ಮಂಗಳೂರು, ಮಾರ್ಚ್.28 : ದ.ಕ. ಜಿಲ್ಲೆಯಲ್ಲಿ ಕೊರೋನ ಪಾಸಿಟಿವ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಜಿಲ್ಲೆಯಲ್ಲಿ ಶುಕ್ರವಾರ ಒಂದೇ ದಿನ ಎರಡು ಕೊರೋನ ವೈರಸ್ ದೃಢಗೊಂಡ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಾದ್ಯಂತ ಶನಿವಾರ ಸಂಪೂರ್ಣ ಬಂದ್ ಕರೆ ನೀಡಲಾಗಿದ್ದು, ಇಂದು ಮುಂಜಾನೆಯಿಂದಲೇ ಮಂಗಳೂರು ಸಹಿತಾ ದ.ಕ.ಜಿಲ್ಲೆ ಸಂಪೂರ್ಣ ಬಂದ್ ಆಗಿದೆ.
ಕಳೆದ ಮೂರು ದಿನದಲ್ಲಿ ಕೆಲವು ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದ ಪೊಲೀಸರು ಶನಿವಾರ ತುರ್ತು ಸೇವೆಯ ವಾಹನಗಳ ಮತ್ತು ಸಿಬ್ಬಂದಿ ವರ್ಗದ ಓಡಾಟ ಹೊರತುಪಡಿಸಿ ಬೇರೆ ಎಲ್ಲಾ ವಾಹನ ಮತ್ತು ಜನ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ. ಬಂದ್ ಬಗ್ಗೆ ಮಾಹಿತಿ ಇಲ್ಲದೆ ರಸ್ತೆಗೆ ಇಳಿದಿದ್ದ ವಾಹನ, ಸವಾರರನ್ನು ಪೊಲೀಸರು ಬಂದ್ ಕುರಿತು ಮನವರಿಕೆ ಮಾಡಿಕೊಟ್ಟು ವಾಪಸ್ ಕಳುಹಿಸಿದ್ದಾರೆ. ಮಂಗಳೂರಿನಲ್ಲಂತೂ ಯಾರೂ ಕೂಡ ರಸ್ತೆಗಿಳಿಯದೆ ಇದ್ದುದ್ದರಿಂದ ಹಾಗೂ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದ್ದರಿಂದ ನಗರದ ರಸ್ತೆ ಬಿಕೋ ಎನ್ನುತ್ತಿತ್ತು.
ಜಿಲ್ಲೆಯಲ್ಲಿ ಶುಕ್ರವಾರ ಎರಡು ಪ್ರಕರಣ ದೃಡ :
ಬಂಟ್ವಾಳ ತಾಲೂಕಿನ ಸಜಿಪನಡು ಗ್ರಾಮದ ಹಸುಳೆಗೆ ಕೋವಿಡ್ -19 (ಕೊರೋನ) ಸೊಂಕು ತಗಲಿರುವುದು ದೃಡಪಟ್ಟಿದೆ. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ 10 ತಿಂಗಳ ಮಗುವನ್ನು ಮಾ.23ರಂದು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾರನೆ ದಿನ ಮಗುವಿನ ಗಂಟಲಿನ ದ್ರವವನ್ನು ಕೋವಿಡ್ – 19 ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ಅಂತಿಮ ವರದಿ ಬಂದಿದ್ದು ಮಗುವಿಗೆ ಕೊರೋನ ಸೊಂಕು ತಗಲಿರುವುದು ದೃಡಪಟ್ಟಿದೆ.
ಬೆಳ್ತಂಗಡಿ:
ವಿದೇಶದಿಂದ ಆಗಮಿಸಿದ್ದ ಬೆಳ್ತಂಗಡಿ ತಾಲೂಕಿನ ಯುವಕನಿಗೆ ಕೊರೋನ ಸೋಂಕು ತಗುಲಿರುವುದು ಶುಕ್ರವಾರ ದೃಢವಾಗಿದೆ. ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ 21ರ ಹರೆಯದ ಯುವಕನಿಗೆ ಕೊರೋನ ಸೋಂಕು ತಗುಲಿರುವುದು ಸ್ಪಷ್ಟಗೊಂಡಿದೆ.
ದುಬೈಯಲ್ಲಿದ್ದ ಈತ ಮಾ.21ರಂದು ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದ ಮೂಲಕ ತಲುಪಿದ್ದ. ಅಲ್ಲಿಂದ ಕೆಎಸ್ಸಾರ್ಟಿಸಿ ಬಸ್ ಮೂಲಕ ಊರಿಗೆ ಬಂದಿದ್ದ. ಜ್ವರ ಮತ್ತು ಕೆಮ್ಮುವಿನಿಂದ ಬಳಲುತ್ತಿದ್ದ ಈತನನ್ನು ಮಾ.24ರಂದು ಪುತ್ತೂರಿನ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂದೇ ಆತನ ಗಂಟಲಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಇದೀಗ ವರದಿಯಲ್ಲಿ ಕೊರೋನ ಸೋಂಕು ತಗುಲಿರುವುದು ದೃಢಗೊಂಡಿದೆ. ಈತನ ಆರೋಗ್ಯ ಸ್ಥಿರವಾಗಿದೆ. ಈತನ ಹತ್ತಿರದ ಸಂಬಂಧಿಗಳನ್ನು ತೀವ್ರ ನಿಗಾವಣೆಯಲ್ಲಿಡಲಾಗಿದೆ. ಇದರೊಂದಿಗೆ ದ.ಕ.ಜಿಲ್ಲೆಯಲ್ಲಿ ಕೊರೋನ ಸೋಂಕಿತರ ಸಂಖ್ಯೆ ಏಳಕ್ಕೇರಿದೆ.
ಒಂದೇ ದಿನ ಎರಡು ಕೊರೋನ ವೈರಸ್ ದೃಢಗೊಂಡ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡ ಜಿಲ್ಲಾಡಳಿತ ಶುಕ್ರವಾರ ಸಂಜೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಉನ್ನತ ಮಟ್ಟದ ಸಭೆ ನಡೆಸಿ ಶನಿವಾರ ಸಂಪೂರ್ಣ ಜಿಲ್ಲಾ ಬಂದ್ ಬಗ್ಗೆ ನಿರ್ಧಾರ ಕೈಗೊಂಡಿತ್ತು.
ದ.ಕ. ಜಿಲ್ಲೆಯಲ್ಲಿ ಈವರೆಗೆ 7 ಪ್ರಕರಣಗಳು ದೃಢವಾಗಿದೆ. ನೆರೆಯ ಕಾಸರಗೋಡು ಮತ್ತು ಉತ್ತರ ಕರ್ನಾಟಕ ಜಿಲ್ಲೆಯಲ್ಲೂ ಈ ಪ್ರಕರಣ ಹೆಚ್ಚುತ್ತಿವೆ. ಸಾರ್ವಜನಿಕರ ಆರೋಗ್ಯ ಹಿತ ದೃಷ್ಟಿಯಿಂದ ಪ್ರತಿಯೊಬ್ಬರು ಮನೆಯೊಳಗೆ ಕುಳಿತು ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕಾಗಿದೆ.
ಹಾಗಾಗಿ ಶನಿವಾರ ವಾಣಿಜ್ಯ ವ್ಯವಹಾರಗಳನ್ನು, ಅಂಗಡಿ ಮುಂಗಟ್ಟುಗಳನ್ನು ಸಂಪೂರ್ಣವಾಗಿ ಮುಚ್ಚಲು ಸಭೆಯಲ್ಲಿ ನಿರ್ಧರಿಸಲಾಗಿದೆ. ತುರ್ತು ಸೇವೆಗಳಾದ ಮೆಡಿಕಲ್, ಹಾಲು, ಅಡುಗೆ ಅನಿಲ, ಪತ್ರಿಕೆ ಮಾರಾಟ ಇತ್ಯಾದಿಗೆ ಬಂದ್ ನಿಂದ ವಿನಾಯಿತಿ ನೀಡಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ ತಿಳಿಸಿದ್ದರು.
Comments are closed.