ಮಂಗಳೂರು : ಹೃದಯ ಶಸ್ತ್ರಚಿಕಿತ್ಸೆಗಾಗಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 40 ದಿನದ ಪುಟ್ಟ ಕಂದಮ್ಮನನ್ನು ಝೀರೊ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ 4 ಗಂಟೆಗಳಲ್ಲಿ ಕರೆದೊಯ್ಯದ ಘಟನೆ ಗುರುವಾರ ನಡೆದಿದ್ದು, ಆಯಂಬುಲೆನ್ಸ್ ಚಾಲಕ ಮುಹಮ್ಮದ್ ಹನೀಫ್ ಅವರ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗಿದೆ.
ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪುಟ್ಟ ಮಗುವನ್ನು ಶಸ್ತ್ರ ಚಿಕಿತ್ಸೆಗಾಗಿ ಐಸಿಯು ಆಂಬುಲೆನ್ಸ್ ನಲ್ಲಿ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಮಂಗಳೂರಿನಿಂದ ಬಿಸಿ.ರೋಡ್, ಕಲ್ಲಡ್ಕ, ಉಪ್ಪಿನಂಗಡಿ, ನೆಲ್ಯಾಡಿ, ಸಕಲೇಶಪುರ, ಹಾಸನ, ನೆಲಮಂಗಲ ಮಾರ್ಗವಾಗಿ ಬೆಂಗಳೂರು ತಲುಪಲಿದೆ. ಝೀರೋ ಟ್ರಾಫಿಕ್ ವ್ಯವಸ್ಥೆಗೆ ರಾಜ್ಯ ಪೊಲೀಸ್ ಇಲಾಖೆಯು ಸಂಪೂರ್ಣ ಸಹಕಾರ ನೀಡಿದೆ.
ಕಂದಮ್ಮನನ್ನು ಝೀರೊ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ಕರೆ ತಂದ ಆಯಂಬುಲೆನ್ಸ್ ಚಾಲಕ ಮುಹಮ್ಮದ್ ಹನೀಫ್ ಅವರ ಬಗ್ಗೆ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ. ಬೆಂಗಳೂರು ತಲುಪಿದ ತಕ್ಷಣ ಹನೀಫ್ ಅವರನ್ನು ಅಲ್ಲಿ ನೆರೆದಿದ್ದವರು ಹೂ ಹಾರ ಹಾಕಿ ಸನ್ಮಾನಿಸಿ, ಅಭಿನಂದಿಸಿದರು. ಮುಹಮ್ಮದ್ ಹನೀಫ್ ಅವರು ದ.ಕ. ಜಿಲ್ಲೆಯ ಬೆಳ್ತಂಗಡಿಯ ಬಳಂಜ ನಿವಾಸಿ
ಮಂಗಳೂರಿನಿಂದ ಆಯಂಬುಲೆನ್ಸ್ ಮಧ್ಯಾಹ್ನ 12:05ಕ್ಕೆ ಹೊರಟ್ದು, ಸಂಜೆ 4:20ಕ್ಕೆ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ತಲುಪಿಸಿದೆ. ಟ್ರಾಫಿಕ್ ಸಮಸ್ಯೆಯಿಂದ ನೆಲಮಂಗಲದಿಂದ ಜಯದೇವ ಆಸ್ಪತ್ರೆವರೆಗೆ ಸ್ವಲ್ಪ ಸಮಯ ತೆಗೆದುಕೊಂಡಿತು. ಸಾಮಾಜಿಕ ಜಾಲತಾಣಗಳಲ್ಲಿ ವಿಷಯ ರವಾನಿಸಿ ಎಲ್ಲರ ಸಹಕಾರ ಕೋರಿದ ಕಾರಣ ‘ಝೀರೋ ಟ್ರಾಫಿಕ್’ ವ್ಯವಸ್ಥೆ ಮಾಡಲು ಸಾಧ್ಯವಾಯಿತು ಎನ್ನಲಾಗಿದೆ.
ನಿದ್ದೆಗೆಟ್ಟಿದ್ದರೂ ಕೂಡ ಮಾನಸಿಕವಾಗಿ ಸಿದ್ಧನಾಗಿದ್ದೆ : ಆಯಂಬುಲೆನ್ಸ್ ಚಾಲಕ
ಆಯಂಬುಲೆನ್ಸ್ ಚಾಲಕ ಹನೀಫ್ ಬಳಂಜ ಅವರು ಮಾತನಾಡಿ, ನನಗಿದು ಮೊದಲನೆಯ ಅನುಭವವಲ್ಲ. 9 ತಿಂಗಳ ಹಿಂದೆ ಬೆಂಗಳೂರಿನಿಂದ ಕಲ್ಲಿಕೋಟೆಗೆ ಕೇವಲ 4:10ಗಂಟೆಯೊಳಗೆ 380 ಕಿ.ಮೀ.ನ್ನು ಕ್ರಮಿಸಿದ್ದೆ. ಆವಾಗಲೂ ‘ಝೀರೋ ಟ್ರಾಫಿಕ್’ ತುಂಬಾ ಪ್ರಯೋಜನಕ್ಕೆ ಬಂತು. ಬುಧವಾರ ಸಂಜೆ 6 ಗಂಟೆಯ ವೇಳೆಗೆ 40 ದಿನದ ಮಗುವಿನ ಅನಾರೋಗ್ಯದ ಬಗ್ಗೆ ನನಗೆ ಮಾಹಿತಿ ಬಂದ ತಕ್ಷಣ ನಾನು ಬೆಂಗಳೂರಿನಿಂದ ಹೊರಡಲು ಸಿದ್ಧತೆ ನಡೆಸಿದೆ. ರಾತ್ರಿ 12 ಗಂಟೆಗೆ ಹೊರಟು ಮುಂಜಾನೆ ಮಂಗಳೂರು ತಲುಪಿದ್ದೆ.
ನಿದ್ದೆಗೆಟ್ಟಿದ್ದರೂ ಕೂಡ ಮಗುವನ್ನು ತುರ್ತಾಗಿ ಬೆಂಗಳೂರಿಗೆ ಕರೆದೊಯ್ಯಲು ಮಾನಸಿಕವಾಗಿ ಸಿದ್ಧನಾಗಿದ್ದೆ. ಕೊನೆಗೆ 12:05ಕ್ಕೆ ಮಂಗಳೂರಿನಿಂದ ಹೊರಟೆ. ಆಯಂಬುಲೆನ್ಸ್‌ನಲ್ಲಿ ಮಗುವಿನ ತಂದೆ, ತಾಯಿ ಮತ್ತು ಸಂಬಂಧಿಕರಿದ್ದರು. ಹೆದ್ದಾರಿಯುದ್ದಕ್ಕೂ ಎಲ್ಲರೂ ಸಹಕರಿಸಿದರು. ಘಾಟಿಯಲ್ಲಿ ಆಕ್ಸಿಜನ್ ಬದಲಾಯಿಸಲು 10 ನಿಮಿಷ ಆಯಂಬುಲೆನ್ಸ್ ನಿಲ್ಲಿಸಬೇಕಾಗಿ ಬಂತು. ಯಶವಂತಪುರದವರೆಗೂ ಝೀರೋ ಟ್ರಾಫಿಕ್‌ನಲ್ಲೇ ಬಂದೆ. ಬಳಿಕ ಟ್ರಾಫಿಕ್ ಸಿಕ್ಕಿದರೂ ಕೂಡ ಸಂಜೆ 4:20ಕ್ಕೆ ಜಯದೇವ ಆಸ್ಪತ್ರೆ ತಲುಪಿದೆ. ಇಲ್ಲದಿದ್ದರೆ ಕೇವಲ 4 ಗಂಟೆಯೊಳಗೆ ಬೆಂಗಳೂರು ತಲುಪಬಹುದಿತ್ತು ಎಂದು ತಿಳಿಸಿದ್ದಾರೆ.
Comments are closed.