ಮಂಗಳೂರು, ಎಪ್ರಿಲ್.01: ದಿಲ್ಲಿಯ ಮರ್ಕಝ್ ನಿಝಾಮುದ್ದೀನ್ನ ಜಮಾತ್ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ರಾಜ್ಯದಿಂದ ತೆರಳಿ ಭಾಗವಹಿಸಿ ಬಂದವರ ಸಂಖ್ಯೆ 54 ಎಂಬುದು ಖಚಿತವಾಗಿದೆ. ಇವರಲ್ಲಿ ಬೆಂಗಳೂರು, ಬೀದರ್, ಗುಲ್ಬರ್ಗ, ಬಳ್ಳಾರಿ ಭಾಗದವರು ಎಂದು ತಿಳಿದು ಬಂದಿದ್ದು, ಜೊತೆಗೆ ದ.ಕ. ಜಿಲ್ಲೆಯ 28 ಮಂದಿ ಪಾಲ್ಗೊಂಡಿದ್ದಾರೆ ಎಂಬ ಆಘಾತಕಾರಿ ಮಾಹಿತಿ ಲಭಿಸಿದೆ.
ದೆಹಲಿಯ ನಿಜಾಮುದ್ದೀನ್ ಮರ್ಕಜ್ ನಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದ ಹಲವರಿಗೆ ಕೋವಿಡ್-19 ಸೋಂಕು ತಗುಲಿದ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ನಿಜಾಮುದ್ದೀನ್ ಪ್ರಾರ್ಥನೆಯಲ್ಲಿ ಭಾಗವಹಿಸಿದ್ದ ಎಲ್ಲರ ಮೇಲೂ ನಿಗಾ ಇಡಲಾಗಿದೆ.
ನಿಜಾಮುದ್ದೀನ್ ಪ್ರಾರ್ಥನೆಯಲ್ಲಿ ಭಾಗವಹಿಸಿದವರನ್ನು ಗುರುತಿಸಿ ಅವರನ್ನು ನಿಗಾದಲ್ಲಿಡುವ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದ್ದು, ಇದೇ ಹಿನ್ನಲೆಯಲ್ಲಿ ಮಂಗಳೂರಿನ ತೊಕ್ಕೊಟ್ಟು ಮೂಲದ ವ್ಯಕ್ತಿ ಹಾಗೂ ಇನ್ನೋರ್ವ ವ್ಯಕ್ತಿಯನ್ನು ಜಿಲ್ಲಾಸ್ಪತ್ರೆ ವೆನ್ಲಾಕ್ ಗೆ ಸೇರಿಸಲಾಗಿದೆ.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರೆನ್ನಲಾದ ದ.ಕ. ಜಿಲ್ಲೆಯ ಇಬ್ಬರನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ನಲ್ಲಿಡಲಾಗಿದೆ. ಸದ್ಯ ಇವರಿಬ್ಬರಲ್ಲೂ ಯಾವುದೇ ಅನಾರೋಗ್ಯದ ಲಕ್ಷಣಗಳಿಲ್ಲ. ಆದರೂ ಮುಂಜಾಗ್ರತಾ ಕ್ರಮವಾಗಿ ವೆನ್ಲಾಕ್ನಲ್ಲಿ ಕ್ವಾರಂಟೈನ್ ಇಡಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ತಿಳಿಸಿದ್ದಾರೆ.
ಈ ಪೈಕಿ ಒಬ್ಬರು ತೊಕ್ಕೊಟ್ಟು ಸಮೀಪದ ಪಿಲಾರ್ ನಿವಾಸಿಯಾಗಿದ್ದಾರೆ. ಇವರು ದಿಲ್ಲಿಯ ಮರ್ಕಝ್ ನಿಝಾಮುದ್ದೀನ್ನ ಧಾರ್ಮಿಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಲ್ಲದೆ, ಇದಕ್ಕೂ ಮುನ್ನ ವಿದೇಶಕ್ಕೂ ತೆರಳಿ ವಾಪಸ್ ಆಗಿದ್ದರು ಎಂದು ಹೇಳಲಾಗುತ್ತಿದೆ. ಇಬ್ಬರ ಗಂಟಲಿನ ದ್ರವ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದ್ದು, ಗುರುವಾರ ವರದಿ ಬರಲಿದೆ ಎಂದವರು ಮಾಹಿತಿ ನೀಡಿದ್ದಾರೆ.
ಉಳಿದ 26 ಮಂದಿ ಯಾರು, ಎಲ್ಲಿಯವರು ಎಂಬುದರ ತಲಾಶೆಯಲ್ಲಿ ಕೊರೋನ ಜಿಲ್ಲಾ ನೋಡಲ್ ಅಧಿಕಾರಿ ನೇತೃತ್ವದ ವೈದ್ಯರ ತಂಡವು ಪೊಲೀಸರ ಸಹಕಾರದಲ್ಲಿ ತೊಡಗಿಸಿಕೊಂಡಿವೆ. ಎಲ್ಲರನ್ನೂ ಪತ್ತೆ ಹಚ್ಚಿ ವೈದ್ಯಕೀಯ ತಪಾಸಣೆಗೊಳಪಡಿಸಲಾಗುವುದು. ಗಂಟಲ ದ್ರವ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಮತ್ತು ವರದಿಯ ಆಧಾರದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಬೀದರ್ ಜಿಲ್ಲೆಯ 26 ವ್ಯಕ್ತಿಗಳು ಭಾಗಿ:
ನಿಝಾಮುದ್ದೀನ್ ಜಮಾತ್ ಮಸೀದಿಯಲ್ಲಿ ಭಾಗವಹಿಸಿದ 26 ವ್ಯಕ್ತಿಗಳು ಬೀದರ್ ಜಿಲ್ಲೆಗೆ ಸೇರಿದವರಾಗಿದ್ದು, ಅವರನ್ನು ಕೂಡಲೆ ಕ್ವಾರಂಟೈನ್ ಮಾಡಲಾಗಿದೆ. ಉಳಿದವರ ಪತ್ತೆ ಹಚ್ಚುವ ಕಾರ್ಯವನ್ನು ಮುಂದುವರೆಸಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ತಿಳಿಸಿದ್ದಾರೆ.
ಈಗಾಗಲೆ 13 ಜನರ ಪತ್ತೆ ಹಚ್ಚಿ ಅವರನ್ನು ಕ್ವಾರಂಟೈನ್ನಲ್ಲಿಡಲಾಗಿದೆ. ಕೋವಿಡ್-19 ಸೋಂಕು ತಪಾಸಣೆಗಾಗಿ ಕಫ ಪರೀಕ್ಷೆ ನಡೆಸಿದ್ದು, ಈಗ ನೆಗೆಟಿವ್ ಎಂದು ವರದಿ ಬಂದಿದೆ. ಇದು ಸಮಾಧಾನದ ಸಂಗತಿ. ಉಳಿದವರನ್ನು ಪತ್ತೆ ಹಚ್ಚಲಾಗುತ್ತಿದೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.
Comments are closed.