ಮಂಗಳೂರು : ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಅಮೂಲ್ಯ ಲಿಯೋನ್ ಹೇಳಿಕೆ ಖಂಡಿಸಿ ಎಬಿವಿಪಿ ವತಿಯಿಂದ ಗುರುವಾರ ಸಂಜೆ ನಗರದ ಲಾಲ್ ಬಾಗ್ ಬಳಿಯಿರುವ ಮನಪಾ ಕಚೇರಿ ಮುಂಭಾಗ ಪ್ರತಿಭಟನೆ ನಡೆಯಿತು.
ನಾವು ಹಿಂದೂಸ್ತಾನದ ಪರವಾಗಿ ದೇಶಕ್ಕೋಸ್ಕರ ಪ್ರಾಣ ತ್ಯಾಗಕ್ಕೂ ಸಿದ್ದರಿದ್ದೇವೆ. ಆದರೆ ಅಮೂಲ್ಯ ಲಿಯೋನ್ ಸಿಎಎ ವಿರೋಧವಾಗಿ ಮಾತನಾಡಿ, ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುತ್ತಾಳೆ. ಈ ಮೂಲಕ ಅಮೂಲ್ಯ ಲಿಯೋನ್ ನ ನಿಜ ಬಣ್ಣ ಬಯಲಾಗಿದೆ.
ನಮ್ಮ ನೆಲದಲ್ಲೇ ಹುಟ್ಟಿ ಬೆಳೆದು ದೇಶದಲ್ಲಿನ ಗಾಳಿಯನ್ನು ಉಸಿರಾಡುತ್ತಿರುವಾಗಲೇ ನಮ್ಮ ವಿರೋಧಿ ದೇಶ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವ ಮೂಲಕ ಆಕೆ ದೇಶದ್ರೋಹ ಎಸಗಿದ್ದಾಳೆ ಎಂದು ಎಬಿವಿಪಿ ನಗರ ಕಾರ್ಯದರ್ಶಿ ಮಣಿಕಂಠ ಅವರು ಆಕ್ರೋಶ ವ್ಯಕ್ತಪಡಿಸಿದರು.
ಎಬಿವಿಪಿ ಈ ರೀತಿಯಲ್ಲಿ ಪಾಕಿಸ್ತಾನದ ಪರವಾಗಿ ಘೋಷಣೆ ಕೂಗುವವರನ್ನು ಖಂಡಿಸುತ್ತದೆ. ಇದಕ್ಕಾಗಿ ರಾತ್ರೋರಾತ್ರಿ ಹೋರಾಟ ಮಾಡುತ್ತದೆ. ಅಮೂಲ್ಯ ಲಿಯೋನ್ ಗೆ ಕಠಿಣ ಶಿಕ್ಷೆಯಾಗಬೇಕು. ಈ ಮೂಲಕ ಭಾರತದಲ್ಲಿ ನಿಂತು ಪಾಕಿಸ್ತಾನದ ಹೆಸರನ್ನು ನನ್ನ ಬಾಯಲ್ಲಿ ಹೇಳುತ್ತೇನೆಂಬ ಯೋಚನೆಯನ್ನು ಕೂಡಾ ಮಾಡಬಾರದು ಎಂದು ಅವರು ಹೇಳಿದರು.
ಪ್ರತಿಭಟನೆ ಸಂದರ್ಭ ಪ್ರತಿಭಟನಕಾರರು ಅಮೂಲ್ಯ ಲಿಯೋನ್ ನ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
Comments are closed.