ಮಂಗಳೂರು ಫೆಬ್ರವರಿ 29: ಹದಿನಾರನೇ ಶತಮಾನದ ದ್ವಿತೀಯಾರ್ಧದಲ್ಲಿ ಪೋರ್ಚುಗೀಸರೊಡನೆ ಹೋರಾಡಿದವಳು ತುಳುನಾಡ ರಾಣಿ ಅಬ್ಬಕ್ಕ ದೇವಿ.
ರಾಣಿಯು ದೇವಾಲಯಗಳ ನಗರಿ ಮೂಡುಬಿದಿರೆಯ ಪ್ರದೇಶವನ್ನಾಳಿದ ಚೌಟ ವಂಶಕ್ಕೆ ಸೇರಿದವಳು. ಬಂದರು ನಗರಿ ಉಳ್ಳಾಲವು ರಾಜಧಾನಿ, ಆಯಕಟ್ಟಿನ ಪ್ರದೇಶವಾದ ಉಳ್ಳಾಲವನ್ನು ವಶಪಡಿಸಿಕೊಳ್ಳಲು ಪೋರ್ಚುಗೀಸರು ಅನೇಕ ಯತ್ನಗಳನ್ನು ನಡೆಸಿದರು ಆದರೆ ರಾಣಿಯು ಅವರ ಪ್ರಯತ್ನವನ್ನು ನಾಲ್ಕು ದಶಕಗಳ ಕಾಲ ಹಿಮ್ಮೆಟ್ಟಿಸಿದಳು. ಅವಳ ಧೈರ್ಯದಿಂದಾಗಿ ಅಭಯ ರಾಣಿ ಎಂದು ಹೆಸರಾಗಿದ್ದಳು ವಸಾಹಾತುಶಾಹಿಗಳ ವಿರುದ್ಧ ಹೋರಾಡಿದ ಮೊದಲ ಭಾರತೀಯರಲ್ಲಿ ಒಬ್ಬಳು ಮತ್ತು ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ.
ಕನ್ನಡ ಕರಾವಳಿ ಹದಿಮೂರರಿಂದ ಹದಿನೆಂಟನೆ ಶತಮಾನದವರೆಗೆ ಬೈರ, ಬಂಗ, ಚೌಟ, ಅಜಿಲ, ಗೆರುಸೊಪ್ಪೆಯ ಸಾಳುವ ಮುಂತಾದ ಅನೇಕ ಸಣ್ಣಪುಟ್ಟ ಆಡಳಿತಕ್ಕೆ ಒಳಪಟ್ಟಿತ್ತು. ಈ ಅರಸೊತ್ತಿಗೆಗಳು ವಿಜಯನಗರ ಅರಸರ ಸಾಮಂತರಾಗಿದ್ದು ಮುಂದೆ ಕೆಳದಿ ನಾಯಕರ ಅಧೀನಕ್ಕೆ ಒಳಪಟ್ಟವು. ಇವರು ವಿಜಯನಗರ ಹಾಗೂ ಕೆಳದಿ ನಾಯಕರ ವಿರುದ್ಧ ಆಗಾಗ ಬಂಡೇಳುತ್ತಾ ತಮ್ಮೊಳಗೂ ಕಾದಾಡುತ್ತ ಇದ್ದುದರಿಂದ ಪೋರ್ಚುಗೀಸರಿಗೆ ಕರಾವಳಿಯ ಪ್ರವೇಶ ಸುಲಭವಾಯಿತು.
ಗೋವೆಯ ಒಡೆಯರಾದ ಪೋರ್ಚುಗೀಸರು ಮಂಗಳೂರು ನಗರ ಹಾಗೂ ಬಂದರಿನತ್ತ ಕಣ್ಣಿಟ್ಟರು. ಆಗ ಚೌಟರ ರಾಣಿ ಹಿರಿಯ ಅಬ್ಬಕ್ಕ ದೇವಿ ಉಳ್ಳಾಲದಲ್ಲಿ ರಾಜ್ಯಭಾರ ಮಾಡುತ್ತಿದ್ದಳು. ಪೋರ್ಚುಗೀಸರು ದೇಶೀಯ ಅರಸೊತ್ತಿಗೆಗಳು ಕಪ್ಪ ಕೊಡದಿದ್ದರೆ ಲೂಟಿಗೆ ಮುಂದಾಗುತ್ತಿದ್ದರು. ಕೆರಳಿದ ಅಬ್ಬಕ್ಕ ಪೆಪೋರ್ಚುಗೀಸರ ರಾಜಕೀಯ, ಆರ್ಥಿಕ ನಿಬರ್ಂಧಗಳನ್ನು ಪ್ರತಿಭಟಿಸಿ ಕಪ್ಪ ನಿಲ್ಲಿಸಿದಳು.
1567ರಲ್ಲಿ ಉಳ್ಳಾಲದ ನೇತ್ರಾವತಿ ನದಿಯಲ್ಲಿ ನಡೆದ ಯುದ್ಧದಲ್ಲಿ ಪೋರ್ಚುಗೀಸರ ವಿರುದ್ಧ ಅಬ್ಬಕ್ಕನಿಗೆ ಜಯವಾಗುತ್ತದೆ. ಪೋರ್ಚುಗೀಸರು ಎರಡೇ ದಿನಗಳಲ್ಲಿ ಉಳ್ಳಾಲದ ಮೇಲೆ ಮತ್ತೆ ದಾಳಿ ಮಾಡಿ ಗೆದ್ದರು. ಬಳಿಕ ಪೋರ್ಚುಗೀಸರು ಕಪ್ಪವನ್ನು ದುಪ್ಪಟ್ಟುಗೊಳಿಸಿದರು. ಇದನ್ನು ಪ್ರತಿಭಟಿಸಿ ಅಬ್ಬಕ್ಕ ಮತ್ತೊಂದು ಯುದ್ಧಕ್ಕೆ ಅಣಿಯಾಗುತ್ತಾಳೆ. ಈ ಬಾರಿ ಕಲ್ಲಿಕೋಟೆಯ ಅರಸಜಾಮೋರಿನ್ನ ನೌಕಾ ಸೇನಾಧಿಪತಿ ಕುಟ್ಟಿಪೆÇೀಕ್ರೆಯ ನೆರವು ಪಡೆಯುತ್ತಾಳೆ.
ಕರಾವಳಿಯಲ್ಲಿ ಪೋರ್ಚುಗೀಸರ ಏಕಸ್ವಾಮ್ಯವನ್ನು ಮುರಿಯುವ ಉದ್ದೇಶದಲ್ಲಿ ಬಿಜಾಪುರದ ಆದಿಲ್ ಷಾ, ಕಲ್ಲಿಕೋಟೆಯ ಜಾಮೋರಿನ್, ಗೇರುಸೊಪ್ಪೆಯ ಚೆನ್ನ ಬೈರಾದೇವಿ, ಅಬ್ಬಕ್ಕ ಸೇರಿಕೊಂಡು ಒಕ್ಕೂಟ ರಚನೆ ಮಾಡಿದರು. ಈ ನಡುವೆ ಕುಟ್ಟಿಪೆÇೀಕ್ರೆಯ ಸೈನ್ಯದ ಬೆಂಬಲದಿಂದಪೋರ್ಚುಗೀಸರ ಮಂಗಳೂರು ಕೋಟೆಗೆ ಅಬ್ಬಕ್ಕ ದಾಳಿ ಮಾಡಿದಳು. ಈ ಯುದ್ಧದಲ್ಲಿ ಸೋತ ಅಬ್ಬಕ್ಕ ಮಂಗಳೂರಿನ ಬಂದರು ವ್ಯಾಪಾರದ ಮೇಲೆ ಹಿಡಿತ ಕಳೆದುಕೊಳ್ಳುತ್ತಾಳೆ. ಹೀಗೆ ತನ್ನ ಶೌರ್ಯ ಸಾಹಸ ಯುದ್ಧತಂತ್ರದಿಂದ ‘ವೀರರಾಣಿ’ಯಾದವಳು ಹಿರಿಯ ಅಬ್ಬಕ್ಕ.
ಜೀವಿತದುದ್ದಕ್ಕೂ ಪೋರ್ಚುಗೀಸರನ್ನು ಎದುರಿಸಿದ ಅಬ್ಬಕ್ಕ ಸ್ಥಳೀಯ ಆಳರಸರ ಅಸಹಕಾರ, ಎಲ್ಲ ಸವಾಲು ಸಂಘರ್ಷಗಳಿಂದ ಅವಳ ಆತ್ಮವಿಶ್ವಾಸ ಕುಂದಲಿಲ್ಲ. ಪೋರ್ಚುಗೀಸರಿಗೆ ನೀಡಿದ್ದ ವ್ಯಾಪಾರ ಪರವಾನಗಿಯನ್ನು ಹಿಂಪಡೆದು ತಾನೇ ಪರ್ಷಿಯಾ, ಅರೇಬಿಯಾಗಳೊಂದಿಗೆ ನೇರ ವ್ಯಾಪಾರಕ್ಕೆ ತೊಡಗಿದಳು. ಉಳ್ಳಾಲದಲ್ಲಿ ದೊಡ್ಡ ಕೋಟೆ ಕಟ್ಟಿದಳು. ಸುಸಜ್ಜಿತ ಸೈನ್ಯವನ್ನು ಅಲ್ಲಿರಿಸಿದಳು. ಇದು ಪೋರ್ಚುಗೀಸರಲ್ಲಿ ಆತಂಕವನ್ನು ತಂದಿತು. ಕಲ್ಲಿಕೋಟೆಯ ಜಾಮೋರಿನ್ನ ನೆರವಿನಿಂದ ವ್ಯಾಪಾರಕ್ಕೆಂದು ಕೊಲ್ಲಿರಾಷ್ಟ್ರಗಳಿಗೆ ಹೋದ ಹಡಗುಗಳನ್ನು ಪೋರ್ಚುಗೀಸರು ಸಮುದ್ರ ಮಧ್ಯದಲ್ಲಿ ತಡೆದರು.
ಇದನ್ನು ಪ್ರತಿಭಟಿಸಿ ಅಬ್ಬಕ್ಕ ಪೋರ್ಚುಗೀಸರ ಮಂಗಳೂರು ಕೋಟೆ ಹಾಗೂ ಉಗ್ರಾಣದ ಮೇಲೆ ದಾಳಿ ಮಾಡಿ ವಶಪಡಿಸಿಕೊಳ್ಳುತ್ತಾಳೆ. ಸಿಡಿದೆದ್ದ ಪೋರ್ಚುಗೀಸರು 1618ರಲ್ಲಿ ಏಳು ನೌಕೆಗಳು ಹಾಗೂ ಮಂಜಿಗಳಲ್ಲಿ ಮೂರು ಸಾವಿರ ಸೈನಿಕರು ಉಳ್ಳಾಲ ನದಿಪ್ರದೇಶದಲ್ಲಿ ಲಂಗರು ಹಾಕಿದರು. ಸ್ಥಳೀಯ ಮೊಗವೀರ ಮಾಪಿಳ್ಳೆ, ಬಿಲ್ಲವರ ನೆರನೊಂದಿಗೆ ಕೂಟಯುದ್ಧ ತಂತ್ರವನ್ನು ಅಬ್ಬಕ್ಕ ರೂಪಿಸುತ್ತಾಳೆ. ನಡುರಾತ್ರಿ ಅಬ್ಬಕ್ಕ ಸೇನೆ ಸಣ್ಣ ಸಣ್ಣ ದೋಣಿಗಳಲ್ಲಿ ಕಡಲನ್ನು ಹೊಕ್ಕಿತು. ತೆಂಗಿನ ಒಣಗರಿಗಳಿಂದ ಮಾಡಿದ ಸೂಟೆಗಳಿಗೆ ಬೆಂಕಿ ಹಚ್ಚಿ ಪೋರ್ಚುಗೀಸರ ನೌಕೆಗಳತ್ತ ಎಸೆದರು. ನೌಕೆಗಳಿಗೆ ಬೆಂಕಿ ಹತ್ತಿ ಉರಿದು, ಸೈನಿಕರು ಸುಟ್ಟುಹೋದರು. ಕೆಲವರು ಪಲಾಯನ ಮಾಡಿದರು.
ಪೋರ್ಚುಗೀಸರನ್ನು ಕರಾವಳಿಯಿಂದ ದೂರವಿಡಲು ಕೆಳದಿ ವೆಂಕಟಪ್ಪನಾಯಕನ ಮೈತ್ರಿಯೂ ಆಕೆಗೆ ಸಹಾಯಕವಾಯಿತು. ಪೋರ್ಚುಗೀಸರಿಂದ ಮುಕ್ತಗೊಳಿಸುವಲ್ಲಿ ಅಬ್ಬಕ್ಕ ಯಶಸ್ವಿಯಾದರೂ ಕೆಳದಿಯ ನಿಯಂತ್ರಣಕ್ಕೆ ಒಳಪಡಬೇಕಾಯಿತು. ಕರಾವಳಿಯನ್ನು ಅಧೀನಕ್ಕೆ ಪಡೆದ ವೆಂಕಟಪ್ಪ ನಾಯಕ ಅಬ್ಬಕ್ಕನನ್ನೂ ತನ್ನ ಅಧಿಕಾರದ ವ್ಯಾಪ್ತಿಗೆ ತಂದ. ಇದನ್ನು ಅಬ್ಬಕ್ಕ ವಿರೋಧಿಸಿದಳು. ಮುಂದೆ ವೆಂಕಟಪ್ಪ ನಾಯಕನ ಮರಣದ ಬಳಿಕ ಕೆಳದಿ ನಿಯಂತ್ರಣದಿಂದ ಹೊರಬರುವ ಕನಸು ಕಟ್ಟಿದರೂ ನನಸಾಗಲಿಲ್ಲ. ಸ್ವಾಭಿಮಾನ, ಸ್ವಾತಂತ್ರ್ಯ, ರಾಜತಾಂತ್ರಿಕತೆಯ ಸಂಕೇತವಾಗಿದ್ದ ಅಬ್ಬಕ್ಕ ತುಳುನಾಡಿನ ವೀರರಾಣಿಯಾಗಿ ಮಿಕ್ಕ ಅರಸರಿಗಿಂತ ಬೇರೆಯಾಗಿ ನಿಲ್ಲುತ್ತಾಳೆ.
ಇಂತಹ ವೀರರಾಣಿ ಅಬ್ಬಕ್ಕ ಹೆಸರಿನಲ್ಲಿ ಉತ್ಸವ ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ಫೆಬ್ರವರಿ 29 ಹಾಗೂ ಮಾರ್ಚ್ 1 ರಂದು ಕೋಣಾಜೆ ಸಮೀಪದ ಅಸೈಗೋಳಿಯಲ್ಲಿ ನಡೆಯಲಿದೆ.
Comments are closed.