ಕರಾವಳಿ

ಉದ್ಯಮಿ, ಚಿತ್ರ ನಿರ್ಮಾಪಕ ಕಪಾಲಿ ಮೋಹನ್ ಬೆಂಗಳೂರಿನಲ್ಲಿ ಆತ್ಮಹತ್ಯೆ

Pinterest LinkedIn Tumblr

ಕುಂದಾಪುರ: ಉದ್ಯಮಿ ಹಾಗೂ ಚಿತ್ರ ನಿರ್ಮಾಪಕ ಕುಂದಾಪುರದ ವಕ್ವಾಡಿ ಮೂಲದ ಬೆಂಗಳೂರು ನಿವಾಸಿ ವಿ.ಕೆ. ಮೋಹನ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಪಿಣ್ಯದಲ್ಲಿರುವ ಅವರದೇ ಹೋಟೆಲಿನಲ್ಲಿ ಸೋಮವಾರ ಬೆಳಿಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಆರ್ಥಿಕ ಮುಗ್ಗಟ್ಟಿನಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ‌.

ಬಡತನದಿಂದ ಬೆಳೆದ ವಿ.ಕೆ….
ಬಡತನದಲ್ಲಿ ಬೆಳೆದ ವಿ.ಕೆ. ಮೋಹನ್ ಬಾಲ್ಯದಲ್ಲಿಯೇ ಕುಟುಂಬ ನಿರ್ವಹಣೆಗಾಗಿ ಬೆಂಗಳೂರು ಸೇರಿದರು. ಅಲ್ಲಿ ಹೋಟೆಲ್ ಕೆಲಸದ ಜೊತೆಗೆ ಶ್ರಮವಹಿಸಿ ದುಡಿದು ತನ್ನದೇ ಪುಟ್ಟ ಹೊಟೆಲ್ ಆರಂಭಿಸಿದರು. ದುಡಿಮೆ ಮೇಲಿದ್ದ ಪ್ರಾಮಾಣಿಕತೆ ಅವರ ಕೈಹಿಡಿದಿದ್ದು ಕೆಲವೇ ವರ್ಷದಲ್ಲಿ ಯಶಸ್ವಿ ಉದ್ಯಮಿಯಾಗಿ ಬೆಳೆದರು. ಹೋಟೆಲ್ ಉದ್ಯಮದ ಜೊತೆಗೆ ಫೈನಾನ್ಸ್ ಹಾಗೂ ಚಿತ್ರ ನಿರ್ಮಾಪಕರಾಗಿಯೂ ಗುರುತಿಸಿಕೊಂಡು ಕಪಾಲಿ ಮೋಹನ್ ಎಂದೇ ಖ್ಯಾತರಾಗಿದ್ದರು‌. ಕೊಡುಗೈ ದಾನಿಯಾಗಿದ್ದ ಅವರು ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಾ ಬಂದವರು. ಅಲ್ಲದೇ ಡಾ. ರಾಜಕುಮಾರ್ ಕುಟುಂಬದ ಹತ್ತಿರದ ಒಡನಾಡಿಯಾಗಿದ್ದರು. ಅಲ್ಲದೇ ರಾಜಕುಮಾರ್ ಅಭಿನಯದ ಕೆಲ ಚಿತ್ರಗಳು ಮತ್ತು ಪುನೀತ್ ರಾಜ್ ಕುಮಾರ್, ಎಸ್. ನಾರಾಯಣ್ ಅಭಿಯದ ಚಿತ್ರಗಳಲ್ಲಿ ನಟಿಸಿದ್ದರು. ತನ್ನೂರಿನಲ್ಲಿ ನಡೆಯುವ ಜಾತ್ರೆ ಮೊದಲಾದ ಕಾರ್ಯಕ್ರಮಗಳಿಗೆ ಸಿನೆಮಾ ತಾರೆಯರನ್ನು ಕರೆಸುತ್ತಿದ್ದರು. ಸುಮಾರು 15 ವರ್ಷಗಳ ಹಿಂದೆ ವಕ್ವಾಡಿಗೆ ಡಾ. ರಾಜಕುಮಾರ್ ಆಗಮಿಸಿದ್ದು ಇತಿಹಾಸವಾಗಿತ್ತು.

ಆರ್ಥಿಕ ಸಂಕಷ್ಟವೇ ಆತ್ಮಹತ್ಯೆಗೆ ಕಾರಣ…
ಕಳೆದ ಒಂದೂವರೆ ವರ್ಷದ ಹಿಂದೆ ಸಮ್ಮಿಶ್ರ ಸರ್ಕಾರವಿದ್ದ ವೇಳೆ ಮೋಹನ್ ನಡೆಸುತ್ತಿದ್ದರೆನ್ನಲಾದ ರಿಕ್ರಿಯೇಶನ್ ಕ್ಲಬ್ ಹಾಗೂ ನಿವಾಸದ ಮೇಲೆ ಸಿಸಿಬಿ ದಾಳಿ ನಡೆದಿತ್ತು. ಇದಾದ ಬಳಿಕ ವಿ.ಕೆ. ಬಹಳಷ್ಟು ನೊಂದಿದ್ದರು. ಅಲ್ಲದೇ ಕೋಟಿಗಟ್ಟಲೆ ಬಂಡವಾಳ ಹಾಕಿದ್ದ ಪಿಣ್ಯ ಬಸ್ ನಿಲ್ದಾಣದ ಹೋಟೆಲ್ ಕೂಡ ಮಂದಗತಿಯಲ್ಲಿ ನಡೆದ ಹಿನ್ನೆಲೆ ಆರ್ಥಿಕವಾಗಿ ಬಹಳಷ್ಟು ಹಿನ್ನಡೆಯಾಗಿತ್ತು. ಇದೇ ನೋವನ್ನು ತನ್ನ ಆತ್ನೀಯರ ಬಳಿ ಮೋಹನ್ ಹೇಳಿಕೊಳ್ಳುತ್ತಿದ್ದರು.

ಭಾನುವಾರ ರಾತ್ರಿ ತನ್ನ ಹೋಟೆಲಿಗೆ ಬಂದು ಊಟ ಮುಗಿಸಿ ರೂಂ ಬಾಯ್ ಬಳಿ ತಾನು ಇಲ್ಲೆ ಮಲಗುವುದಾಗಿ ಹೇಳಿದ್ದ ಮೋಹನ್ ಬೆಳಿಗ್ಗೆ ಬಾಗಿಲು ತೆಗೆಯದ ಹಿನ್ನೆಲೆ ಸಿಬ್ಬಂದಿಗಳು ಕಿಟಕಿ ಮೂಲಕ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಕಾಣಿಸಿದ್ದು ಕೂಡಲೇ ಅವರ ಕುಟುಂಬದವರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಪಿಣ್ಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ‌.

ಮೃತ ವಿ.ಕೆ. ಮೋಹನ್ ಅವರು ತಾಯಿ, ಪತ್ನಿ, ಓರ್ವ ಪುತ್ರಿ, ಪುತ್ರ, ಸಹೋದರ, ಸಹೋದರಿಯರನ್ನು ಅಗಲಿದ್ದಾರೆ.

(ವರದಿ- ಯೋಗೀಶ್ ಕುಂಭಾಸಿ)

Comments are closed.