ಮನೆಯೊಂದರ ಅಂಗಳಕ್ಕೆ ಮದ್ಯದ ಬಾಟ್ಲಿ ಮತ್ತು ಮಾಂಸದ ತುಂಡು ಎಸೆದಿದ್ದನ್ನು ಪ್ರಶ್ನಿಸಿದಕ್ಕೆ ಪತಿಗೆ ಹಲ್ಲೆಗೈದು ಮಹಿಳೆಯ ಮಾನಭಂಗ
ಮಂಗಳೂರು: ತನ್ನ ಸಹಚರರ ಜೊತೆ ಕಂಠಪೂರ್ತಿ ಮದ್ಯ ಸೇವಿಸಿದ ಸಾಮಾಜಿಕ ಸಂಘಟನೆಯೊಂದರ ಅಧ್ಯಕ್ಷನೂ ಸೇರಿದಂತೆ ನಾಲ್ವರು ಮನೆಯೊಂದರ ಅಂಗಳಕ್ಕೆ ಮದ್ಯದ ಬಾಟ್ಲಿ ಮತ್ತು ಮಾಂಸದ ತುಂಡು ಎಸೆದಿದ್ದಲ್ಲದೆ ಪ್ರಶ್ನಿಸಿದ ಮಹಿಳೆಯ ಮಾನಭಂಗಗೈದು ಆಕೆಯ ಪತಿಯ ಮೇಲೆ ಹಲ್ಲೆ ನಡೆಸಿದ ಘಟನೆ ಸುರತ್ಕಲ್ ಠಾಣಾ ವ್ಯಾಪ್ತಿಯ ಕಾಟಿಪಳ್ಳ ನಿತ್ಯಾನಂದ ಭಜನಾ ಮಂದಿರದ ಬಳಿ ನಡೆದಿದೆ.
ಆರೋಪಿಗಳನ್ನು ಎ.ಪಿ. ಮೋಹನ್ ಗಣೇಶಪುರ, ರವೀಂದ್ರ ಆಚಾರಿ, ಹರ್ಷಿತ್, ಸುಧಾಕರ ಬೊಳ್ಳಾಜೆ ಎಂದು ಹೆಸರಿಸಲಾಗಿದ್ದು ಸುರತ್ಕಲ್ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಘಟನೆಯ ವಿವರ:
ಮೇ 10ರ ರಾತ್ರಿ ಕಾಟಿಪಳ್ಳ ನಿತ್ಯಾನಂದ ಭಜನಾ ಮಂಡಳಿಯ ಬಳಿ ಆರೋಪಿಗಳು ಗುಂಡು ತುಂಡು ಪಾರ್ಟಿ ನಡೆಸಿದ್ದು ಈ ವೇಳೆ ಮದ್ಯದ ಬಾಟಲಿ ಮತ್ತು ಮಾಂಸದ ತುಂಡುಗಳನ್ನು ಪಕ್ಕದ ನಾಗೇಶ್ ನಾಯಕ್ ಎಂಬವರ ಮನೆಯ ಆವರಣದೊಳಗೆ ಎಸೆದಿದ್ದಾರೆ.
ಈ ಬಗ್ಗೆ ಮರುದಿನ ಬೆಳಗ್ಗೆ ನಾಗೇಶ್ ನಾಯಕ್ ಪತ್ನಿ ಸುಮನಾ ನಾಯಕ್ ಪ್ರಶ್ನಿಸಿದ್ದಾರೆ. ಈ ವೇಳೆ ಆರೋಪಿಗಳು ಬೆದರಿಕೆ ಒಡ್ಡಿ ಹೋಗಿದ್ದಾರೆ. ಮೇ 12ರ ರಾತ್ರಿ ಮತ್ತೆ ಆರೋಪಿಗಳು ಪಾರ್ಟಿ ಮಾಡಿದ್ದು ಇದನ್ನು ಸುಮನಾ ಪ್ರಶ್ನಿಸಿದ್ದಾರೆ.
ಆರೋಪಿಗಳಾದ ಎ.ಪಿ.ಮೋಹನ್, ಸುಮನಾ ನಾಯಕ್ ಅವರ ಭುಜಕ್ಕೆ ಹೊಡೆದು ಬಟ್ಟೆಯನ್ನು ಹಿಡಿದು ಎಳೆದಿದ್ದಾರೆ. ಅಲ್ಲೇ ಇದ್ದ ಇನ್ನೋರ್ವ ಆರೋಪಿ ರವೀಂದ್ರ ಆಚಾರ್ಯ ಜಡೆ ಹಿಡಿದು ಎಳೆದು ಮಾನಭಂಗ ಮಾಡಿದ್ದಾರೆ ಎಂದು ಸುಮನಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿಗಳ ವಿರುದ್ಧ ಐಪಿಸಿ 447, 504, 354, 34 ಅನ್ವಯ ಎಫ್‌ಐಆರ್ ದಾಖಲಾಗಿದ್ದು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಹಗಲಲ್ಲಿ “ಕಿಟ್”, ರಾತ್ರಿ “ಟೈಟ್”!!
ಆರೋಪಿಗಳಲ್ಲಿ ಓರ್ವನಾಗಿರುವ ಎ.ಪಿ. ಮೋಹನ್ ಗಣೇಶಪುರ ಸೇವಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷನಾಗಿದ್ದು ಮಹಿಳೆಯ ಮನೆಯ ಪಕ್ಕದಲ್ಲೇ ತನ್ನ ಟ್ರಸ್ಟ್ ಕೆಲಸಕ್ಕೆಂದು ಬಾಡಿಗೆ ಕೊಠಡಿ ಪಡೆದಿದ್ದಾನೆ. ಅಲ್ಲಿಂದ ಕೊರೋನಾ ಲಾಕ್ ಡೌನ್ ವೇಳೆಯಲ್ಲಿ ಜನರಿಗೆ ಕಿಟ್ ತುಂಬಿಸಿ ವಿತರಣೆ ಮಾಡುತ್ತಿದ್ದ ಎಂದು ಪೊಲೀಸ್ ಮೂಲಗಳು ಹೇಳಿವೆ.
ಉಳಿದ ಆರೋಪಿಗಳು ಇದೇ ಟ್ರಸ್ಟ್ ಸದಸ್ಯರಾಗಿದ್ದು ಹಗಲು ಹೊತ್ತು ಕಿಟ್ ವಿತರಿಸುತ್ತಿದ್ದರೆ ರಾತ್ರಿ ಭಜನಾ ಮಂದಿರದ ಬಳಿ ಗುಂಡು ತುಂಡಿನ ಪಾರ್ಟಿ ನಡೆಯುತ್ತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಸಾಮಾಜಿಕ ಸಂಘಟನೆಯೊಂದರ ಅಧ್ಯಕ್ಷನೇ ನೀಚ ಕೆಲಸಕ್ಕೆ ಇಳಿದಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
Comments are closed.