ಕರಾವಳಿ

ವಿಶ್ವದ ಧಾರ್ಮಿಕ ನಾಯಕರೊಂದಿಗೆ ಪುತ್ತಿಗೆ ಶ್ರೀಗಳು ಕೋರೋನಾ ಜಾಗೃತಿಯ ಬಗ್ಗೆ ವಿಡಿಯೋ ಮಾತುಕತೆ

Pinterest LinkedIn Tumblr

ಮುಂಬಾಯಿ/ ಉಡುಪಿ ಏಪ್ರಿಲ್ 04; ಕೊರೋನಾ ಸೃಷ್ಟಿಸಿದ ಆತಂಕ ಅತ್ಯಂತ ಬೃಹದಾಕಾರ ವಾಗಿದ್ದು ಇದು ಮಾನವ ಇತಿಹಾಸ ಇಷ್ಟರ ತನಕ ಎದುರಿಸಿ ಸಿದ ಸವಾಲುಗಳಲ್ಲೆ ಅತ್ಯಂತ ಭಯಾನಕವಾಗಿದ್ದು ಈ ವರೆಗೆ ಯಾರೂ ಊಹಿಸದಿದ್ದದ್ದಾಗಿದ್ದು ಇದರ ವಿರುಧ್ಧದ ಸಮರಕ್ಕೆ ವಿವಿಧ ದೇಶಗಳ ಸರಕಾರಗಳೊಳಗೆ ಹಾಗೂ ಸ್ವಯಂಸೇವಾ ಸಂಸ್ಧೆಗಳೊಳಗೆ ಹಾಗೂ ವೈದ್ಯಸಮುದಾಯದ ಜೊತೆಗೆ ಅಸಾಧಾರಣ ಒಗ್ಗಟ್ಟು ಸಮನ್ವಯಗಳ ಆವಶ್ಯಕತೆಯಿದ್ದು ಈ ನಿಟ್ಟಿನಲ್ಲಿ ಇದನ್ನು ಆಗಗೊಳಿಸಲು ನಮ್ಮ ವಿಶ್ವಶಾಂತಿ ಧರ್ಮಸಂಸ್ಥೆಯ ಪ್ರತಿನಿಧಿಗಳು ಜಗತ್ತಿನಾದ್ಯಂತ ಗರಿಷ್ಠಪ್ರಯತ್ನವನ್ನು ವಿಶ್ವಸಂಸ್ಥೆಯ ಸಹಯೋಗದೊಂದಿಗೆ ಸಾಧಿಸಬೇಕೆಂದು ಕರೋನಾ ಬಗ್ಗೆ ನಡೆದ ಜಾಗತಿಕ ಧಾರ್ಮಿಕ ನಾಯಕರ ತುರ್ತು ವೀಡಿಯೋ ಸಮ್ಮೇಳನದಲ್ಲಿ ಶ್ರೀ ಪುತ್ತಿಗೆ ಮಠದ ಶ್ರೀ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಇಂದು ಪ್ರತಿಪಾದಿಸಿದರು.

ಸುಮಾರು ಒಂದು ಸಾವಿರ ಜಾಗತಿಕ ಪ್ರತಿನಿಧಿಗಳ ವೀಡಿಯೋ ಸಮಾವೇಶದ ಸಮಾರೋಪದಲ್ಲಿ ಸಂಸ್ಥೆಯ ಅಂತಾರಾಷ್ಟ್ರೀಯ ಅಧ್ಯಕ್ಷರಾಗಿ ಆಶಯ ಭಾಷಣ ನೀಡಿದ ಶ್ರೀ ಶ್ರೀಗಳು ಕೊರೋನಾ ಸಮಸ್ಯೆಗೆ ಮಾನವ ಸಮುದಾಯ ಇತ್ತೀಚಿನ ಅನೇಕ ದಶಕಗಳಿಂದ ತುಳಿದಿರುವ ತಪ್ಪುಹೆಜ್ಜೆಗಳ ಅದೂರದೃಷ್ಟಿಯ ಅಸಹಜವಾದ ಆಧುನಿಕ ಜೀವನಶೈಲಿಯೂ ಹಾಗೂ ಪ್ರಾಣಿಹಿಂಸೆಯ ಅನುಸರಣೆಯೂ ಒಂದು ಕಾರಣವಾಗಿದ್ದು ಇದರ ಹಿಂದೆ ದೈವೀಪ್ರಕೋಪದ ಜೊತೆಗೆ ವಿಶ್ವಮಾನವ ಸಮುದಾಯಕ್ಕೆ ಬಹುವಿಧದ ಸಂದೇಶಗಳು ಗೋಚರವಾಗುತ್ತಿವೆ. ರವಾನೆಯಾಗುತ್ತಿವೆ ಎಂದರು .

ಬಹುಜನಹಿತಾಯ ಬಹುಜನಸುಖಾಯ ಜಗತ್ತನ್ನು ಸೃಷ್ಟಿಸಿದ ಭಗವಂತನು ಚಿರಂತನ ಮೌಲ್ಯಗಳ ಪರಿರಕ್ಷಣೆಗಾಗಿ ಅನೇಕ ನಿಯಮಗಳ ಲಕ್ಷ್ಮಣರೇಖೆಗಳ ಶೃಂಖಲೆಯನ್ನು ಸೃಷ್ಟಿಯ ಜೊತೆಗೇನೇ ಪೋಣಿಸಿಕೊಟ್ಟಿದ್ದು ಸಮತೋಲನದ ಹಾಗೂ ಅನ್ಯೋನ್ಯ ಹಿತದ ಹಿನ್ನೆಲೆಯಲ್ಲಿ ರೂಪಿತಗಳಾದ ಭಗವನ್ನಿರ್ಮಿತವಾದ ಈ ಚಿರಂತನಮೌಲ್ಯಗಳು ಇಂದು ಪ್ರಶಿಥಿಲಗೊಳ್ಳುವುದರಿಂದ ಹವಾಮಾನವೈಪರೀತ್ಯ ,ಕೊರೋನಾ ಮೊದಲಾದ ಈ ಹಿಂದೆ ಎಂದೆಂದೂ ಕಂಡು ಕೇಳರಿಯದ ಸಮಸ್ಯೆಗಳು ಇದೀಗ ಜಗತ್ತಿನಲ್ಲಿ ಉಲ್ಬಣಗೊಳ್ಳುತ್ತಿವೆ.

ಕೊರೋನಾ ಸಮಸ್ಯೆ ಪರಿಹಾರಕ್ಕೆ ತುರ್ತು ಕಾರ್ಯಯೊಜನೆಯ ಅವಶ್ಯಕತೆಯ ಜೊತೆಗೆ ದೀರ್ಘಾವಧಿಯ ಶಾಶ್ವತ ಪರಿಹಾರೋಪಕ್ರಮಗಳ ಅವಶ್ಯಕತೆಯೂ ಎದ್ದು ತೋರುತ್ತಿದ್ದು ಅದಲ್ಲದೆ ಈ ಸಮಸ್ಯೆಯ ಜೊತೆಗೆ ಭಯೋತ್ಪಾದನೆಯ ಸಮಸ್ಯೆಯೂ ಮತೀಯ ಕೋಮು ಸಮಸ್ಯೆಗಳೂ ತಳುಕುಹಾಕಿಕೊಳ್ಳದಂತೆ ಪರಿಸ್ಥಿತಿಯ ದುರ್ಲಾಭವನ್ನು ಯಾರೂ ಪಡೆಯದಂತೆ ಎಚ್ಚರವಹಿಸುವುದು ಕೂಡಾ ಅಷ್ಟೇ ಆವಶ್ಯಕವಾಗಿದೆ.

ದೀರ್ಘಕಾಲೀನ ಪರಿಹಾರದ ದೃಷ್ಟಿಯಲ್ಲಿ ಭಾರತೀಯ ಯೋಗಪದ್ಧತಿಗೆ ಹಾಗೂ ಪರಸ್ಪರಂ ಭಾವಯಂತ: ಎಂಬ ಗೀತಾಧಾರಿತಗಳಾದ ಭಾರತೀಯ ಆಧ್ಯಾತ್ಮಿಕ ದೃಷ್ಟಿಯ ಜೀವನಪದ್ಧತಿಗೆ ವಿಶ್ವಸಮುದಾಯವು ಹೆಚ್ಚಿನ ಗಮನಹರಿಸುವಂತೆ ಮಾಡುವುದೂ ಸೂಕ್ತವೆನಿಸುತ್ತಿದ್ದು ಒಟ್ಟಿಗೆ ಹೇಳುವುದಿದ್ದರೆ ಕೊರೋನಾ ವಿಶ್ವದ ಮಾನವಸಮುದಾಯವನ್ನೇ ಒಂದು ಗಂಭೀರ ಚಿಂತನೆಗೆ ಆಳ ಚಿಂತನೆಗೆ ಹಚ್ಚಿದೆಯಲ್ಲದೆ ಲಾಕ್ ಡೌನ್ ಮೊದಲಾದ ವಿನೂತನ ಕ್ರಮಗಳಿಂದ ಮನುಷ್ಯರನ್ನು ಅಂತರ್ಮುಖಿಗೊಳಿಸುವುದರ ಜೊತೆಗೆ ಕೌಟುಂಬಿಕಮೌಲ್ಯಗಳ ಕಡೆಗೆ ಹೆಚ್ಚಿನ ಗಮನಹರಿಸಲು ಮಾನವಸಮುದಾಯವನ್ನು ಸೂಚಿಸುತ್ತಿದೆ.
ಅಂತಿಮವಾಗಿ ವಿಶ್ವಮಾನವಸಮುದಾಯವು ತಾನು ನಡೆದು ಬಂದ ದಾರಿಯನ್ನುಇದೀಗ ಪುನರ್ವಿಮರ್ಶಿಸುವಂತೆ ಈ ಕೊರೋನಾ ಸೂಚಿಸುತ್ತದೆ ಎಂದರು.

ಸಾಂಪ್ರತ ಜಗತ್ತಿನಾದ್ಯಂತ ಧಾರ್ಮಿಕ ಸಂಸ್ಥೆಗಳೂ ಧಾರ್ಮಿಕ ನಾಯಕರಾದ ನಾವೆಲ್ಲರೂ ಕೂಡಾ ಈ ಸಮಸ್ಯೆಯನ್ನು ನಿವಾರಿಸಲು ನಮ್ಮ ನಮ್ಮ ಪರಿಮಿತ ಪ್ರಯತ್ನಗಳನ್ನು ಪರಿಹಾರೋಪಾಯಗಳನ್ನೂ ಮುಂದುವರಿಸುತ್ತಿದ್ದರೂ ನಮ್ಮೆಲ್ಲರಲ್ಲಿ ಅದಕ್ಕೊಂದು ಸಮಷ್ಟಿರೂಪ ದೊರೆತರೆ ಸಮನ್ವಯದ ರೂಪ ದೊರೆತರೆ ಇನ್ನಷ್ಟು ಪರಿಣಾಮಕಾರಿಯಾಗಿ ಹಾಗೂ ಸಮರ್ಥವಾಗಿ ಈ ಕ್ರೂರ ಕರಾಳ ಕೊರೋನಾವನ್ನು ಹೊಡೆದೋಡಿಸುವ ಗುರಿಯನ್ನು ಸಾಧಿಸಬಹುದಾಗಿದ್ದು ಅಂತಹ ಸಮಷ್ಟಿಶಕ್ತಿ ಸದ್ಯಕ್ಕೂ ಸದಾಕಾಲಕ್ಕೂ ಮೂಡಿಬರುವಂತೆ ವಿಶ್ವಶಾಂತಿ ಧರ್ಮಸಂಸ್ಥೆ ವಿಶ್ವದಾದ್ಯಂತ ತೆರೆಯಮರೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವಂತಾಗಲಿ ಎಂದು ಶ್ರೀ ಪುತ್ತಿಗೆ ಶ್ರೀಗಳು ಕರೆನೀಡಿದರು.

ವರದಿ ; ದಿನೇಶ್ ಕುಲಾಲ್

Comments are closed.