ಮಂಗಳೂರು : ವಿಶ್ವ ರೆಡ್‌ಕ್ರಾಸ್ ದಿನಾಚರಣೆ ಅಂಗವಾಗಿ ಭಾರತೀಯ ರೆಡ್‌ಕ್ರಾಸ್ ಸೊಸೈಟಿ ದಕ್ಷಿಣ ಕನ್ನಡ ಜಿಲ್ಲಾ ಘಟಕ ಹಾಗೂ ಕಾರ್ಮಿಕ ಇಲಾಖೆಯಿಂದ ಮಂಗಳೂರು ಮಹಾನಗರ ಪಾಲಿಕೆಯ 60ವಾರ್ಡ್‌ಗಳಿಗೆ 12 ಸಾವಿರ ಮಾಸ್ಕ್‌ಗಳನ್ನು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಹಾಗೂ ಆಯುಕ್ತರಾದ ಅಜಿತ್ ಕುಮಾರ್ ಹೆಗ್ಡೆ ಶಾನಾಡಿ ಅವರಿಗೆ ಹಸ್ತಾಂತರಿಸಲಾಯಿತು.
ಮೇಯರ್ ದಿವಾಕರ್ ಮಾತನಾಡಿ, ಕೊರೊನಾದ ಸಂಕಷ್ಟ ಪರಿಸ್ಥಿತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲೆಯಾದ್ಯಂತ ಅತ್ಯಂತ ಅರ್ಥಪೂರ್ಣ ಕಾರ್ಯಗಳನ್ನು ಮಾಡುತ್ತಿದೆ. ಪಾಲಿಕೆಗೆ ಈ ಹಿಂದೆ ಪೌರಕಾರ್ಮಿಕರಿಗೆ ಅಗತ್ಯವಿರುವ ಮಾಸ್ಕ್, ಸ್ಯಾನಿಟೈಸರ್, ಸಾಬೂನುಗಳನ್ನು ಸಂಸ್ಥೆ ನೀಡಿತ್ತು.
ಇದೀಗ 60 ವಾರ್ಡ್‌ಗಳ ಕಾರ್ಪೊರೇಟರ್‌ಗಳ ವ್ಯಾಪ್ತಿಯಲ್ಲಿ ಅಗತ್ಯವಾಗಿರುವ 12ಸಾವಿರ ಮಾಸ್ಕ್‌ಗಳನ್ನು ಸಂಸ್ಥೆ ವಿಶ್ವ ರೆಡ್ ಕ್ರಾಸ್ ದಿನಾಚರಣೆಯ ಅಂಗವಾಗಿ ಒದಗಿಸಿದೆ. ಸಂಸ್ಥೆ ಬದ್ಧತೆಗೆ ಕೃತಜ್ಞತೆ ಸಮರ್ಪಿಸುತ್ತಿದ್ದೇನೆ. ಪ್ರತಿ ಕಾರ್ಪೊರೇಟರ್ ವಾರ್ಡ್‌ಗೆ ೨೦೦ ಮಾಸ್ಕ್‌ನಂತೆ ಇದನ್ನು ವಿತರಿಸಲಾಗುವುದು ಎಂದರು.
ಈ ಸಂದರ್ಭ ಉಪಮೇಯರ್ ವೇದಾವತಿ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಸಿಎ ಶಾಂತಾರಾಮ ಶೆಟ್ಟಿ, ರೆಡ್‌ಕ್ರಾಸ್ ಪ್ರಕೃತಿ ವಿಕೋಪ ನಿರ್ವಹಣಾ ಸಮಿತಿ ಅಧ್ಯಕ್ಷ ಯತೀಶ್ ಬೈಕಂಪಾಡಿ, ಸಾರ್ವಜನಿಕ ಸಂಪರ್ಕ ಹಾಗೂ ಪ್ರಚಾರ ಸಮಿತಿ ಅಧ್ಯಕ್ಷ ಬಿ. ರವೀಂದ್ರ ಶೆಟ್ಟಿ, ಸಂಚಾಲಕ ಪ್ರವೀಣ್ ಮುಂತಾದವರು ಉಪಸ್ಥಿತರಿದ್ದರು.
Comments are closed.