ಕರಾವಳಿ

ಮೋದಿ ನೀಡಿದ ‘ಜನತಾ ಕರ್ಫ್ಯೂ’ ಕರೆಗೆ ಉಡುಪಿ ಜಿಲ್ಲೆಯಾದ್ಯಂತ ಜನರ ಸ್ವಯಂಪ್ರೇರಿತ ಸ್ಪಂದನೆ

Pinterest LinkedIn Tumblr

ಕುಂದಾಪುರ: ಕೊರೋನಾ ವೈರಸ್ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ‘ಜನತಾ ಕರ್ಫ್ಯೂ’ ಕರೆಗೆ ಉಡುಪಿ ಜಿಲ್ಲೆಯಲ್ಲಿ ಅತ್ಯುತ್ತಮ ಸ್ಪಂದನೆ ಸಿಕ್ಕಿದೆ. ಜನರೇ ಸ್ವಯಂಪ್ರೇರಿತರಾಗಿ ಮನೆಯಲ್ಲಿ ಇರುವ ಮೂಲಕ ‘ನಮೋ’ ಕರೆಗೆ ತಮ್ಮ ಸಹಮತ ನೀಡಿದರು. ಉಡುಪಿ ಜಿಲ್ಲಾದ್ಯಂತ ಈ ಜನರ ಸ್ವಂಯಂ ಕರ್ಫ್ಯೂ ಉತ್ತಮ ರೆಸ್ಫಾನ್ಸ್ ಕಂಡಿದ್ದು ಹೊಸದೊಂದು ಇತಿಹಾಸಕ್ಕೆ ಮುನ್ನುಡಿಯಾಗಿತ್ತು.

ಉಡುಪಿ ಜಿಲ್ಲೆಯ ಕಾಪು, ಕಾರ್ಕಳ, ಉಡುಪಿ, ಕುಂದಾಪುರ ಬೈಂದೂರಿನಲ್ಲಿ ಬೆಳಗ್ಗಿನಿಂದಲೇ ಪೇಟೆ ಅಲ್ಲದೆ ಸಣ್ಣಪುಟ್ಟ ಪಟ್ಟಣ ಹಾಗೂ ಇಡೀ ಗ್ರಾಮೀಣ ಭಾಗದಲ್ಲೂ ಜನತಾ ಕರ್ಪ್ಯೂ ಮೂಲಕ ತಮಗೆ ತಾವೇ ನಿರ್ಬಂಧ ಹೇರಿಕೊಂಡು ಜನತೆ ಗೃಹಬಂಧಿಯಾದರು. ರಾಜ್ಯ ಸಾರಿಗೆ ಖಾಸಗಿ ಬಸ್ಸುಗಳು ರಸ್ತೆಗಿಳಿಯದೆ ಇದ್ದುದ್ದರಿಂದ ಜಿಲ್ಲೆಯಿಂದ ರಾಜ್ಯ ಹಾಗೂ ಇತರೆ ಜಿಲ್ಲೆ ಮಾತ್ರವಲ್ಲದೇ ಜಿಲ್ಲೆಯೊಳಗೆ ಸಂಪರ್ಕ ಕೊಂಡಿ ಕಳಚಿಕೊಂಡಿದ್ದು, ಜೊತೆ ಭಾನುವಾರ ರಜಾ ದಿನವಾಗಿದ್ದರಿಂದ ಹೊರಗಿನಿಂದ ಪೇಟೆಗೆ ಜನರೇ ಬರಲಿಲ್ಲ. ಸ್ವಂತ ವಾಹನ ಇದ್ದವರು ಅಲ್ಲೊಬ್ಬರು ಇಲ್ಲೊಬ್ಬರು ಸಿಕ್ಕರೂ ಇಡೀ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಗ್ರಾಮೀಣ ಭಾಗದ ರಸ್ತೆಗಳು ಖಾಲಿಖಾಲಿಯಾಗಿತ್ತು. ವಾಣಿಜ್ಯ ಸಂಕೀರ್ಣ, ಅಂಗಡಿ ಮುಂಗಟ್ಟು, ಹೊಟೇಲ್ ಸಮುಚ್ಚಯ ಹಾಗಿರಲಿ ಗೂಡಂಗಡಿಗಳು ಕೂಡಾ ಬಂದ್ ಮಾಡುವ ಮೂಲಕ ಜನತಾ ಕರ್ಪ್ಯೂ ಬೆಂಬಲಿಸಿದ್ದು ವಿಶೇಷವಾಗಿತ್ತು.

ಅಲ್ಲೊಂದು ಇಲ್ಲೊಂದು ಪೆಟ್ರೋಲ್ ಬಂಕ್, ಮೆಡಿಕಲ್ ಸ್ಟೋರ್, ಆಸ್ಪತ್ರೆ ಬಾಗಿಲು ತೆಗೆದಿದ್ದರೂ ಜನರು ಇರಲಿಲ್ಲ. ನಿತ್ಯ ಜನದಟ್ಟಣೆಯ ತಾಣವಾಗಿರುತ್ತಿದ್ದ ಮೀನುಮಾರುಕಟ್ಟೆ, ಹೂವಿನ ಮಾರುಕಟ್ಟೆ, ಮಾಂಸದ ಅಂಗಡಿ ಎಲ್ಲೂ ವ್ಯವಹಾರವಿರಲಿಲ್ಲ. ನಗರಸಭೆ, ಪುರಸಭೆ ಪೌರ ಕಾರ್ಮಿಕರು, ಮೆಸ್ಕಾಂ ಸಿಬ್ಬಂದಿ ಎಂದಿನಂತೆ ಕರ್ತವ್ಯ ನಿರ್ವಹಿಸಿದರು. ಮೀನುಗಾರರು ಕೂಡಾ ಕಡಲಿಗಿಳಿಯದೆ ಬಲೆ ದುರಸ್ತಿ ಮಾಡುತ್ತಿರುವ ದೃಶ್ಯ ಕಂಡು ಬಂತು. ಜನತಾ ಕರ್ಪ್ಯೂ ಹಿನ್ನೆಲೆಯಲ್ಲಿ ಉಡುಪಿಯ ಮಲ್ಪೆ, ಕುಂದಾಪುರ ತಾಲೂಕಿನ ಪ್ರಮುಖ ಬಂದರುಗಳಾದ ಗಂಗೊಳ್ಳಿ, ಮರವಂತೆ, ಕೊಡೇರಿ ಮೊದಲಾದೆಡೆ ಬಿಕೋ ಎನ್ನುತ್ತಿತ್ತು. ಮೀನುಗಾರರು ಕಡಲಿಗಿಳಿದೆ ಮನೆಯಲ್ಲೇ ಉಳಿದಿದ್ದರು. ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಕಾಪು, ತ್ರಾಸಿ ಮರವಂತೆ ಬೀಚ್ ಆಸುಪಾಸು ಪ್ರವಾಸಿಗರೇ ಇರಲಿಲ್ಲ.

ರಸ್ತೆಯಲ್ಲಿ ಕಾರ್ ಬೈಕ್‌ಗಳ ಓಡಾಟ ಬೆರಣಿಕೆಯಷ್ಟಿದ್ದು, ಬೇರೆ ಬರೆ ಕಡೆಯಿಂದ ಹೊರಟ ಲಾರಿಗಳ ಸಂಚಾರ ಕೂಡಾ ವಿರಳವಾಗಿತ್ತು. ಸಾರಿಗೆ ಹಾಗೂ ಖಾಸಗಿ ವಾಹನ ರಸ್ತೆಗೆ ಇಳಿಯದಿದ್ದರಿಂದ ಬಸ್ ನಿಲ್ದಾಣ ಖಾಲಿ ಖಾಲಿಯಾಗಿದ್ದು, ಅಂಗಡಿ ಮುಂಗಟ್ಟು ಕೂಡಾ ಬಂದ್ ಮಾಡಿದ್ದಲ್ಲದೆ, ಜನ ಸಂಚಾರವೇ ಇರಲಿಲ್ಲ. ಒಟ್ಟಾರೆ ಕರೋನಾ ವೈರಸ್ ಭೀತಿಗೆ ಜನ ಮನೆ ಸೇರಿ ತಮಗೆ ತಾವೇ ನಿರ್ಬಂಧ ಹೇರಿಕೊಳ್ಳುವ ಮೂಲಕ ಪ್ರಕಿಕ್ರಿಯೆ ನೀಡಿದ್ದು, ಕರೋನಾ ಎಷ್ಟು ಭಯ ಹುಟ್ಟಿಸಿದೆ ಎನ್ನುವುದಕ್ಕೆ ಸಾಕ್ಷಿ.

ಸರಕಾರದ ಆದೇಶ ಹಾಗೂ ಬಿಷಪ್ ಅವರ ಸೂಚನೆಯಂತೆ ಚರ್ಚಿನಲ್ಲಿ ಕರೋನಾ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ. ಚರ್ಚ್ ಬಾಗಿಲು ತೆಗೆದಿದ್ದರೂ ಸಾಮೂಹಿಕ ಪ್ರಾರ್ಥನೆಗೆ ಅವಕಾಶವಿಲ್ಲ. ಚರ್ಚಿನ ಬದಲು ಮನೆಯಲ್ಲಿ ಬೈಬಲ್ ಪಠಣ, ಪ್ರಾರ್ಥನೆ ಸಲ್ಲಿಸುವ ಜೊತೆ ಕ್ರೈಸ್ತ ಸಮಾಜದ ಎಲ್ಲರೂ ಕರೋನಾ ನಿವಾರಣೆಗಾಗಿ ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಕರೋನಾ ಹಬ್ಬುವಿಕೆ ಭೀಕರವಾಗಿದ್ದು, ಜನದಟ್ಟಣೆ ಕರೋನಾ ಹರಡಲು ದಾರಿ ಮಾಡಿಕೊಡುತ್ತಿದ್ದು, ಗುಂಪು ಸೇರದೆ ಜನ ದಟ್ಟಣೆಯಿಂದ ದೂರ ಉಳಿಯುವ ಮೂಲಕ ರೋಗ ಹಬ್ಬದಂತೆ ತಡೆಯಬಹುದಾಗಿದ್ದು ಈ ನಿಟ್ಟಿನಲ್ಲಿ ಜನತಾ ಕರ್ಪ್ಯೂ ಸ್ವಾಗತಾರ್ಹ. ಸ್ವಚ್ಛತೆ, ಹಾಗೂ ಮುಂಜಾಗರೂಕತೆ ವಹಿಸುವ ಮೂಲಕ ಕರೋನಾ ತಡೆಯಲು ಸಾಧ್ಯ. ಕರೋನಾ ಬಗ್ಗೆ ಜಾಗೃತಿ ಮೂಡಿಸಿದ ಮಾದ್ಯಮದ ಕೆಲಸ ಶ್ಲಾಘನೀಯ
– ಫಾ. ಸ್ಟ್ಯಾನಿ ತಾವ್ರೋ, ಕುಂದಾಪುರ ವಲಯ ಪ್ರಧಾನ ಧರ್ಮಗುರು

Comments are closed.