ಮಂಗಳೂರು : ನಗರ ಭಾಗವಾದ ನಂತೂರು ಸರ್ಕಲ್ ಬಳಿ ಮಳೆನೀರು ಹರಿದು ಹೋಗಲು ಚರಂಡಿ ರಚನೆ ಕಾಮಗಾರಿಯನ್ನು ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ಮೇಯರ್ ದಿವಾಕರ್ ಪಾಂಡೇಶ್ವರ ವೀಕ್ಷಿಸಿದರು.
ಈ ವೇಳೆ ಮಾತನಾಡಿದ ಸಂಸದರು ಮಂಗಳೂರಿನ ಪ್ರಮುಖ ಜಂಕ್ಷನ್`ಗಳಲ್ಲಿ ಒಂದಾಗಿರುವ ನಂತೂರು ಜಂಕ್ಷನ್ ಬಳಿ ಪ್ರತಿ ವರ್ಷ ಮಳೆಗಾಲದ ಸಂದರ್ಭದಲ್ಲಿ ಮಳೆನೀರು ಹರಿದುಹೋಗಲು ಸೂಕ್ತ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲೇ ನೀರು ತುಂಬಿ ಜನಸಾಮಾನ್ಯರಿಗೆ ಬಹಳಷ್ಟು ಸಮಸ್ಯೆಯಾಗುತ್ತಿತ್ತು. ಆ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖಾಂತರ ಕಾರ್ಕಳ ಭಾಗಕ್ಕೆ ತೆರಳುವ ರಸ್ತೆಯ ಎಡಭಾಗದಿಂದ ಬಲಬದಿಗೆ ಮಳೆನೀರು ಹರಿದುಹೋಗಲು ಚರಂಡಿ ನಿರ್ಮಿಸುವ ಕಾಮಗಾರಿ ಪ್ರಾರಂಭವಾಗಿದೆ ಎಂದರು.
ಶಾಸಕ ಕಾಮತ್ ಮಾತನಾಡಿ, ನಂತೂರು ಜಂಕ್ಷನ್`ನಲ್ಲಿ ಮಳೆನೀರು ತುಂಬದ ರೀತಿಯಲ್ಲಿ ಚರಂಡಿ ನಿರ್ಮಿಸಲು ಈ ಭಾಗದ ಜನರು ಮನವಿ ಸಲ್ಲಿಸಿದ್ದರು. ಪ್ರತಿ ಮಳೆಗಾಲದಲ್ಲೂ ಈ ರಸ್ತೆಯ ಮೇಲೆ ದ್ವಿಚಕ್ರ ವಾಹನ ಸವಾರರು ಹಾಗೂ ಪಾದಾಚಾರಿಗಳಿಗೆ ತೆರಳಲು ಸಮಸ್ಯೆ ಉಂಟಾಗುತ್ತಿತ್ತು.
ಇಲ್ಲಿ ಚರಂಡಿ ನಿರ್ಮಾಣವಾದರೆ ಮಳೆನೀರು ಸರಾಗವಾಗಿ ಹರಿದು ಹೋದರೆ ವಾಹನ ಸವಾರರಿಗೆ ಸಮಸ್ಯೆ ಎದುರಾಗುವುದಿಲ್ಲ ಎನ್ನುವ ಕಾರಣದಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಸದ್ಯ ಕಾಮಗಾರಿ ಪ್ರಾರಂಭಿಸಲಾಗಿದೆ. ಕಾಮಗಾರಿ ನಡೆಯುವ ಸಂಧರ್ಭದಲ್ಲಿ ಸಾರ್ವಜನಿಕರಿಗೆ ಅಲ್ಪ ಮಟ್ಟದ ಸಮಸ್ಯೆಯಾಗಬಹುದು. ಆದರೆ ಭವಿಷ್ಯದ ಹಿತದೃಷ್ಟಿಯಿಂದ ಸಾರ್ವಜನಿಕರು ಸಹಕಾರ ಸಂಪೂರ್ಣ ನೀಡಬೇಕು ಎಂದು ಶಾಸಕ ವೇದವ್ಯಾಸ್ ಕಾಮತ್ ಮನವಿ ಮಾಡಿಕೊಂಡರು.
ಈ ಸಂಧರ್ಭದಲ್ಲಿ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಪೂರ್ಣಿಮಾ, ಪಾಲಿಕೆ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ಶಕಿಲಾ ಕಾವಾ, ಮನೋಹರ್ ಕದ್ರಿ,ಕಾವ್ಯ ನಟರಾಜ್, ಬಿಜೆಪಿ ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಜೆ.ಸುರೇಂದ್ರ, ರೂಪಾ ಡಿ ಬಂಗೇರಾ, ಭಾಸ್ಕರ್ ಚಂದ್ರ ಶೆಟ್ಟಿ, ರಮೇಶ್ ಕಂಡೆಟ್ಟು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಹಾಗೂ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳು ಉಪಸ್ಥಿತರಿದ್ದರು
Comments are closed.