ಕರಾವಳಿ

ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷರಿಂದ 5 ಲಕ್ಷ ರೂ. ಪ್ರಧಾನಿ ಕೇರ್‌ ಫಂಡ್‌ಗೆ ದೇಣಿಗೆ

Pinterest LinkedIn Tumblr

ಮಂಗಳೂರು: ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಕೆ.ಎಸ್.ಎಂ. ಮಸೂದ್ ಅವರು ಪ್ರಧಾನ ಮಂತ್ರಿ ಕೇರ್ ನಿಧಿಗೆ 5 ಲಕ್ಷ ರೂ. ದೇಣಿಗೆಯ ಚೆಕ್‌ನ್ನು ಮಂಗಳೂರು ಸಂಸದ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರಿಗೆ ಹಸ್ತಾಂತರಿಸಿದರು.

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಸಂಕೀರ್ಣದಲ್ಲಿ ಇರುವ ಸಂಸದರ ಕಚೇರಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಚೆಕ್ ಹಸ್ತಾಂತರಿಸಿದರು.

ಮಸೂದ್ ಅವರ ಸಹೋದರ ಹಾಗೂ ಅನಿವಾಸಿ ಉದ್ಯಮಿ ಕೆ.ಎಸ್. ನಿಸಾರ್ ಅಹ್ಮದ್ ಅವರು ಈ ದೇಣಿಗೆಯನ್ನು ಪಿಎಂ ಕೇರ್ಸ್ ಫಂಡ್‌ಗೆ ನೀಡಿದ್ದಾರೆ.

ಗಲ್ಫ್‌ ರಾಷ್ಟ್ರಗಳಲ್ಲಿ ಉದ್ಯಮವನ್ನು ನಡೆಸುತ್ತಿರುವ ನಿಸಾರ್ ಅಹ್ಮದ್ ಪ್ರಧಾನಿ ನರೇಂದ್ರ ಮೋದಿ ಅವರ ಕರೆಗೆ ಈ ಮೂಲಕ ಸ್ಪಂದಿಸಿದ್ದು, ಕೇಂದ್ರದ ಕೊರೋನಾ ವಿರುದ್ಧದ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಜೊತೆಗೆ, ವಿವಿಧ ದೇಶಗಳಲ್ಲಿ ಇರುವ ಕರಾವಳಿ ಪ್ರಜೆಗಳನ್ನು ಏರ್ ಲಿಫ್ಟ್ ಮಾಡಿಸುವಲ್ಲಿ ನಿಸಾರ್ ಅಹ್ಮದ್ ಬಹುವಾಗಿ ಶ್ರಮಿಸುತ್ತಿದ್ದಾರೆ.

ಪ್ರಧಾನಿಗೆ ಅಭಿನಂದನೆ:

ಇದೇ ವೇಳೆ, ವಿವಿಧ ದೇಶಗಳಲ್ಲಿ ಸಂಕಷ್ಟದಲ್ಲಿ ಇರುವ ಅನಿವಾಸಿ ಭಾರತೀಯರನ್ನು ಏರ್ ಲಿಫ್ಟ್ ಮಾಡುವ ದೃಢ ನಿರ್ಧಾರ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ನಿಸಾರ್ ಅಹ್ಮದ್ ಪ್ರಶಂಸಿಸಿದ್ದಾರೆ. ನಳಿನ್ ಕುಮಾರ್ ಅವರಿಗೆ ಹೂಗುಚ್ಛ ನೀಡುವ ಮೂಲಕ ಸಾಂಕೇತಿಕವಾಗಿ ಮೋದಿ ಕ್ರಮವನ್ನು ಬೆಂಬಲಿಸಿದ್ದಾರೆ.

ಈ ಸಂದರ್ಭದಲ್ಲಿ ಬಿಜೆಪಿ ನಾಯಕ ರವಿಶಂಕರ್ ಮಿಜಾರ್, ಡಾ. ಆರೀಫ್ ಮಸೂದ್, ಹಾಜಿ ಅಬ್ದುಲ್ ರಜಾಕ್, ಮಾಸ್ಟರ್ ಫ್ಲವರ್ಸ್ ಫಕೀರಬ್ಬ, ಮಹಮ್ಮದ್ ಹನೀಫ್ ಮೊದಲಾದವರು ಇದ್ದರು.

Comments are closed.