ಮಂಗಳೂರು, ಮೇ.22 : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010ರ ಮೇ 22ರ ಮುಂಜಾನೆ ಏರ್ ಇಂಡಿಯಾ ವಿಮಾನ ರನ್‌ವೇಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ಮಹಾ ದುರಂತಕ್ಕೆ ಶುಕ್ರವಾರಕ್ಕೆ 10 ವರ್ಷ ಪೂರ್ಣವಾಗುತ್ತದೆ. 2010ರ ಮೇ 22ರ ಇಂದಿನ ದಿನ ಎಂದೂ ಮರೆಯದ ಘಟನೆಯೊಂದು ನಡೆದಿತ್ತು.
ಮೇ 22ರ ಮುಂಜಾನೆ ಏರ್ ಇಂಡಿಯಾ ವಿಮಾನ ರನ್‌ವೇಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ಮಹಾ ದುರಂತ ಹತ್ತು ವರ್ಷಗಳೇ ಕಳೆದರೂ ಕಹಿ ಘಟನೆ ಮಾತ್ರ ಎಲ್ಲರ ಮನದಲ್ಲಿ ಜೀವಂತವಾಗಿದೆ. ದುಬೈಯಿಂದ ಮರಳುತ್ತಿದ್ದ ವಿಮಾನ ಬಜ್ಪೆ ವಿಮಾನ ನಿಲ್ದಾಣದ ತೀರಾ ಸಮೀಪ ಇನ್ನೇನು ಇಳಿಬೇಕು ಅನ್ನುವಷ್ಟರಲ್ಲಿ ಮಹಾ ದುರಂತ ಸಂಭವಿಯೇ ಬಿಟ್ಟಿತ್ತು. ದೇಶವನ್ನೇ ಬೆಚ್ಚಿಬೀಳಿಸಿದ್ದ, ಈ ಘಟನೆ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿಗೆ ಕಾರಣವಾಯಿತು.
ದುಬಾೖಯಿಂದ ಬಂದ ವಿಮಾನ ಎಲ್ಲ ಸುರಕ್ಷಾ ಸಂಕೇತಗಳ ವಿನಿಮಯದೊಂದಿಗೆ ಇಳಿದಿತ್ತು. ಆದರೆ ರನ್‌ವೇಯಲ್ಲಿ ನಿಲ್ಲದೆ ಮುಂದಕ್ಕೆ ಚಲಿಸುತ್ತಲೇ ಸೂಚನಾ ಗೋಪುರದ ಕಂಬಗಳಿಗೆ ಢಿಕ್ಕಿಯಾಗಿ, ಅದನ್ನು ತುಂಡರಿಸಿ ಆಳ ಪ್ರದೇಶಕ್ಕೆ ಉರುಳಿ ಬಿತ್ತು. ಮುಖ್ಯ ಪೈಲಟ್‌ನ ನಿರ್ಲಕ್ಷ್ಯ, ಸಹ ಪೈಲಟ್‌ನ ಸಲಹೆ ಪಾಲಿಸದೆ ಇದ್ದದ್ದೇ ಈ ದುರ್ಘಟನೆಗೆ ಕಾರಣ ಎಂದು ಬಳಿಕ ತನಿಖೆಯಲ್ಲಿ ತಿಳಿದುಬಂತು.
ದುರಂತದಲ್ಲಿ ಪೈಲಟ್, ಸಿಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. ಆ ವಿಮಾನದಲ್ಲಿ ಒಟ್ಟು 135 ಮಂದಿ ವಯ ಸ್ಕರು, 19 ಮಕ್ಕಳು ಹಾಗೂ 4 ಶಿಶುಗಳು, 6 ಮಂದಿ ವಿಮಾನ ಸಿಬಂದಿ ಸೇರಿ ಒಟ್ಟು 166 ಮಂದಿ ಪ್ರಯಾಣಿಸುತ್ತಿದ್ದರು. 8 ಮಂದಿ ಬದುಕುಳಿದಿದ್ದರು. ಮೃತಪಟ್ಟವ ರಲ್ಲಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಕೇರಳದವರಿದ್ದರು.
ದುರಂತದಲ್ಲಿ ಮೃತಪಟ್ಟವರ ಬಹುತೇಕ ಶವಗಳು ಸುಟ್ಟುಕರಕಲಾಗಿದ್ದ ಕಾರಣ ಗುರುತು ಪತ್ತೆ ಅಸಾಧ್ಯವಾಗಿತ್ತು. ಕರಾವಳಿಯಾದ್ಯಂತದ ವಿವಿಧ ಸ್ವಯಂ ಸೇವಾ ಸಂಘಟನೆಗಳು ಈ ಸಂದರ್ಭ ಕೂಡಲೇ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿಕೊಂಡಿದ್ದವು.
ಅಂದು ನಡೆದ ದುರ್ಘಟನೆಯಲ್ಲಿ ಬದುಕಿ ಉಳಿದವರೆಂದರೆ ತಣ್ಣೀರುಬಾವಿಯ ಪ್ರದೀಪ್ (ಅಂದಿನ ಪ್ರಾಯ 28), ಹಂಪನ ಕಟ್ಟೆಯ ಮಹಮ್ಮದ್ ಉಸ್ಮಾನ್ (49), ವಾಮಂಜೂರಿನ ಜ್ಯೂಯೆಲ್ ಡಿ’ಸೋಜಾ (24), ಕೇರಳ ಕಣ್ಣೂರು ಕಂಬಿಲ್‌ನ ಮಾಹಿನ್ ಕುಟ್ಟಿ (49), ಕಾಸರಗೋಡು ಉದುಮ ಕುಲಿಕುನ್ನು ನಿವಾಸಿ ಕೃಷ್ಣನ್ (37), ಉಳ್ಳಾಲದ ಉಮ್ಮರ್ ಫಾರೂಕ್ (26), ಪುತ್ತೂರು ಸಾಮೆತ್ತಡ್ಕದ ಅಬ್ದುಲ್ಲಾ (37), ಮಂಗಳೂರು ಕೆಎಂಸಿ ವಿದ್ಯಾರ್ಥಿನಿ ಬಾಂಗ್ಲಾದ ಸಬ್ರಿನಾ (23) ಪವಾಡಸದೃಶರಾಗಿ ಬದುಕುಳಿದ ಅದೃಷ್ಟವಂತರು. ಇವರಲ್ಲಿ ಸಬ್ರಿನಾ ಮಾತ್ರ ಗಂಭೀರ ಗಾಯಗೊಂಡಿದ್ದರು.
Comments are closed.