ಕರಾವಳಿ

ಜನತಾ ಕರ್ಫ್ಯೂಗೆ ವ್ಯಾಪಕ ಬೆಂಬಲ : ಮಂಗಳೂರು ಸಹಿತಾ ದ.ಕ. ಜಿಲ್ಲೆ ಸ್ತಬ್ಧ

Pinterest LinkedIn Tumblr

ಜಾತಿ-ಮತ ಮತ್ತು ಪಕ್ಷ ಭೇದ ಮರೆತು ಮನೆಯಲ್ಲೇ ಉಳಿದ ನಾಗರೀಕರು

ಮಂಗಳೂರು, ಮಾರ್ಚ್.22: ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ಒಂದು ದಿನದ ಜನತಾ ಕರ್ಫ್ಯೂಗೆ ದ.ಕ. ಜಿಲ್ಲೆಯಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಮಂಗಳೂರು ಸಹಿತಾ ಇಡೀ ಜಿಲ್ಲೆ ಸ್ತಬ್ಧಗೊಂಡಿದೆ.

ಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದಾದ್ಯಂತ ಬಾನುವಾರ ಒಂದು ದಿನದ ‘ಜನತಾ ಕರ್ಫ್ಯೂ’ಗೆ ಕರೆ ನೀಡಿದ್ದರು. ಮಹಾ ಮಾರಿಕೊರೋನ ವೈರಸ್ ಹರಡುವುದನ್ನು ತಡೆಗಟ್ಟುವ ಸಲುವಾಗಿ ಮೋದಿಯವರು ಕರೆ ನೀಡಿರುವ ಜನತಾ ಕರ್ಫ್ಯೂಗೆ ದ.ಕ. ಜಿಲ್ಲೆಯ ಜನತೆ ಬೆಳಗ್ಗೆಯಿಂದಲೇ ಉತ್ತಮ ಬೆಂಬಲ ನೀಡಿದ್ದು, ಜಿಲ್ಲೆಯ ಜನರು ಜಾತಿ-ಮತ ಮತ್ತು ಪಕ್ಷ ಭೇದ ಮರೆತು ಬೆಳಗ್ಗೆ 7ರಿಂದಲೇ ‘ಜನತಾ ಕರ್ಫ್ಯೂ’ವನ್ನು ಬೆಂಬಲಿಸಿ ಮನೆಯಲ್ಲೇ ಉಳಿದುಕೊಂಡಿದ್ದಾರೆ.

ರವಿವಾರ ಜನತಾ ಕರ್ಫ್ಯೂಗೆ ಬೆಂಬಲ ನೀಡುವಂತೆ ಪ್ರಧಾನಿ ಕರೆ ನೀಡಿದ ಮೇರೆಗೆ ಖಾಸಗಿ ಮತ್ತು ಸರಕಾರಿ ಬಸ್‌ಗಳು, ರೈಲು, ರಿಕ್ಷಾ, ಟ್ಯಾಕ್ಸಿ, ವಿಮಾನ ಯಾನ ಸಹಿತ ಎಲ್ಲಾ ರೀತಿಯ ಸಂಚಾರ ಸ್ಥಗಿತಗೊಳಿಸುವುದಾಗಿ ತಿಳಿಸಿತ್ತು. ಅದರಂತೆ ಯಾವ ವಾಹನವೂ ರಸ್ತೆಗೆ ಇಳಿಯಲಿಲ್ಲ. ಅಂಗಡಿ ಮುಂಗಟ್ಟು, ಪೆಟ್ರೋಲ್ ಬಂಕ್‌ಗಳು ತೆರೆಯಲಿಲ್ಲ. ಸದಾ ಜನರ ಓಡಾಟದಿಂದ ಗಮನ ಸೆಳೆಯುತ್ತಿದ್ದ ನಗರದ ಸೆಂಟ್ರಲ್ ಮಾರ್ಕೆಟ್, ಸ್ಟೇಟ್‌ಬ್ಯಾಂಕ್  ಪರಿಸರ, ರೈಲು ಮತ್ತು ರಿಕ್ಷಾ ಹಾಗೂ ಬಸ್ ನಿಲ್ದಾಣಗಳು ಬಿಕೋ ಎನ್ನುತ್ತಿತ್ತು.

ಜನತಾ ಕರ್ಫ್ಯೂಗೆ ಮಂಗಳೂರಿನಲ್ಲಿ ಭಾರೀ ಬೆಂಬಲ ದೊರೆತಿದ್ದು, ಎಂದಿಗೂ ಜನರ ಓಡಾಟದಿಂದ ಕೂಡಿರುವ ಮಂಗಳೂರು ಇಂದು ಮುಂಜಾನೆಯೇ ಮೌನದಿಂದ ಕೂಡಿದೆ. ಭಾನುವಾರ ಮನೆಯಲ್ಲೇ ಉಳಿದುಕೊಳ್ಳಲು ತೀರ್ಮಾನ ಮಾಡಿರುವ ನಾಗರಿಕರು ಶನಿವಾರವೇ ಪೇಟೆಗೆ ತೆರಳಿ ಬೇಕಾಗಿರುವ ಅಗತ್ಯ ವಸ್ತುಗಳ ಖರೀದಿ ಮಾಡಿದ್ದಾರೆ.

ದೇವಾಲಯ, ಮಸೀದಿ, ಚರ್ಚ್‌ಗಳು ಕೂಡಾ ಮುಚ್ಚಲಾಗಿದೆ. ಪ್ರತಿ ಭಾನುವಾರ ಚರ್ಚ್‌ನಲ್ಲಿ ನಡೆಯುತ್ತಿದ್ದ ಪ್ರಾರ್ಥನೆಯನ್ನು ರದ್ದು ಮಾಡಲಾಗಿದ್ದು ಮನೆಯಲ್ಲಿಯೇ ಪ್ರಾರ್ಥನೆ ಮಾಡುವಂತೆ ಹೇಳಲಾಗಿದೆ. ಇನ್ನೂ ಸರಕು ಸಾಗಾಟದ ವಾಹನಗಳು ಕೂಡಾ ಸಂಚಾರ ಸ್ಥಗಿತಗೊಂಡಿದ್ದು ಕೆಲವು ಲಾರಿಗಳು ಪಣಂಬೂರು, ಕೂಳೂರು ಪ್ರದೇಶದಲ್ಲಿ ನಿಲ್ಲಿಸಲಾಗಿದೆ. ಹಾಗೆಯೇ ರೈಲು ನಿಲ್ದಾಣ ಕೂಡಾ ಸ್ಥಬ್ಧವಾಗಿದೆ.

ಹಾಲು ಪೇಪರ್ ಮಾರಾಟ ಯಾಥಾಸ್ಥಿತಿಯಲ್ಲಿದ್ದು ಜನರು 7 ಗಂಟೆಗೂ ಮುನ್ನವೇ ಅಗತ್ಯ ವಸ್ತುಗಳ ಖರೀದಿಗೆ ಮುಗಿಬಿದ್ದಿದ್ದು ಮುಂಜಾನೆ ನಾಲ್ಕು ಗಂಟೆಗೇ ಹಾಲು ಪೇಪರ್ ಮಾರಾಟ ಆರಂಭಗೊಂಡಿದೆ. ಆಂಬುಲೆನ್ಸ್‌ ಕೂಡಾ ಸಂಚಾರ ಮಾಡುತ್ತಿದೆ.

ಮಂಗಳೂರು ನಗರದ ಹೊರವಲಯದಲ್ಲಿರುವ ಸುರತ್ಕಲ್, ತೊಕ್ಕೊಟ್ಟು ಪರಿಸರದಲ್ಲಿ ಹಾಗೂ ರಾಷ್ಟ್ರೀಯ ಹೆದ್ದಾರಿ 66 ಬಹುತೇಕ ಸ್ತಬ್ಧ ಗೊಂಡಿದೆ. ಮುಡಿಪು, ಕೊಣಾಜೆ, ಅಸೈಗೋಳಿ, ನಾಟೆಕಲ್ ಸಂಪೂರ್ಣ ಬಂದ್ ಆಗಿವೆ. ಅಂಬುಲೆನ್ಸ್ ಮತ್ತು ಸರಕಾರಿ ಮತ್ತು ಖಾಸಗಿ ಆಸ್ಪತ್ರೆಗಳ ತುರ್ತು ಘಟಕಗಳು ಮಾತ್ರ ತೆರೆದಿತ್ತು. ನಗರದಲ್ಲಿ ಒಂದೆರಡು ಪೆಟ್ರೋಲ್ ಬಂಕ್‌ಗಳು ಮತ್ತು ಮೆಡಿಕಲ್ ಅಂಗಡಿಗಳು ತೆರೆದಿತ್ತು. ಉಳಿದಂತೆ ಮಂಗಳೂರು ಸ್ತಬ್ಧಗೊಂಡಿದೆ.

Comments are closed.