ಕರಾವಳಿ

ಮೀನು ವಹಿವಾಟಿನ ಹಣಕ್ಕೆ ಕುಂದಾಪುರದ ಉದ್ಯಮಿ ಕೊಲೆ ಯತ್ನ-ಮಾರಕಾಸ್ತ್ರಗಳೊಂದಿಗೆ ನಾಲ್ವರ ಬಂಧನ

Pinterest LinkedIn Tumblr

ಕುಂದಾಪುರ: ಮೀನು ವ್ಯವಹಾರದ ಹಣಕಾಸಿನ ವಿಚಾರದಲ್ಲಿ ಕುಂದಾಪುರದ ವ್ಯಕ್ತಿಯ ಕೊಲೆಗೆ ಯತ್ನಿಸಿದ ಆರೋಪದಲ್ಲಿ ಮಹಾರಾಷ್ಟ್ರದ ರತ್ನಗಿರಿ ಮೂಲದ ನಾಲ್ವರನ್ನು ಕುಂದಾಪುರ ಪೊಲೀಸ್ ಉಪನಿರೀಕ್ಷಕ ಹರೀಶ್ ಆರ್. ಹಾಗೂ ತಂಡದವರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ ಘಟನೆ ಶುಕ್ರವಾರ ತಡರಾತ್ರಿ ನಡೆದಿದೆ.

ಮಹಾರಾಷ್ಟ್ರ ರತ್ನಗಿರಿ ಮೂಲದವರಾದ ಪ್ರಕರಣದ ರುವಾರಿ ದಾನೀಶ್ ಪಾಟೀಲ್ (34) ಹಾಗೂ ಆತನ ಸಹಚರರಾದ ಆಸೀಮ್ ಖಾಜಿ (39), ಮುಕದ್ದರ್ ಅಕ್ರಮ್ (34), ಪ್ರಸಾದ್ ವಿಜಯ್ ರಾಯರಿಕರ್ (47) ಬಂಧಿತ ಆರೋಪಿಗಳು.

ನಡೆದಿದ್ದೇನು?:
ಕುಂದಾಪುರದ ಮರವಂತೆಯ ಮೊಹಮ್ಮದ್ ಶಾಕೀರ್ ಎನ್ನುವ ವ್ಯಕ್ತಿ ಮೀನು ಮಾರಾಟ ಮಾಡುವ ವ್ಯವಹಾರ ಮಾಡಿಕೊಂಡಿದ್ದು ಸುಮಾರು 2 ವರ್ಷದಿಂದ ರತ್ನಗಿರಿ ಮೂಲದ ದಾನೀಶ್ ಪಾಟೀಲ್ ಸ್ನೇಹ ಮಾಡಿಕೊಂಡು ಆತನೊಂದಿಗೆ ಮೀನು ಖರೀದಿ ಮಾಡುತ್ತಾ ಬಂದಿದ್ದರು. ಎಲ್ಲಾ ವ್ಯವಹಾರ ಸುಸೂತ್ರವಾಗಿರುವಾಗಲೂ ಕೂಡ ಶಾಕೀರ್ 50 ಲಕ್ಷ ಹಣ ಕೊಡುವುದು ಬಾಕಿ ಇದೆ ಎಂದು ಆತ ಹಾಗೂ ಆತನ ತಂದೆಗೆ ಆರೋಪಿ ದಾನೀಶ್ ಪಾಟೀಲ್ ಆಗ್ಗಾಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದ. ಮಾ.20 ಶುಕ್ರವಾರ ಬೆಳಿಗ್ಗೆ ಶಾಕೀರ್ ವಾಸವಿರುವ ಕುಂದಾಪುರದ ಹಂಗಳೂರಿನ ಫ್ಲ್ಯಾಟ್ ಬಳಿ ಬಂದ ದಾನೀಶ್ ಹಾಗೂ ಮತ್ತೋರ್ವ ಹಣ ಕೊಡಬೇಕೆಂದು ಮತ್ತೆ ಬೆದರಿಕೆ ಹಾಕಿದ್ದು ಕೊಲೆ ಬೆದರಿಕೆ ಹಾಕಿದ್ದರು, ಅದಕ್ಕೆ ಶಾಕೀರ್ ತಾನು ಎಲ್ಲಾ ಹಣ ಈಗಾಗಲೇ ಕೊಟ್ಟಿದ್ದು ಬಾಕಿಯಿಲ್ಲ ಎಂದಾಗ ಆರೋಪಿಗಳು ತಾವು ಇಲ್ಲೇ ಸಮೀಪದ ಲಾಡ್ಜಿನಲ್ಲಿ ರೂಂ ಮಾಡಿದ್ದು ಅಲ್ಲಿಗೆ ಬಂದರೆ ಹಣದ ಲೆಕ್ಕ ಕೊಡುತ್ತೇವೆ ಎಂದು ತೆರಳಿದ್ದರು. ಶುಕ್ರವಾರ ರಾತ್ರಿ ಸುಮಾರಿಗೆ ಕುಂದಾಪುರ ಕಡೆಗೆ ಶಾಕೀರ್ ತನ್ನ ಸ್ನೇಹಿತ ಸುಹೈಲ್ ಜೊತೆಗೆ ಕಾರಿನಲ್ಲಿ ಬರುತ್ತಿರುವಾಗ ದಾನಿಶ್ ಹಾಗೂ ಇತರೆ ಮೂವರು ಆರೋಪಿಗಳು ಕಾರನ್ನು ಅಡ್ಡಗಟ್ಟಿದ್ದು ಕಾರಿನಿಂದ ಇಳಿದ ಶಾಕೀರ್ ಅವರನ್ನು ಕೊಲ್ಲುವ ಉದ್ದೇಶದಿಂದ ನಾಲ್ವರು ಚಾಕುವಿನಿಂದ ಹೊಟ್ಟೆ ಭಾಗಕ್ಕೆ ಬೀಸಿ ಹಣ ಕೊಡುವಂತೆ ಬೆದರಿಕೆ ಹಾಕಿದ್ದು ಅದೃಷ್ಟವಶಾತ್ ಶಾಕೀರ್ ಕೊಂಚದರಲ್ಲೇ ತಪ್ಪಿಸಿಕೊಂಡಿದ್ದಾರೆ.

ಪೊಲೀಸರ ಕ್ಷಿಪ್ರ ಕಾರ್ಯಾಚರಣೆ…
ಕೊಲೆಗೆ ಯತ್ನಿಸಿದ ದಾಂಡಿಗರಿಂದ ತಪ್ಪಿಸಿಕೊಂಡ ಶಾಕೀರ್ ತಕ್ಷಣ ಮನೆಗೆ ತೆರಳಿ ಕುಟುಂಬಿಕರಲ್ಲಿ ವಿಚಾರ ತಿಳಿಸಿ ಕೂಡಲೇ ಕುಂದಾಪುರ ಪೊಲೀಸ್ ಠಾಣೆಗೆ ಆಗಮಿಸಿ ದೂರು ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಕುಂದಾಪುರ ಪಿ‌ಎಸ್‌ಐ ಹರೀಶ್ ಆರ್. ಮತ್ತು ತಂಡ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದು ದೂರುದಾರ ಕೊಟ್ಟ ಮಾಹಿತಿಯಂತೆ ಆರೋಪಿಗಳು ತಂಗಿದ್ದ ಲಾಡ್ಜಿನತ್ತ ಸಾಗುತ್ತಾರೆ. ಆದರೆ ಅಷ್ಟರಲ್ಲಾಗಲೇ ಆರೋಪಿಗಳು ತಮ್ಮ ಝೈಲೋ ಕಾರಿನಲ್ಲಿ ಪರಾರಿಯಾಗಲು ಯತ್ನಿಸಿದ್ದು ಕಾರನ್ನು ಬೆನ್ನಟ್ಟಿದ ಪೊಲೀಸರ ತಂಡ ಕೋಟೇಶ್ವರ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸುಧಾರಿತ ಮಾರಕಾಯುಧಗಳು ವಶಕ್ಕೆ..
ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ ಮಹಾರಾಷ್ಟ್ರ ನೋಂದಣಿಯ ಝೈಲೋ ಕಾರು, 2 ದೊಡ್ಡ ಚೂರಿಗಳು, ಬಟನ್ ಚಾಕು, 2 ಸ್ಕ್ರೂ ಡ್ರೈವರ್ ವಶಕ್ಕೆ ಪಡೆಯಲಾಗಿದೆ. ಇದೆಲ್ಲವೂ ಸುಧಾರಿತ ಮಾರಕಾಯುಧಗಳಾಗಿದ್ದು ವಿದೇಶದಿಂದ ತರಿಸಿಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಆರೋಪಿಗಳು ಶಾಕೀರ್ ಕೊಲೆಗೆ ಸ್ಕೆಚ್ ರೂಪಿಸಿಯೇ ಬಂದಿದ್ದರು ಎಂಬುದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ.

ಕಾರ್ಯಾಚರಣೆ ತಂಡ..
ಉಡುಪಿ ಎಸ್ಪಿ ವಿಷ್ಣುವರ್ಧನ್, ಕುಂದಾಪುರ ಉಪವಿಭಾಗದ ಎ‌ಎಸ್ಪಿ ಹರಿರಾಂ ಶಂಕರ್, ಸಿಪಿ‌ಐ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ಕುಂದಾಪುರ ಪಿ‌ಎಸ್‌ಐ ಹರೀಶ್ ಆರ್, ಎ‌ಎಸ್‌ಐ ಸುಧಾಕರ್, ಹೆಡ್ ಕಾನ್ಸ್‌ಟೆಬಲ್‌ಗಳಾದ ಮಂಜು, ಸಂತೋಷ್, ರಾಜು ನಾಯ್ಕ್, ರಾಘವೇಂದ್ರ, ಸಿಬ್ಬಂದಿಗಳಾದ ಅಶ್ವಿನ್, ಶಾಂತರಾಮ, ರಾಮ ಗೌಡ, ಮಾರುತಿ, ರವಿ, ಶಂಕರ್, ರಾಘವೇಂದ್ರ ಮೊಗೇರ, ಸಚಿನ ಮತ್ತು ಪ್ರಸನ್ನ ಈ ಕ್ಷಿಪ್ರ ಕಾರ್ಯಾಚರಣೆ ನಡೆಸಿದ್ದರು.

(ವರದಿ- ಯೋಗೀಶ್ ಕುಂಭಾಸಿ)

Comments are closed.