ಕರಾವಳಿ

ದಿನ, ರಾತ್ರಿ ಎನ್ನದೆ ಸೇವೆ ಸಲ್ಲಿಸುವವರಿಗೆ ಚಪ್ಪಾಳೆಯ ಬೆಂಬಲ : ಶಾಸಕ ಕಾಮತ್

Pinterest LinkedIn Tumblr

ಮಂಗಳೂರು. ಮಾರ್ಚ್.22: ಪ್ರಧಾನಿ ನರೇಂದ್ರ ಮೋದಿಯವರು ಕರೆ ನೀಡಿರುವ ಜನತಾ ಕರ್ಫ್ಯೂ ಆಂದೋಲನದಲ್ಲಿ ಪಾಲ್ಗೊಂಡು ತಮ್ಮ ಮನೆಯಲ್ಲಿ ನಿಂತು ದೇಶದಲ್ಲಿ ಕೊರೋನಾ ವೈರಸ್ ವಿರುದ್ಧ ಹೋರಾಡುವ ಎಲ್ಲರನ್ನೂ ಶಂಖ,ಜಾಗಟೆ, ಚಪ್ಪಾಳೆ ತಟ್ಟುವ ಮೂಲಕ ಶಾಸಕ ವೇದವ್ಯಾಸ್ ಕಾಮತ್ ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಅಭಿನಂದಿಸಿದರು.

ಈ ಬಗ್ಗೆ ಮಾತನಾಡಿದ ಅವರು, ಜಗತ್ತಿನಲ್ಲಿ ಮರಣ ಮೃದಂಗ ಬಾರಿಸುವ ಮೂಲಕ ಜನರಲ್ಲಿ ಭೀತಿ ಉಂಟು ಮಾಡಿರುವ ಕೊರೋನಾ ವೈರಸ್ ನಿಗ್ರಹಕ್ಕಾಗಿ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕರೆ ನೀಡಿರುವ ಜನತಾ ಕರ್ಫ್ಯೂ ಅಭಿಯಾನದಲ್ಲಿ ನಮ್ಮ ಕುಟುಂಬದ ಎಲ್ಲಾ ಸದಸ್ಯರೂ ಪಾಲ್ಗೊಂಡಿದ್ದೇವೆ. ಹಾಗೂ ದಿನ ರಾತ್ರಿಯೆನ್ನದೆ ಕೊರೋನಾ ವೈರಸ್ ಪೀಡಿತರ ಶುಶ್ರೂಷೆ ಮಾಡುತ್ತಿರುವ ವೈದ್ಯರನ್ನು, ಇಂತಹ ಕಠಿಣ ಪರಿಸ್ಥಿತಿಯಲ್ಲೂ ಕೂಡ ಗಡಿಯಲ್ಲಿ ದೇಶ ಕಾಯುವ ಯೋಧರನ್ನು ಬೆಂಬಲಿಸಲು ಧೀರ್ಘ ಕರತಾಡನ ಮಾಡುವ ಮೂಲಕ ಅವರೊಂದಿಗೆ ಭಾರತೀಯರೆಲ್ಲರೂ ಜೊತೆಗೂಡಿದ್ದಾರೆ ಎನ್ನುವ ಸಂದೇಶ ರವಾನಿಸಿದ್ದೇವೆ ಎಂದರು.

ಮನುಷ್ಯನಿಂದ ಮನುಷ್ಯನಿಗೆ ಹರಡುವ ಈ ವೈರಸ್ ನಿಗ್ರಹಿಸಲು ಭಾರತದ ಪ್ರತಿಯೊಬ್ಬ ನಾಗರಿಕನೂ ಜೊತೆಗೂಡಬೇಕು. ಅದಕ್ಕಾಗಿಯೇ ಪ್ರಧಾನಮಂತ್ರಿಗಳು ಜನತಾ ಕರ್ಫ್ಯೂ ಎನ್ನುವ ಆಂದೋಲನದ ಮೂಲಕ ರೋಗಾಣುಗಳು ಹರಡದಂತೆ ಮುಂಜಾಗ್ರತಾ ಕ್ರಮವನ್ನು ಅನುಸರಿಸಿ ಎಂದು ಕರೆ ನೀಡಿದ್ದರು‌.

ಬಹುತೇಕ ಎಲ್ಲಾ ಜನರೂ ಕೂಡ ಈ ಆಂದೋಲನದಲ್ಲಿ ಸಕ್ರಿಯವಾಗಿ ಭಾಗವಹಿಸಿ ಯಶಸ್ವಿಗೊಳಿಸಿದ್ದಾರೆ. ಆದರೆ ಈ ರೋಗಾಣುಗಳ ಕುರಿತು ಅತ್ಯಂತ ಜಾಗರೂಕತೆಯಿಂದಿರಬೇಕು ಎಂದು ಮನವಿ ಮಾಡಿ ಕೊಂಡಿದ್ದಾರೆ.

Comments are closed.