ಮಂಗಳೂರು, ಮೇ.16: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಕೊರೋನಾ 6ನೇ ಬಲಿ ಪಡೆದಿದೆ. ದ.ಕ. ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್ ಪಾಸಿಟಿವ್ ಪ್ರಕರಣ ದೃಡಪಟ್ಟ ಸುರತ್ಕಲ್ ಗುಡ್ಡೆಕೊಪ್ಲ ಮೂಲದ 68 ವರ್ಷದ ವೃದ್ಧೆ ಶನಿವಾರ ಸಾವನ್ನಪ್ಪಿದ್ದಾರೆ.
ಅನ್ಯರೋಗದ ಜೊತೆಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ನಗರದ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಈ ಮಹಿಳೆ ಮೊದಲಿಗೆ ಅನ್ಯರೋಗದ ಕಾರಣ ಸುರತ್ಕಲ್ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದು, ಬಳಿಕ ಸುರತ್ಕಲ್ ನ ಖಾಸಗಿ ಆಸ್ಪತ್ರೆಯಿಂದ ಮಹಿಳೆಯನ್ನು ನಗರದ ಖಾಸಗಿ ಆಸ್ಪತ್ರೆಗೆ ಕಳುಹಿಸಲಾಗಿತ್ತು.
ಮೇ 12ರಂದು ರಾತ್ರಿ 10.55ರ ವೇಳೆಗೆ ಮಹಿಳೆ ನಗರದ ಎ.ಜೆ. ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದರು. ಕಾರ್ಡಿಯೋಮಯೋಪಥಿ ಮತ್ತು ಚರ್ಮದ ಸಮಸ್ಯೆ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗೆ ಬಂದಿದ್ದರು. ಅಲ್ಲಿ ತಕ್ಷಣ ಮಹಿಳೆಯನ್ನು ಐಸೋಲೇಷನ್ ಐಸಿಯುಗೆ ಶಿಫ್ಟ್ ಮಾಡಲಾಗಿತ್ತು.
ಈ ವೇಳೆ ಮಹಿಳೆಯಲ್ಲಿ ಸ್ವಲ್ಪ ಜ್ವರದ ಲಕ್ಷಣಗಳು ಕಂಡುಬಂದಿದ್ದು, ಸರಕಾರದ ಮಾರ್ಗ ಸೂಚಿಯಂತೆ ಮೇ 13ರಂದು ಮಹಿಳೆಯ ಸ್ವಾಬ್ ಸಂಗ್ರಹಿಸಿ ಪರೀಕ್ಷೆಗೆ ರವಾನಿಸಲಾಗಿತ್ತು. ಅದರ ವರದಿ ಶುಕ್ರವಾರ ಲಭ್ಯವಾಗಿದ್ದು, ಅವರಲ್ಲಿ ಕೊರೊನಾ ಪಾಸಿಟಿವ್ ಕಂಡುಬಂದಿದೆ. ಬಳಿಕ ಸರಕಾರದ ಮಾರ್ಗ ಸೂಚಿಯಂತೆ ಮಹಿಳೆಯನ್ನು 3.30ರ ಸುಮಾರಿಗೆ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿತ್ತು.
ನಿನ್ನೆಯಿಂದಲೇ ಮಹಿಳೆಯ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು.ಇಂದು ಚಿಕಿತ್ಸೆ ಫಲಕಾರಿಯಾಗದೇ ಮಹಿಳೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ವಿಶೇಷವೆಂದರೆ ದ.ಕ.ಜಿಲ್ಲೆಯಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರೆಲ್ಲ ಮಹಿಳೆಯರೇ ಆಗಿದ್ದಾರೆ.
Comments are closed.