ಕರಾವಳಿ

ತಣ್ಣೀರುಬಾವಿ: ತಂಡದಿಂದ ಶಿವರಾಜ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯ ಕೊಲೆ ಯತ್ನ

Pinterest LinkedIn Tumblr

ಎರಡು ವರ್ಷಗಳ ಹಿಂದೆ ಹತ್ಯೆಯಾದ ಭರತೇಶ್ ಸಹೋದರ ಶಿವರಾಜ್

ಮಂಗಳೂರು, ಎಪ್ರಿಲ್ .18: ಎರಡು ವರ್ಷಗಳ ಹಿಂದೆ ತಣ್ಣೀರುಬಾವಿಯಲ್ಲಿ ನಡೆದ ಶಿವರಾಜ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯೋರ್ವನನ್ನು ಐದು ಮಂದಿಯ ತಂಡವೊಂದು ಶುಕ್ರವಾರ ಚೂರಿಯಿಂದ ಇರಿದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ.

ರೌಡಿ ಶೀಟರ್ ಭರತೇಶ್ ಸಹೋದರ ಶಿವರಾಜ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಧೀರಜ್ ಪೂಜಾರಿ (27) ಯನ್ನು ತಣ್ಣೀರುಬಾವಿಯ ಗಣೇಶಕಟ್ಟೆ ಬಳಿ ತಂಡವೊಂದು ಕೊಲೆಗೆ ಯತ್ನಿಸಿದೆ. ಶಿವರಾಜ್ ಹತ್ಯೆಗೆ ಪ್ರತೀಕಾರವಾಗಿ ಕೃತ್ಯ ನಡೆದಿರುವುದು ದೃಢಪಟ್ಟಿದೆ.

ಜಾಮೀನು ಪಡೆದು ಜೈಲಿನಿಂದ ಹೊರ ಬಂದಿದ್ದ ಧೀರಜ್ ಪೂಜಾರಿ ಶುಕ್ರವಾರ ತಣ್ಣೀರುಬಾವಿ ಗಣೇಶಕಟ್ಟೆ ಬಳಿಯ ತನ್ನ ಮನೆಯ ಹತ್ತಿರ ನಿಂತಿದ್ದಾಗ ಸ್ಕ್ರೂಡೈವರ್ ನವೀನ್, ಸುನೀಲ್ ಹಾಗು ಇತರ ಮೂವರ ತಂಡವು ಕೊಲೆಗೆ ಯತ್ನಿಸಿದೆ ಎಂದು ಆರೋಪಿಸಲಾಗಿದೆ.

ಎರಡು ವರ್ಷಗಳ ಹಿಂದೆ ತಣ್ಣೀರುಬಾವಿಯಲ್ಲಿ ನಡೆದಿದ್ದ ಶಿವರಾಜ್ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಧೀರಜ್ ಪೂಜಾರಿ ಮೇಲೆ ದಾಳಿ ನಡೆಯುವಾಗ ಧೀರಜ್ ಬೊಬ್ಬೆ ಹೊಡೆದು ದಾಳಿಯಿಂದ ತಪ್ಪಿಸಿಕೊಂಡಿದ್ದು, ಆರೋಪಿಗಳು ಸಾರ್ವಜನಿಕರ ಎದುರಲ್ಲಿ ನಿನ್ನನ್ನು ಕೊಲ್ಲದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಪರಾರಿಯಾಗಿದ್ದಾರೆ ಎನ್ನಲಾಗಿದೆ.

ಈ ಸಂದರ್ಭ ಧೀರಜ್‌ನ ತಾಯಿ ಹಾಗು ಸ್ಥಳೀಯರು ರಕ್ಷಿಸಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಎರಡು ವರ್ಷಗಳ ಹಿಂದೆ ಮಾರಕಾಸ್ತ್ರಗಳಿಂದ ಕಡಿದು ಕೊಲೆ: ಪ್ರತಿಕಾರ

2018ರ ಜ.22ರ ಮುಂಜಾನೆ ರೌಡಿಶೀಟರ್ ಭರತೇಶ್ ಸಹೋದರ ಶಿವರಾಜ್‌ನನ್ನು ಸ್ಥಳೀಯ ಕೆಲವು ಮಂದಿ ಮಾರಕಾಸ್ತ್ರಗಳಿಂದ ಕಡಿದು ಕೊಲೆಗೈದಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಧೀರಜ್ ಪೂಜಾರಿ, ಸುನೀಲ್, ಗದಗ ಮೂಲದ ಮಲ್ಲೇಶ್ ಎಂಬವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು.

Comments are closed.