ಅಂತರಾಷ್ಟ್ರೀಯ

ಕೊರೊನಾ ಶಂಕೆಯ ಮೇಲೆ ವೈದ್ಯೆಯನ್ನೇ ಹತ್ಯೆ ಮಾಡಿದ ನರ್ಸ್

Pinterest LinkedIn Tumblr

ಅವರು ಉತ್ಸಾಹಿ ವೈದ್ಯೆ. ಇಟಲಿಯ ಆಸ್ಪತ್ರೆಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಅದರಲ್ಲೂ ಕೊರೊನಾ ಸೋಂಕಿತರಿಗೆ ಮುಂಚೂಣಿಯಲ್ಲಿ ನಿಂತು ಚಿಕಿತ್ಸೆ ನೀಡುತ್ತಿದ್ದರು. ಕೊರೊನಾ ಪೀಡಿತರನ್ನು ಬದುಕಿಸಲೇಬೇಕೆಂದು ಪಣ ತೊಟ್ಟಿದ್ದ ಆ ವೈದ್ಯೆ ಇದಕ್ಕಾಗಿ ಹೋರಾಟವನ್ನೇ ಮಾಡಿದ್ದರು. ಆದರೆ, ಬೇರೆಯವರನ್ನು ಉಳಿಸಲು ಹೋರಾಟ ಮಾಡುತ್ತಿದ್ದ ಈ ವೈದ್ಯೆ ತನ್ನ ಬದುಕಿನ ಹೋರಾಟದಲ್ಲಿ ಮಾತ್ರ ಸೋತು ಹೋಗಿದ್ದರು…! ಯಾಕೆಂದರೆ, ಜೊತೆಗಾರನೇ ಇವರ ಬದುಕು ಮುಗಿಸಿದ್ದ…!

ಇದು ಇಟಲಿಯಲ್ಲಿ ನಡೆದ ಘಟನೆ. ಇಲ್ಲಿ ಭೀಕರವಾಗಿ ಕೊಲೆಯಾಗಿದ್ದವರು 27 ವರ್ಷದ ಲೊರೆನಾ ಕ್ವಾರಂಟಾ ಎಂಬ ವೈದ್ಯೆ. ಇಷ್ಟಕ್ಕೂ ಇವರ ಜೀವ ತೆಗೆದವನು ಆಂಟೋನಿಯೊ ಡಿ ಪೇಸ್ (28). ಈತ ನರ್ಸ್. ಮೆಸ್ಸಿನಾದ ಆಸ್ಪತ್ರೆಯಲ್ಲಿ ಇವರಿಬ್ಬರು ಜೊತೆಯಾಗಿ ಕೆಲಸ ಮಾಡುತ್ತಿದ್ದರು. ಆದರೆ, ಮೊನ್ನೆ ಈತ ಅಪಾರ್ಟ್‌ಮೆಂಟ್‌ನಲ್ಲಿ ಲೊರೆನಾರನ್ನು ಕೊಂದು ಮುಗಿಸಿದ್ದ.

ಬಳಿಕ ಪೊಲೀಸರಿಗೆ ಕರೆ ಮಾಡಿ `ನಾನು ಪ್ರಿಯತಮೆಯನ್ನು ಕೊಂದಿದ್ದೇನೆ’ ಎಂದು ಹೇಳಿದ್ದ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಾಗ ಲೊರೆನಾ ಮೃತದೇಹ ಅಲ್ಲೇ ಬಿದ್ದಿತ್ತು. ಜೊತೆಗೆ, ಆಂಟೋನಿಯೋ ಕೂಡಾ ರಕ್ತದ ಮಡುವಿನಲ್ಲಿ ಬಿದ್ದಿದ್ದ…! ಯಾಕೆಂದರೆ, ಪೊಲೀಸರಿಗೆ ಕರೆ ಮಾಡಿದ ಬಳಿಕ ಈತ ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ. ತಕ್ಷಣ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದೇ ವೇಳೆ, ತನಿಖಾಧಿಕಾರಿಗಳ ಮುಂದೆ ತಾನೇಕೆ ಲೊರೆನಾ ಕ್ವಾರಂಟಾರನ್ನು ಕೊಲೆ ಮಾಡಿದ್ದೆ ಎಂದು ಈತ ಹೇಳಿದ್ದ. ಈ ಕಾರಣ ಎಲ್ಲರನ್ನೂ ಬೆಚ್ಚಿ ಬೀಳಿಸುವಂತಿತ್ತು.

`ಲೊರೆನಾ ಕ್ವಾರಂಟಾ ತನಗೆ ಕೊರೊನಾ ವೈರಸ್ ಕೊಟ್ಟಿದ್ದಾರೆ ಎಂದು ಆಕೆಯನ್ನು ನಾನು ಕೊಂದಿದ್ದೇನೆ’ ಎಂದು ಈತ ಹೇಳಿದ್ದ…! ಈತನಿಗೆ ಅದ್ಯಾಕೆ ಇಂತಹ ಅನುಮಾನ ಬಂದಿತ್ತೋ ಆತನಿಗೇ ಗೊತ್ತು. ಇದೇ ಅನುಮಾನದಿಂದ ಈತ ಆಕೆಯನ್ನು ಕೊಂದೇ ಬಿಟ್ಟಿದ್ದ…! ಇದನ್ನು ಕೇಳಿ ಪೊಲೀಸರಿಗೂ ಶಾಕ್ ಆಗಿತ್ತು. `ಲೊರೆನಾ ಕ್ವಾರಂಟಾ ಒಳ್ಳೆಯ ವೈದ್ಯೆಯಾಗಿದ್ದರು. ಅವರು ಇತರರನ್ನು ಉಳಿಸಲು ಶ್ರಮಿಸುತ್ತಿದ್ದರು. ಆದರೆ, ಇದು ಬಲು ದೊಡ್ಡ ದುರಂತ’ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಇನ್ನು, ಪರೀಕ್ಷೆ ವೇಳೆ, ಲೊರೆನಾ ಕ್ವಾರಂಟಾ ಮತ್ತು ಆರೋಪಿ ಆಂಟೋನಿಯೋ ಇಬ್ಬರಿಗೂ ಕೊರೊನಾ ಸೋಂಕು ತಗುಲಿರಲಿಲ್ಲ ಎಂದು ದೃಢಪಟ್ಟಿದೆ. ಆದರೆ, ಅನುಮಾನದ ಕೈಗೆ ಬುದ್ಧಿಕೊಟ್ಟಿದ್ದ ಈ ಪಾಪಿ ಯುವ ವೈದ್ಯೆಯ ಜೀವವನ್ನು ತೆಗೆದು ಕ್ರೌರ್ಯ ಮೆರೆದಿದ್ದ.

ವೈದ್ಯೆಯ ಹತ್ಯೆಯ ವಿಚಾರ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಎಲ್ಲರೂ ಈತನ ಕ್ರೌರ್ಯಕ್ಕೆ ಕಿಡಿಕಾರಿದ್ದಾರೆ.

Comments are closed.