ಕುಂದಾಪುರ: ಎರಡು ದಿನಗಳಿಂದ ಕುಂದಾಪುರ ನಗರದಲ್ಲಿ ಸಡಿಲಗೊಳಿಸಿದ್ದ ಕರ್ಫ್ಯೂನಿಂದಾಗಿ ಕೆಲವರು ಅನಗತ್ಯವಾಗಿ ರಸ್ತೆಗಿಳಿಯುತ್ತಿರುವುದನ್ನು ಮನಗಂಡ ಎಎಸ್‌ಪಿ ಬುಧವಾರ ನಗರದ ವಿವಿಧ ಕಡೆಗಳಲ್ಲಿ ನಾಕಾಬಂಧಿ ವಿಧಿಸಿ ಪೊಲೀಸ್ ಸಿಬ್ಬಂದಿಗಳನ್ನು ನಿಯೋಸಿದ್ದರು. ಗುರುವಾರವೂ ಕೂಡ ಪ್ರತೀ ಚೆಕ್‌ಪೋಸ್ಟ್ ಗಳಲ್ಲೂ ವಾಹನಗಳನ್ನು ತಪಾಸಣೆ ನಡೆಸಿ ಅಗತ್ಯವಿದ್ದ ವಾಹನ ಸವಾರರಿಗೆ ಮಾತ್ರ ಮುಂದೆ ಸಾಗಲು ಅನುಮತಿ ಕೊಡುತ್ತಿದ್ದಾರೆ. ನಿಯಮ ಪಾಲಿಸಿದವರಿಗೆ ಲಾಠಿ ರುಚಿಯ ಜೊತೆ ಕರ್ಫ್ಯೂ ಹಾಗೂ ಕೊರೋನಾ ಎಚ್ಚರಿಕೆ ನೀಡುವುದು ಮಾತ್ರವಲ್ಲದೇ ಬಸ್ಕಿ ಹೊಡೆಸುತ್ತಿದ್ದಾರೆ.
ಲಾಠಿ ಹಿಡಿದ ಎಸಿ…
ಅವಶ್ಯವಿದ್ದರೆ ಪೊಲೀಸರು ಮಾತ್ರವಲ್ಲ, ಎಸಿಯೂ ಲಾಠಿ ಹಿಡಿತಾರೆ ಎಂದು ಬುಧವಾರ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಕುಂದಾಪುರದ ಸಹಾಯಕ ಆಯುಕ್ತ ರಾಜು ಕೆ ಇಂದು ಬೆಳಿಗ್ಗೆ ಕುಂದಾಪುರದಲ್ಲಿ ಲಾಠಿ ಹಿಡಿದು ಫೀಲ್ಡಿಗಿಳಿದರು.
ಅಂಗಡಿ ಮಾಲಿಕರಿಗೆ ಎಚ್ಚರಿಕೆ…
ತರಕಾರಿ ಹಾಗೂ ದಿನಸಿ ಅಂಗಡಿಗಳಲ್ಲಿ ದುಪ್ಪಟ್ಟು ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಕುಂದಾಪುರ ನಗರ ಠಾಣೆಯ ಠಾಣಾಧಿಕಾರಿ ಹರೀಶ್ ನಾಯ್ಕ್ ಅವರೊಂದಿಗೆ ದಿಢೀರ್ ದಾಳಿ ನಡೆಸಿದ ಸಹಾಯಕ ಆಯಕ್ತ ರಾಜು ಕೆ ಅಂಗಡಿ ಮಾಲೀಕರಿಗೆ ಖಟಕ್ ಎಚ್ಚರಿಕೆ ನೀಡಿದ್ದಾರೆ. ಸರ್ಕಾರ ನೀಡಿರುವ ಆದೇಶಗಳನ್ನು ಸರಿಯಾಗಿ ಪಾಲಿಸಬೇಕು. ಅಂಗಡಿ ಎದುರು ಅಂತರ ಕಾಯ್ದುಕೊಳಲು ಗೆರೆಗಳನ್ನು ಹಾಕಬೇಕು. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಜನರಿಗೆ ಶೋಷಣೆ ಮಾಡಬೇಡಿ. ಬೆಲೆ ಏರಿಕೆ ಮಾಡಿದರೆ ದೇವರು ಕೂಡ ಮೆಚ್ಚೋದಿಲ್ಲ. ಒಂದು ವೇಳೆ ಅಗತ್ಯ ವಸ್ತುಗಳಿಗೆ ದುಪ್ಪಟ್ಟು ಹಣ ತೆಗೆದುಕೊಳ್ಳುವುದು ಗಮನಕ್ಕೆ ಬಂದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇನೆಂದು ವಾರ್ನಿಂಗ್ ನೀಡಿದ್ದಾರೆ.
ಇಂದು ಕುಂದಾಪುರ ಶಾಸ್ತ್ರೀವೃತ್ತದಲ್ಲಿ ಅಳವಡಿಸಿರುವ ಚೆಕ್‌ಪೋಸ್ಟ್‌ನಲ್ಲಿ ವಾಹನ ವಾಹನ ತಪಾಸಣೆ ನಡೆಸಿದ ಎಸಿ ರಾಜು ಕೆ, ಕಾನೂನು ಮೀರಿದವರಿಗೆ ಪಾಠ ಹೇಳಿದ್ದಾರೆ. ಪೊಲೀಸರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಅವರ ಮಾತಿಗೆ ಬೆಲೆ ಕೊಡಿ. ನಿಮ್ಮ ಮೇಲಿರುವ ಕಾಳಜಿಗೆ ನಾವೆಲ್ಲರೂ ಶ್ರಮವಹಿಸುತ್ತಿದ್ದೇವೆ ಎಂದರು.
ಈ ವೇಳೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಸಿ ರಾಜು, ಕೆ, ಅಲ್ಪಸ್ವಲ್ಪ ತರಕಾರಿ ತೆಗೆದುಕೊಳ್ಳುವ ಉದ್ದೇಶ ಇಟ್ಟುಕೊಂಡು ಸಾರ್ವಜನಿಕರು ಹೊರಗಡೆ ಬರಬಾರದು. ನಿನ್ನೆಯೂ ಎಲ್ಲರಲ್ಲಿಯೂ ವಿನಂತಿಸಿಕೊಂಡಿದ್ದೇನೆ. ಮತ್ತೆ ಮತ್ತೆ ಈ ರೀತಿಯ ತಪ್ಪುಗಳು ನಡೆದರೆ ನಾನು ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಎಲ್ಲವನ್ನೂ ಬಂದ್ ಮಾಡಬೇಕಾಗುತ್ತದೆ. ನಾವಿರೋದೆ ಜನರಿಗೋಸ್ಕರ, ಜನರಗಳ ಆರೋಗ್ಯ ಕಾಪಾಡುವುದಕ್ಕೋಸ್ಕರ. ದಯವಿಟ್ಟು ಪೊಲೀಸರ ಮಾತು ಕೇಳಿ. ಅರ್ಥ ಮಾಡಿಕೊಂಡು ಮನೆಯಲ್ಲೇ ಇರಿ ಎಂದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.