ಕರಾವಳಿ

ಶಿರ್ವ ಚರ್ಚ್ ಫಾ| ಮಹೇಶ್ ಡಿಸೋಜಾ ಆತ್ಮಹತ್ಯೆ ಕೇಸ್-ಮುದರಂಗಡಿ ಗ್ರಾ.ಪಂ ಅಧ್ಯಕ್ಷ ಅರೆಸ್ಟ್

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಶಿರ್ವ ಡೋನ್ ಬೊಸ್ಕೊ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲ ಫಾ| ಮಹೇಶ್ ಡಿಸೋಜಾರ ಆತ್ಮಹತ್ಯೆ ಪ್ರಕರಣದಲ್ಲಿ ತನಿಖಾಧಿಕಾರಿಯೇ ಸ್ವಯಂಪ್ರೇರಿತ ದೂರನ್ನು ದಾಖಲಿಸಿಕೊಂಡು ತನಿಖೆ ನಡೆಸಿದ್ದು ಮುಂದುವರಿದ ಬೆಳವಣಿಗೆಯಲ್ಲಿ ಮುದರಂಗಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಡೇವಿಡ್ ಡಿಸೋಜಾ ಎಂಬಾತನನ್ನು ಶಿರ್ವ ಪೊಲೀಸರು ಬಂಧಿಸಿದ್ದಾರೆ.

(ಫಾ| ಮಹೇಶ್ ಡಿಸೋಜಾ)

(ಆರೋಪಿ ಡೇವಿಡ್ ಡಿಸೋಜ)

ಫಾ. ಮಹೇಶ್ ನಡುವಿನ ಕೊನೆಯ ಫೋನ್ ಕರೆಗಳ ವಿವರಗಳ ಆಧಾರದಲ್ಲಿ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ. ಮಹೇಶ್ ಡಿಸೋಜಾ ಆತ್ಮಹತ್ಯೆ ಪ್ರಕರಣದ ತನಿಖೆಯ ವೇಳೆ ಮೊಬೈಲ್ ಫೋನ್ ಹಾಗೂ ಇತರ ಸೊತ್ತುಗಳನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿ ಅವರಿಂದ ವರದಿ ಪಡೆದು ತನಿಖೆ ನಡೆಸಿದ್ದು, ಆತ್ಮಹತ್ಯೆ ಮುನ್ನಾ ದಿನದಂದು ಆರೋಪಿ ಡೇವಿಡ್ ಡಿಸೋಜ ಯಾವುದೋ ಕಾರಣಕ್ಕೆ ಫಾದರ್ ಮಹೇಶ್ ಡಿಸೋಜಾರಿಗೆ ಅವಾಚ್ಯ ಶಬ್ದಗಳಿಂದ ಬೈದಿದ್ದಲ್ಲದೇ ಮಹೇಶ್ ಅವರ ತಾಯಿಗೆ ಅವಮಾನಕರವಾಗಿ ಬೈದು, ಈಗಲೇ ಅರ್ಧ ಗಂಟೆಯ ಒಳಗೆ ಚರ್ಚ್ ಗೆ ನುಗ್ಗುತ್ತೇನೆ, ನಿನ್ನನ್ನು ಕತ್ತರಿಸಿ ಹಾಕುತ್ತೇನೆ, ಜನ ಸೇರಿಸಿ ಮರ್ಯಾದೆ ತೆಗೆಯುತ್ತೇನೆಂದು ಬೆದರಿಕೆ ಒಡ್ಡಿದ್ದ. ಅಲ್ಲದೇ ಇವತ್ತೇ ಕುತ್ತಿಗೆಗೆ ಹಗ್ಗ ತೆಗೆದುಕೊಳ್ಳಬೇಕು ಎಂದು ಆತ್ಮಹತ್ಯೆ ಮಾಡಿಕೊಳ್ಳಲು ದುಷ್ಪ್ರೇರಣೆ ನೀಡಿದ್ದು, ಬೆದರಿಕೆ ಹಾಗೂ ದುಷ್ಪ್ರೇರಣೆಗೆ ಒಳಗಾದ ಫಾದರ್ ಮಹೇಶ್ ಡಿಸೋಜ ರವರು ಶಿರ್ವ ಡೊನ್ ಬಾಸ್ಕೋ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರ ಕೊಠಡಿಯ ಸೀಲಿಂಗ್ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

Comments are closed.