ಕರಾವಳಿ

ಮಂಗಳೂರಿನಲ್ಲಿ ಮೊದಲ ಕೊರೊನಾ ಪ್ರಕರಣ ಪತ್ತೆ: 165 ಪ್ರಯಾಣಿಕರ ಮೇಲೆ ನಿಗಾ

Pinterest LinkedIn Tumblr

ಮಂಗಳೂರು ಮಾರ್ಚ್ .22: ದ.ಕ.ಜಿಲ್ಲೆಯಲ್ಲಿ ಕೊರೊನ ವೈರಸ್ ಅನ್ನು ಹತ್ತಿಕ್ಕುವಲ್ಲಿ ಜಿಲ್ಲಾಡಳಿತ ಬಹಳಷ್ಟು ಕ್ರಮಗಳನ್ನು ಕೈಗೊಂಡಿದ್ದರೂ, ಇದೀಗ ಮಂಗಳೂರಿನಲ್ಲಿ ಮೊದಲ ಕೊರೊನಾ ಪ್ರಕರಣ ದೃಢಪಟ್ಟಿದೆ.

ಇತ್ತೀಚಿಗೆ ದುಬೈನಿಂದ ಆಗಮಿಸಿದ್ದ ಭಟ್ಕಳ ಮೂಲದ ವ್ಯಕ್ತಿಯೊಬ್ಬರಲ್ಲಿ (22 ವಯಸ್ಸು) ಕೊರೊನಾವೈರಸ್ ಸೋಂಕು ಇರುವುದು ದೃಢಪಟ್ಟಿದೆ ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ತಿಳಿಸಿದ್ದಾರೆ . ಈ ವ್ಯಕ್ತಿಗೆ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಐಸೊಲೆಸ್ ವಾರ್ಡ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದವರು ಹೇಳಿದ್ದಾರೆ.

ಸೋಂಕಿತ ವ್ಯಕ್ತಿ ಮಾರ್ಚ್ 19ರಂದು ಸ್ಪೈಸ್ ಜೆಟ್ ವಿಮಾನದ ಮೂಲಕ ಬೆಳಗ್ಗೆ 5:45ಕ್ಕೆ ದುಬೈಯಿಂದ ಆಗಮಿಸಿದ್ದರು. ವಿಮಾನ ನಿಲ್ದಾಣದಲ್ಲಿ ಅವರನ್ನು ಪರೀಕ್ಷೆಗೊಳಪಡಿಸಿದಾಗ ವೈರಸ್ ಲಕ್ಷಣಗಳನ್ನು ಕಾಣಿಸಿಕೊಂಡಿದ್ದು, ನೇರವಾಗಿ ಅವರನ್ನು ಅಂಬುಲೆನ್ಸ್ ಮೂಲಕ ನಗರದ ವೆನ್‌ಲಾಕ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಭಾನುವಾರ ಪಾಸಿಟಿವ್‌‌‌‌ ರಿಪೋರ್ಟ್‌ ದೊರೆತಿದ್ದು ವ್ಯಕ್ತಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಡಿಸಿ ತಿಳಿಸಿದ್ದಾರೆ.

ಅವರನ್ನು ವಿಮಾನ ನಿಲ್ದಾಣದಿಂದ ನೇರವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಹಾಗಾಗಿ ಇತರ ಜನರು ಅವರ ಸಂಪರ್ಕದಲ್ಲಿರುವ ಸಾಧ್ಯತೆಯಿಲ್ಲ. ಆದರೆ ವಿಮಾನದಲ್ಲಿದ್ದ 165 ಪ್ರಯಾಣಿಕರ ಮೇಲೂ ನಿಗಾ ಇಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Comments are closed.