ಕರಾವಳಿ

ಫೆ.27: ರಾಣಿ ಅಬ್ಬಕ್ಕ ವಿಚಾರ ಸಂಕಿರಣ – ಬಹುಭಾಷಾ ಕವಿಗೋಷ್ಠಿ – ಕಾವ್ಯ-ಗಾನ – ಕುಂಚ 

Pinterest LinkedIn Tumblr

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಕನ್ನಡ ಸಂಸ್ಕೃತಿ ಇಲಾಖೆ ವತಿಯಿಂದ ಜರಗುವ ‘ವೀರರಾಣಿ ಅಬ್ಬಕ್ಕ ಉತ್ಸವ – 2020’ ಸಲುವಾಗಿ ಫೆಬ್ರವರಿ 27 ರಂದು ರಾಣಿ ಅಬ್ಬಕ್ಕ ವಿಚಾರಗೋಷ್ಠಿ ಮತ್ತು ಬಹುಭಾಷಾ ಕವಿಗೋಷ್ಠಿಯನ್ನು ನಗರದ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಏರ್ಪಡಿಸಲಾಗಿದೆ. ದ.ಕ.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಸೆಲ್ವಮಣಿ ಆರ್. ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಮಿತಿ ಸಭೆಯಲ್ಲಿ ಕಾರ್ಯಕ್ರಮದ ರೂಪುರೇಷೆಯ ಬಗ್ಗೆ ಚರ್ಚಿಸಲಾಯ್ತು.

ಫೆ.27 ರಂದು ಪೂರ್ವಾಹ್ನ ಗಂಟೆ 10.30 ಕ್ಕೆ ತುಮಕೂರು ವಿಶ್ವವಿದ್ಯಾಲಯದ ಚರಿತ್ರೆ ವಿಭಾಗ ಮುಖ್ಯಸ್ಥ ಡಾ.ಎಂ.ಕೊಟ್ರೇಶ್ ಅವರ ಅಧ್ಯಕ್ಷತೆಯಲ್ಲಿ ‘ತುಳುನಾಡಿನ ರಾಣಿಯರು’ ಎಂಬ ವಿಷಯದ ಮೇಲೆ ವಿಚಾರ ಸಂಕಿರಣ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ ತಿಳಿಸಿದರು.

ಈ ಸಂದರ್ಭದಲ್ಲಿ ಮೂಡಬಿದಿರೆಯ ವಿಶ್ರಾಂತ ಇತಿಹಾಸ ಪ್ರಾಧ್ಯಾಪಕ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಅವರು ‘ಕರಿಮೆಣಸಿನ ರಾಣಿ ಚೆನ್ನಭೈರಾದೇವಿ’, ಸಂತ ಅಲೋಸಿಯಸ್ ಕಾಲೇಜು ಚರಿತ್ರೆ ವಿಭಾಗದ ಪ್ರಾಧ್ಯಾಪಕ ಡಾ.ಡೆನಿಸ್ ಫೆರ್ನಾಂಡಿಸ್ ‘ಅಬ್ಬಕ್ಕನ ಸಾಗರೋತ್ತರ ಸಂಬಂಧ’ ಹಾಗೂ ಮಿಲಾಗ್ರಿಸ್ ಕಾಲೇಜು ಕಲ್ಯಾಣ ಪುರ ದ ಇತಿಹಾಸ ಪ್ರಾಧ್ಯಾಪಕ ಡಾ.ಜಯರಾಮ ಶೆಟ್ಟಿಗಾರ್ ‘ಶಾಸನಗಳಲ್ಲಿ ತುಳುವ ರಾಣಿಯರು’ ಹೀಗೆ ಮೂರು ಪ್ರಬಂಧಗಳನ್ನು ಮಂಡಿಸುವರು ಎಂದವರು ವಿವರಿಸಿದರು.

ಅಪರಾಹ್ನ ಗಂ. 2.30 ರಿಂದ ನಡೆಯುವ ‘ಬಹುಭಾಷಾ ಕವಿಗೋಷ್ಠಿ’ ಯ ಅಧ್ಯಕ್ಷತೆಯನ್ನು ಬೆಂಗಳೂರು ದೂರದರ್ಶನದ ಹಿರಿಯ ಕಾರ್ಯಕ್ರಮ ನಿರ್ವಾಹಕಿ, ಕವಯಿತ್ರಿ ಆರತಿ ಎಚ್.ಎನ್. ವಹಿಸುವರು ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ.ರೂಪಾ ತಿಳಿಸಿದರು.

ಕವಿಗಳಾದ ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಸೋಮನಿಂಗ ಎಚ್.ಹಿಪ್ಪರಗಿ (ಕನ್ನಡ), ಅತ್ತಾವರ ಶಿವಾನಂದ ಕರ್ಕೇರ, ವಸಂತಿ ನಿಡ್ಲೆ (ತುಳು), ಫೆಲ್ಸಿ ಲೋಬೋ (ಕೊಂಕಣಿ), ಆಯೇಷಾ ಯು.ಕೆ. ಉಳ್ಳಾಲ (ಬ್ಯಾರಿ), ಡಾ.ಸುರೇಶ ನೆಗಳಗುಳಿ (ಹವ್ಯಕ), ಸುಮಿತ್ರಾ ಐತಾಳ್ (ಕುಂದ ಕನ್ನಡ) ಮತ್ತು ಪುದಿಯ ನೆರವನ ರೇವತಿ ರಮೇಶ್ (ಅರೆ ಭಾಷೆ) ವಿವಿಧ ಭಾಷೆಗಳಲ್ಲಿ ಸ್ವರಚಿತ ಕವಿತೆಗಳನ್ನು ಓದುವರು.

ಸತೀಶ್ ಸುರತ್ಕಲ್ ಮತ್ತು ಬಳಗದವರು ಆ ಕವಿತೆಗಳನ್ನು ಸ್ವರ ಬದ್ಧಗೊಳಿಸಿ ಹಾಡುವರು. ಇದೇ ವೇಳೆ ಕುಂಚ ಕಲಾವಿದರಿಂದ ಚಿತ್ರ ಬಿಡಿಸುವ ಕಾರ್ಯಕ್ರಮವೂ ಇದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್ ಜಿ. ಹೇಳಿದರು.

ಅಬ್ಬಕ್ಕ ಉತ್ಸವಕ್ಕೆ ಪೂರ್ವಭಾವಿಯಾಗಿ ನಡೆಯುವ ಈ ಕಾರ್ಯಕ್ರಮದಲ್ಲಿ ಬೆಳಿಗ್ಗೆ ಔಪಚಾರಿಕ ಉದ್ಘಾಟನೆಯೂ ಸೇರಿದಂತೆ ದಿನವಿಡೀ ಸಾಹಿತ್ಯದ ಕಲಾಪಗಳು ನಡೆಯುವುದರಿಂದ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಡಾ.ಸೆಲ್ವಮಣಿ ವಿನಂತಿಸಿದ್ದಾರೆ. ಸಮಿತಿ ಸದಸ್ಯರಾದ ಚಂದ್ರಹಾಸ ಅಡ್ಯಂತಾಯ, ಮೋಹನದಾಸ ಶೆಟ್ಟಿ,ರಘುನಾಥ್, ಆನಂದ ಶೆಟ್ಟಿ, ನಮಿತಾ ಶ್ಯಾಮ್, ವಿಜಯಲಕ್ಷ್ಮಿ ಬಿ.ಶೆಟ್ಟಿ,ಸುವಾಸಿನಿ ಬಬ್ಬುಕಟ್ಟೆ ಮತ್ತು ವಿಜಯಲಕ್ಷ್ಮಿ ಪಿ.ರೈ ಸಭೆಯಲ್ಲಿ ಉಪಸ್ಥಿತರಿದ್ದರು.

Comments are closed.