ರಂದು ಭಾನುವಾರ ಶ್ರೀ ಪಿಲಿಚಾಮುಂಡಿ ದೈವದ ಧರ್ಮನೇಮೋತ್ಸವ ನಡೆಯಲಿದೆ. ಸುಮಾರು ಒಂದು ಕೋಟಿ ವೆಚ್ಚದಲ್ಲಿ ಬ್ರಹ್ಮಕಲಶದ ವಿಧಿ ವಿಧಾನದಲ್ಲಿ ನಡೆಯಲಿದೆ ಎಂದು ಹೇಳಿದರು.
31 ಜನವರಿ 2020ರಿಂದ 9 ಫೆಬ್ರವರಿ 2020ರ ವರೆಗೆ ಪ್ರತಿದಿನ ಸಂಜೆ 6ಗಂಟೆಗೆ ಶ್ರೀ ಕ್ಷೇತ್ರ ಇಡ್ಯಾದಲ್ಲಿ ಧಾರ್ಮಿಕ ಕಾರ್ಯಕ್ರಮ ಜರಗಲಿದ್ದು ತದನಂತರ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಫೆಬ್ರವರಿ 7ರಂದು ಡಾ. ಡಿ ವೀರೇಂದ್ರ ಹೆಗ್ಗಡೆಯವರು ಧಾರ್ಮಿಕ ಸಭೆಯಲ್ಲಿ ಪಾಲ್ಗೊಳ್ಳಲಿರುವರು ಎಂದು ಅವರು ಹೇಳಿದರು.
ಪ್ರತಿದಿನ ಭಕ್ತಾದಿಗಳಿಗೆ ನಿರಂತರವಾಗಿ ಉಪಾಹಾರ ಊಟೋಪಚಾರದ ವ್ಯವಸ್ಥೆ ಮಾಡಲಾಗಿದೆ. ಸುಮಾರು ಒಂದು ಸಾವಿರ ವರ್ಷಕ್ಕೂ ಮಿಕ್ಕಿ ಇತಿಹಾಸ ಇರುವ ಸದ್ರಿ ದೇವಸ್ಥಾನದ ಹಿಂದಿನ ಜೀಣೋರ್ದ್ಧಾರ ಕಾರ್ಯ 1980ರ ಆಸುಪಾಸಿನಲ್ಲಿ ಜರಗಿದ್ದು, ತದನಂತರ ನವೀಕರಣದ ಕಾರ್ಯಗಳು ಭಕ್ತರ ಸಹಕಾರದಿಂದ ಯಶಸ್ವಿಯಾಗಿ ನಡೆಯುತ್ತಿದೆ ಎಂದು ಅವರು ಹೇಳಿದರು.
ಈ ಹಿಂದೆ 1979ರಲ್ಲಿ 1982ರಲ್ಲಿ ಶ್ರೀ ಮಹಾಗಣಪತಿಯ ನೂತನ ಗರ್ಭಗುಡಿ ನಿರ್ಮಾಣ ಮತ್ತು ಪುನರ್ ಪ್ರತಿಷ್ಠೆ 1991 ಮತ್ತು 2004ರಲ್ಲಿ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಕಲಶ ಹಾಗು ನಾಗಮಂಡಲ ಸೇವೆ ಜರುಗಿರುತ್ತದೆ. 2004ರಲ್ಲಿ ದೇವರ ದರ್ಶನ ಪಡೆದಿದ್ದರು.
ಪ್ರಪ್ರಥಮ ಬಾರಿಗೆ ಧರ್ಮ ನೇಮೋತ್ಸವ :
ಶ್ರೀ ಕ್ಷೇತ್ರ ಒಂಟಿ ದೈವ ಶ್ರೀ ಪಿಲಿಚಾಮುಂಡಿಗೆ ಪ್ರಪ್ರಥಮ ಬಾರಿಗೆ ಧರ್ಮ ನೇಮೋತ್ಸವದ ಜರಗುತ್ತಿದ್ದು ಇದೊಂದು ವಿಶೇಷ ಆಕರ್ಷಣೆಯಾಗಿದೆ. ಈ ಬಾರಿಯ ಬ್ರಹ್ಮಕಲಶ, ನಾಗಮಂಡಲ, ಧರ್ಮನೇಮೋತ್ಸವದಲ್ಲಿ ಸುಮಾರು ಒಂದೂವರೆ ಲಕ್ಷಕ್ಕೂ ಮಿಕ್ಕಿ ಭಕ್ತಾದಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಹಾಬಲ ಪೂಜಾರಿ ಕಡಂಬೋಡಿಯವರು ಹೇಳಿದರು.
ಪತ್ರಿಗೋಷ್ಠಿಯಲ್ಲಿ ಇಡ್ಯಾ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕರು, ಅನುವಂಶಿಕ ಮೊಕ್ತೇಸರರು ಹಾಗೂ ಪ್ರಧಾನ ಕೋಶಾಧಿಕಾರಿ ವೇದಮೂರ್ತಿ ಐ. ರಮಾನಂದ ಭಟ್, ಕಾರ್ಯಾಧ್ಯಕ್ಷ ಟಿ, ಎನ್. ರಮೇಶ್ , ಪ್ರಧಾನ ಕಾರ್ಯದರ್ಶಿ ಕೃಷ್ಣ ಕುಮಾರ್ ಇಡ್ಯಾ, ಪ್ರಧಾನ ಸಂಚಾಲಕ ಅಣ್ಣಪ್ಪ ದೇವಾಡಿಗ, ಪ್ರಚಾರ ಸಮಿತಿ ಸಂಚಾಲಕ ಜಗನ್ನಾಥ ಶೆಟ್ಟಿ ಬಾಳ, ಪ್ರಮುಖರಾದ ಸತ್ಯಜಿತ್ ಸುರತ್ಕಲ್, ಅಗರಿ ರಾಘವೇಂದ್ರ ರಾವ್, ಸಂತೋಷ್ ಕುಮಾರ್ ಶೆಟ್ಟಿ, ರಜನಿ ದುಗ್ಗಣ್ಣ (ಮಾಜಿ ಮೇಯರ್), ಮಹೇಶ್ ಮೂರ್ತಿ ಸುರತ್ಕಲ್, ಶಕುಂತಲಾ ಭಟ್ ಮುಂತಾದವರು ಉಪಸ್ಥಿತರಿದ್ದರು.
Comments are closed.