ಉಡುಪಿ: ಲಾಕ್ ಡೌನ್ ಸಂದರ್ಭವನ್ನು ಬಳಸಿಕೊಂಡ ಕಾಮುಕನೊಬ್ಬ ಒಂಟಿ ಮಹಿಲೆಗೆ ಬೈಕಿನಲ್ಲಿ ಡ್ರಾಪ್ ನೀಡುವ ನೆಪದಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ ಘಟನೆ ಬ್ರಹ್ಮಾವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮೇ.1ಕ್ಕೆ ನಡೆದಿದ್ದು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮೂಲತಃ ಚಿಕ್ಕಮಗಳೂರು ಕಡೂರಿನ ಪ್ರಸ್ತುತ ಐರೋಡಿ ಮಾಬುಕಳ ನಿವಾಸಿ ಹೊನ್ನಪ್ಪ (36) ಬಂಧಿತ ಕಾಮುಕ. ಈತನು 20 ವರ್ಷದಿಂದ ಮಾಬುಕಳದಲ್ಲಿ ವಾಸವಾಗಿದ್ದು, ಪ್ರಸ್ತುತ ಸಂತೆಕಟ್ಟೆಯ ಬೇಕರಿಯೊಂದರಲ್ಲಿ ಮೂರು ವರ್ಷದಿಂದ ಕೆಲಸ ಮಾಡುತ್ತಿದ್ದಾನೆ.
ಘಟನೆ ಹಿನ್ನೆಲೆ: 42 ವರ್ಷ ಪ್ರಾಯದ ಉಡುಪಿ ಆಸುಪಾಸಿನ ಮಹಿಳೆಯೊಬ್ಬರು ಬ್ರಹ್ಮಾವರದ ಖಾಸಗಿ ಅಪಾರ್ಟ್ಮೆಂಟ್ ಒಂದರಲ್ಲಿ ಕೆಲಸ ಮಾಡಿಕೊಂಡಿದ್ದು ಅಂದು ಬೆಳಿಗ್ಗೆ ಕೆಲಸ ಮುಗಿಸಿ ಮನೆಗೆ ಹೋಗಲು ಹೆದ್ದಾರಿ ಬಳಿ ಒಂಟಿಯಾಗಿ ನಿಂತಿದ್ದರು. ಈ ವೇಳೆ ಬೈಕ್ ನಲ್ಲಿಬಂದ ವ್ಯಕ್ತಿ ಡ್ರಾಪ್ ನೀಡುವುದಾಗಿ ಹೇಳಿದ್ದ. ಬೇಡವೆಂದರೂ ಕೇಳದೇ ದುಂಬಾಲು ಬಿದ್ದು ಬೈಕ್ ಹತ್ತಿಸಿಕೊಂಡ ಆತ ಹೆದ್ದಾರಿಯಲ್ಲಿ ಸಾಗದೆ ನಿರ್ಜನ ದಾರಿಯಲ್ಲಿ ಬೈಕ್ ಓಡಿಸಿದ್ದ. ಈ ಬಗ್ಗೆ ಪ್ರಶ್ನಿಸಿದ ಮಹಿಳೆಗೆ ಹೆದ್ದಾರಿಯಲ್ಲಿ ಪೊಲೀಸರು ಇರುತ್ತಾರೆಂದು ಸಬೂಬು ಹೇಳಿದ್ದ. ಹೀಗೆ ಆ ವ್ಯಕ್ತಿ ವರ್ತನೆಯಲ್ಲಿ ಗುಮಾನಿ ಬಂದಿದ್ದು ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿದ ಆತ ಆಕೆ ಮೇಲೆ ದೌರ್ಜನ್ಯಕ್ಕೆ ಮುಂದಾಗಿದ್ದು ಮಹಿಳೆ ಕಿರುಚಾಡುತ್ತಾರೆ. ಬಳಿಕ ಮುಖ್ಯ ರಸ್ತೆಗೆ ಬಂದ ಆಕೆ ಯಾರದ್ದೋ ಸಹಾಯದಿಂದ ನಗರಕ್ಕೆ ಬಂದ ಬಳಿಕ ಸಹೋದರನ ಜೊತೆ ಬ್ರಹ್ಮಾವರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದರು.
ಪೊಲೀಸರ ಕಾರ್ಯಾಚರಣೆ…
ಸಂತ್ರಸ್ತ ಮಹಿಳೆ ದೂರಿನ ಹಿನ್ನೆಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆಬೀಸಿದ್ದು ಸಿಸಿ ಟಿವಿ ದ್ರಶ್ಯಾವಳಿಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಬಜಾಜ್ ಫ್ಲಾಟಿನಾ ಬೈಕ್ ಗುರುತು ಪತ್ತೆಯಾಗಿತ್ತು. ಆರೋಪಿ ಚಹರೆ, ಬೈಕ್ ಆಧಾರದಲ್ಲಿ ತನಿಖೆ ಕೈಗೆತ್ತಿಕೊಂಡ ಬ್ರಹ್ಮಾವರ ಪಿಎಸ್ಐ ರಾಘವೆಂದ್ರ ಮತ್ತು ತಂಡದವರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ.
(ವರದಿ- ಯೋಗೀಶ್ ಕುಂಭಾಸಿ)
ಇದನ್ನೂ ಓದಿರಿ-
ಬ್ರಹ್ಮಾವರ: ಲಿಪ್ಟ್ ಕೊಡೋ ನೆಪದಲ್ಲಿ ಮಹಿಳೆ ಅತ್ಯಾಚಾರಕ್ಕೆ ಯತ್ನಿಸಿದ ಅಪರಿಚಿತ
Comments are closed.