ಕುಂದಾಪುರ: ‘ಏನ್ರೀ……ಒಂದೆರಡು ಸಾಮಾಗ್ರಿ ತರೋಕೆ ಇಲ್ಲಿ ತನಕ ಬರಬೇಕಾ..? ಸಂತೆ ಇಲ್ಲ ಅಂತ ಹೇಳಿದ ಮೇಲೂ ಇಷ್ಟು ದೂರ ಬರೋದು ತಪ್ಪಲ್ವಾ..
? ಏನ್ರೀ ಅಂಗಡಿಯವರೆ…ತರಕಾರಿಗೆ ಎಷ್ಟು, ಹಣ್ಣಿಗೆಷ್ಟು ಬೆಲೆ? ಹೆಚ್ಚಿನ ದರಕ್ಕೆ ಮಾರಬೇಡಿ’– ಇಂದು ಕುಂದಾಪುರ ಎಪಿಎಂಸಿ ಪ್ರಾಂಗಣಕ್ಕೆ ಭೇಟಿ ನೀಡಿದ ಕುಂದಾಪುರ ಉಪವಿಭಾಗಾಧಿಕಾರಿ ಕೆ. ರಾಜು ಅವರ ಖಡಕ್ ಮಾತುಗಳಿದು.
ದೇಶಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಈಹಿನ್ನೆಲೆ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಅವರು ಸಂತೆಯನ್ನು ನಿರ್ಬಂದಿಸಿದ್ದರು. ಆದರೆ ಹೊಲ್ ಸೆಲ್ ಮಾರಾಟ ಮಾಡಲು ಅನುಮತಿ ಇದ್ದ ಹಿನ್ನೆಲೆ ಪ್ರತಿ ಶನಿವಾರ ಕುಂದಾಪುರದ ಸಂತೆ ನಡೆಯುತ್ತಿದ್ದ ಎಪಿಎಂಸಿ ಆವರಣಕ್ಕೆ ದಿನಸಿ, ತರಕಾರಿ, ಹಣ್ಣು ಮೊದಲಾದ ದಿನಬಳಕೆ ವಸ್ತುಗಳ ಮಾರಾಟಗಾರರು ಆಗಮಿಸಿದ್ದರು. ಆದರೆ ಇದು ಸಂತೆಯಲ್ಲ ಎಂದು ತಿಳಿಯದ ಸಮಾನ್ಯ ಜನರು ಎಪಿಎಂಸಿ ಯಾರ್ಡ್ಗೆ ಆಗಮಿಸಿ ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಲು ಮುಗಿಬಿದ್ದರು. ಜನಸಂದಣಿ ನೆರೆಯುತ್ತಲೆ ಕುಂದಾಪುರ ಪೊಲೀಸರು ಆಗಮಿಸಿ ಜನರನ್ನು ಚದುರಿಸಲು ಮುಂದಾಗಿದ್ದು ಸ್ಥಳದಲ್ಲಿ ಡಿಎಆರ್ ಪೊಲೀಸರನ್ನು ನಿಯೋಜಿಸಲಾಯಿತು.
ಎಸಿ ಭೇಟಿ..ಖಡಕ್ ವಾರ್ನ್…
ಸಂತೆ ನಿರ್ಬಂಧವಿದ್ದು ಜನರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ ಬಗ್ಗೆ ಮಾಹಿತಿ ತಿಳಿಯುತ್ತಲೆ ಕುಂದಾಪುರ ಉಪವಿಭಾಗದ ಸಹಾಯಕ ಕಮಿಷನರ್ ಕೆ. ರಾಜು ಎಪಿಎಂಸಿ ಪ್ರಾಂಗಣಕ್ಕೆ ಶನಿವಾರ ಬೆಳಿಗ್ಗೆ ಭೇಟಿ ಕೊಟ್ಟರು. ಎಸಿ ಆಗಮಿಸುವ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳ ಓಡಾಟವಿದ್ದಿದ್ದು ಮಾತ್ರವಲ್ಲದೆ ಒಂದೆರಡು ಸಾಮಾಗ್ರಿ ಕೊಂಡುಕೊಳ್ಳುವ ಗ್ರಾಹಕರನ್ನು ಕಂಡು ಗರಂ ಆದ ಎಸಿ, ‘ಏನ್ರೀ ಇಲ್ಲಿ ಸಂತೆ ಇಲ್ಲ…ಮೊದಲು ಮಾಹಿತಿ ಇದ್ದರೂ ಸಣ್ಣ ಪುಟ್ಟ ವಸ್ತುಗಳನ್ನು ಕೊಂಡುಕೊಳ್ಳಲು ಬರುವುದು ಸರಿಯಲ್ಲ…ಅದೆಲ್ಲವನ್ನೂ ತಮ್ಮ ಊರಿನಲ್ಲೇ ಸಿಗುವ ಅಂಗಡಿಗಳಲ್ಲಿ ಖರೀದಿಸಿದರೆ ತಮ್ಮ ಸಮಯದ ಜೊತೆಗೆ ಒಂದಷ್ಟು ಹಣವೂ ಉಳಿಯುತ್ತದೆ ಎಂದರು.
ಮಾಲಿಕರಿಗೂ ಬಿಸಿ ಮುಟ್ಟಿಸಿದ ಎಸಿ..
ಎಪಿಎಂಸಿ ಪ್ರಾಂಗಣದಲ್ಲಿ ಹಣ್ಣು-ಹಂಪಲುಗಳು, ತರಕಾರಿ, ದಿನಸಿ ಸಾಮಾಗ್ರಿಗಳನ್ನು ರಖಂ ದರದಲ್ಲಿ ಮಾರಾಟ ಮಾಡಲಾಗುತ್ತಿತ್ತು. ಆದರೆ ಸಣ್ಣಪುಟ್ಟ ಪ್ರಮಾಣದಲ್ಲಿ ಖರೀದಿಗೆ ಬಂದ ಗ್ರಾಹಕರಿಗೂ ಮಾರಾಟ ಮಾಡುತ್ತಿದ್ದುದನ್ನು ಕಂಡ ಎಸಿ ವ್ಯಾಪಾರಸ್ಥರನ್ನು ತರಾಟೆಗೆತ್ತಿಕೊಂಡರು. ‘ಸಣ್ಣ ಪುಟ್ಟ ಖರೀದಿದಾರರಿಗೆ ಮಾರಾಟ ಮಾಡಿದರೆ ಕೇಸು ಹಾಕಲಾಗುತ್ತದೆ. ಆದೇಶದಂತೆ ನಡೆದುಕೊಳ್ಳಿ…ಸುಮ್ಮನೆ ಗೊಂದಲ ಮಾಡಬೇಡಿ..ಕಡಿಮೆ ದರಕ್ಕೆ ಹೋಲ್ ಸೆಲ್ ರೀತಿಯಲ್ಲಿ ನೀಡಿರಿ ಎಂದು ಪ್ರತಿ ಅಂಗಡಿಗಳಿಗೆ ತೆರಳಿ ಎಚ್ಚರಿಕೆ ನೀಡಿದರು.
ಮೀನು ಮಾರಾಟ ಸ್ಥಳಕ್ಕೆ ಭೇಟಿ..
ಕುಂದಾಪುರ ಜಂಕ್ಷನ್ ಬಳಿಯಲ್ಲಿ ಮೀನು ಮಾರಾಟ ಮಾಡುತ್ತಿದ್ದ ಸ್ಥಳಕ್ಕೆ ಭೇಟಿ ನೀಡಿದ ಎಸಿ, ಮೀನುಗಳ ದರ ವಿಚಾರಿಸಿದರು. ಯಾವುದೇ ಕಾರಣಕ್ಕೂ ಹೆಚ್ಚಿನ ದರಕ್ಕೆ ಮೀನು ಮಾರಾಡ ಮಾಡಬೇಡಿ ಎಂದು ಎಚ್ಚರಿಕೆ ನೀಡಿದ ಅವರು ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬರುವ ಗ್ರಾಹಕರಿಗೆ ಎಚ್ಚರಿಕೆ ನೀಡುವಂತೆ ಮಾರಾಟಗಾರರಲ್ಲಿ ತಿಳಿಸಿದರು.
(ವರದಿ- ಯೋಗೀಶ್ ಕುಂಭಾಸಿ)
Comments are closed.