ಮಂಗಳೂರು: ಮಂಗಳೂರು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಭಾರಿ ಪ್ರಮಾಣದಲ್ಲಿ ಚಿನ್ನ ಸಾಗಾಟ ವನ್ನು ಪತ್ತೆ ಹಚ್ಚಿದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್ಐ) ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದಂತೆ ಏಳು ಮಂದಿಯನ್ನು ಬಂಧಿಸಿದ್ದಾರೆ.
ಕ್ಯಾಲಿಕೆಟ್ ನಿಂದ ಮಂಗಳೂರಿಗೆ ರೈಲಿನಲ್ಲಿ ಸೈಯ್ಯದ್ ಮುಹಮ್ಮದ್ ಮತ್ತು ಅಶೋಕ ಕೆ ಎಸ್ ಎಂಬಿಬ್ಬರು ಚಿನ್ನ ಸಾಗಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ಮಂಗಳೂರು ರೈಲ್ವೆ ನಿಲ್ದಾಣದಲ್ಲಿ ದಾಳಿ ನಡೆಸಿದ ಅಧಿಕಾರಿಗಳು ಇವರಿಂದ ಸುಮಾರು 5.6 ಕೆಜಿ ಚಿನ್ನ ವಶಪಡಿಸಿಕೊಂಡಿದ್ದಾರೆ.
ಇವರಿಬ್ಬರನ್ನು ಮಾತ್ರವಲ್ಲದೇ ಇವರಿಂದ ಚಿನ್ನವನ್ನು ಪಡೆಯಲಿದ್ದ ಮಂಜುನಾಥ್ ಶೆಟ್ ಅಲಿಯಾಸ್ ರೂಪೇಶ್ ಎಂಬಾತನನ್ನು ರೈಲ್ವೆ ನಿಲ್ದಾಣದ ಪಾರ್ಕಿಂಗ್ ಸ್ಥಳದಲ್ಲಿ ಬಂಧಿಸಲಾಗಿದೆ.
ಅಕ್ರಮವಾಗಿ ಚಿನ್ನವನ್ನು ಗಟ್ಟಿ ರೂಪದಲ್ಲಿ ಕ್ಯಾಲಿಕಟ್ನಿಂದ ಮಂಗಳೂರಿಗೆ ಸಾಗಾಟ ಮಾಡಲಾಗುತ್ತಿದೆ ಎಂದು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಲಾಗಿದೆ. ಈ ಚಿನ್ನವನ್ನು ಬಳಿಕ ಕರಗಿಸಿ 100 ಗ್ರಾಂ ಗಳ ಗಿಟ್ಟಿಗಳನ್ನಾಗಿ ಪರಿವರ್ತಿಸಿ ಅದರ ಮೇಲೆ ವಿದೇಶಿ ಗುರುತು ಅಚ್ಚುಗಳನ್ನು ಹಾಕಿ ಕರ್ನಾಟಕದ ವಿವಿಧ ಭಾಗಗಳಿಗೆ ಅಕ್ರಮವಾಗಿ ಸಾಗಾಟ ಮಾಡಲಾಗುತ್ತದೆ ಎಂದು ತಿಳಿದು ಬಂದಿದೆ.
ಚಿನ್ನ ಸಾಗಾಟದ ಬೆನ್ನತ್ತಿದ್ದ ಅಧಿಕಾರಿಗಳು ಮಂಗಳೂರು, ಉಡುಪಿ, ಶಿವಮೊಗ್ಗ ದಲ್ಲಿ ದಾಳಿ ನಡೆಸಿ ಬಳಿಕ ಚಿನ್ನವನ್ನು ಸಾಗಿಸಿದ ಕ್ಯಾಲಿಕಟ್ ಜ್ಯುವೆಲ್ಲರಿಗೂ ದಾಳಿ ನಡೆಸಿದ್ದಾರೆ. ಕ್ಯಾಲಿಕಟ್ನಲ್ಲಿ ಚಿನ್ನವನ್ನು ಕರಗಿಸುವವರನ್ನು ಕಂಡು ಹಿಡಿದಿದ್ದು, ಕಾರ್ಯಾಚರಣೆಯಲ್ಲಿ 4 ಕೋಟಿ ಮೌಲ್ಯದ 9.3 ಕೆಜಿ ಚಿನ್ನ, 5.2 ಕೆಜಿ ಬೆಳ್ಳಿ ಮತ್ತು 84 ಲಕ್ಷ ರೂ. ನಗದು ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಬಳಸಲಾಗುತ್ತಿದ್ದ ಎರಡು ಟೊಯೋಟಾ ಎಟಿಯೋಸ್ ಕಾರುಗಳನ್ನು ಕೂಡಾ ವಶಕ್ಕೆ ಪಡೆಯಲಾಗಿದೆ.
ಚಿನ್ನ ಸಾಗಾಟದ ಮಾಸ್ಟರ್ ಮೈಂಡ್ ನವೀನ್ ಚಂದ್ರ ಕಾಮತ್ ಸೇರಿದಂತೆ ಏಳು ಮಂದಿಯನ್ನು ಬಂಧಿಸಲಾಗಿದೆ. ದಂಧೆಯಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಶೋಧ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದೆ. ಕಾರ್ಯಾಚರಣೆಯಲ್ಲಿ ಬೆಂಗಳೂರು, ಮಂಗಳೂರು ಮತ್ತು ಶಿವಮೊಗ್ಗದಲ್ಲಿ ಒಟ್ಟು 40 ಮಂದಿ ಅಧಿಕಾರಿಗಳು ಭಾಗವಹಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.