ಕರಾವಳಿ

ಮಂಗಳೂರು ನಗರ ಉತ್ತರದ ಸರಕಾರಿ ಶಾಲೆಗಳಲ್ಲಿ APP ಮೂಲಕ ONLINE ಕಲಿಕೆಗೆ ಚಾಲನೆ

Pinterest LinkedIn Tumblr

ಮಂಗಳೂರು : ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಬೆಂಗಳೂರಿನ ರೋಟರಿ ಸಂಸ್ಥೆಯವರ ಸಹಭಾಗಿತ್ವದಲ್ಲಿ ತಮ್ಮ ಕ್ಷೇತ್ರದ ಸರಕಾರಿ ಶಾಲೆಗಳ ಮಕ್ಕಳಿಗೆ ಆಧುನಿಕ ತಂತ್ರಜ್ಞಾನದ ಮೂಲಕ ವಿದ್ಯಾಭ್ಯಾಸ ನೀಡಲು ಯೋಜನೆಯನ್ನು ಹಾಕಿಕೊಂಡಿದ್ದಾರೆ. ಇದಕ್ಕಾಗಿ ಪಠ್ಯಪುಸ್ತಕ ಆಧಾರಿತ ಭೋದನಾ ಸಾಮಾಗ್ರಿಗಳನ್ನು digilearn ಸಿದ್ಧಪಡಿಸಿದೆ.

ಈಗಾಗಲೇ ಬೇರೆ ರಾಜ್ಯಗಳಲ್ಲಿರುವ 2800 ಶಾಲೆಗಳಲ್ಲಿ ಇದನ್ನು ಬಳಸಲಾಗುತ್ತಿದೆ. ಇದರ ಪ್ರಯೋಜನ ನಮ್ಮ ರಾಜ್ಯದ ಮಕ್ಕಳಿಗೂ ಸಿಗುವ ನಿಟ್ಟಿನಲ್ಲಿ ಪ್ರಪ್ರಥಮವಾಗಿ ಮಂಗಳೂರು ನಗರ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿರುವ 15 ಸರಕಾರಿ ಶಾಲೆಗಳಲ್ಲಿ ಇದನ್ನು ಅನುಷ್ಠಾನಗೊಳಿಸಲು ಶಾಸಕ ಡಾ.ವೈ ಭರತ್ ಶೆಟ್ಟಿಯವರು ಮುಂದಾಗಿದ್ದಾರೆ.

ಪ್ರತಿ ಶಾಲೆಗೆ ಶಾಸಕ ಡಾ.ಭರತ್ ಶೆಟ್ಟಿಯವರ ವೈಯಕ್ತಿಕ ನೆಲೆಯಲ್ಲಿ 8, 9 ಮತ್ತು 10 ನೇ ತರಗತಿಯ ಮಕ್ಕಳಿಗೆ ಕಲಿಯಲು ಒಂದು ಪ್ರಾಜೆಕ್ಟರ್ ನೀಡಲಾಗುವುದು. ಅದರಲ್ಲಿ APP ಡೌನ್ ಲೋಡ್ ಮಾಡಿ ಶಿಕ್ಷಕರು ಮಕ್ಕಳಿಗೆ ಪಾಠ ಭೋದಿಸಲಿದ್ದಾರೆ. ನಂತರ ಮಕ್ಕಳು ಮನೆಯಲ್ಲಿ ಪೋಷಕರ ಮೊಬೈಲಿನಲ್ಲಿ ಆ APP ಡೌನ್ ಲೋಡ್ ಮಾಡಿ ಮನೆಯಲ್ಲಿಯೂ ಪಾಠಗಳನ್ನು ಅಭ್ಯಸಿಸಲು ಸಾಧ್ಯವಾಗುತ್ತದೆ.

ಮಂಗಳೂರು ನಗರ ಉತ್ತರದ ವಿಧಾನಸಭಾ ಕ್ಷೇತ್ರದ ಎಲ್ಲಾ ಪ್ರೌಢಶಾಲೆಗಳ ಎಲ್ಲಾ ಮಕ್ಕಳಿಗೆ ಪ್ರಯೋಜನವಾಗಲಿರುವ ಅಂದಾಜು *20 ಲಕ್ಷ* ರೂಪಾಯಿ ವೆಚ್ಚದ ಈ ಯೋಜನೆಯನ್ನು ಶಾಸಕರಾದ ಡಾ.ವೈ ಭರತ್ ಶೆಟ್ಟಿಯವರು ಬೆಂಗಳೂರು ರೋಟರಿ ಕ್ಲಬ್ ಪಶ್ಚಿಮ ಸಹಕಾರದೊಂದಿಗೆ ಅನುಷ್ಟಾನಕ್ಕೆ ತರಲು ಕಾರ್ಯೋನ್ಮುಖರಾಗಿದ್ದಾರೆ.

ಒಮ್ಮೆ APP ಡೌನ್ ಲೋಡ್ ಮಾಡಿದರೆ ನಂತರ ಇಂಟರ್ ನೆಟ್ ಅಗತ್ಯವಿರುವುದಿಲ್ಲ. ಸಾಮಾನ್ಯವಾಗಿ APP ಗಳು ಆಂಗ್ಲಭಾಷೆಯಲ್ಲಿರುತ್ತವೆ. ಆದರೆ ಸರಕಾರಿ ಶಾಲೆಯ ಮಕ್ಕಳ ಅನುಕೂಲಕ್ಕಾಗಿ ಈ APP ವಿಶೇಷವಾಗಿ *ಕನ್ನಡ* ದಲ್ಲಿ ತಯಾರಿಸಲಾಗಿದೆ.

ಶಾಲೆಯಲ್ಲಿ ಶಿಕ್ಷಕರು ಕಲಿಸಿದಷ್ಟೇ ಪರಿಣಾಮಕಾರಿಯಾಗಿ ದೃಶ್ಯ ಮಾಧ್ಯಮಗಳ ಮೂಲಕ ಅನಿಮೇಶನ್ ಬಳಕೆಯೊಂದಿಗೆ ಧ್ವನಿಯನ್ನು ಬಳಸಿ ಗುಣಮಟ್ಟದಲ್ಲಿ ರಾಜಿಯಾಗದಂತೆ ಕಲಿಸುವ ವಿಧಾನ ಮಕ್ಕಳಿಗೂ ಇಷ್ಟವಾಗಲಿದೆ. Android ಮೊಬೈಲಿನಲ್ಲಿ playstore ಮೂಲಕ ಇದನ್ನು ಡೌನ್ ಲೋಡ್ ಮಾಡಿದರೆ 3 ವರ್ಷಗಳ ವರೆಗೆ ಉಚಿತವಾಗಿ ಮಕ್ಕಳು ಈ ಸೇವೆಯನ್ನು ಬಳಸಿಕೊಳ್ಳಬಹುದು.

ಸ್ಟೇಟ್ ಸಿಲೆಬಸ್ ನ ಎಲ್ಲಾ ಪಠ್ಯವಿಷಯಗಳು ಈ APP ನಲ್ಲಿ ಕನ್ನಡದಲ್ಲಿಯೇ ಇರುವುದರಿಂದ ಸರಕಾರಿ ಶಾಲೆಗಳ ಮಕ್ಕಳು ಕೂಡ ಆಧುನಿಕ ತಂತ್ರಜ್ಞಾನದ ಮೂಲಕ ಶಿಕ್ಷಣ ಪಡೆಯಲು ಶಾಸಕ ಡಾ.ವೈ ಭರತ್ ಶೆಟ್ಟಿಯವರ ಪ್ರಯತ್ನ ಯಶಸ್ವಿಯಾಗಲಿದೆ.

ಇದರ ಉದ್ಘಾಟನಾ ಕಾರ್ಯಕ್ರಮ ಮಂಗಳೂರಿನ ಲಾಲ್ ಭಾಗ್ ನಲ್ಲಿರುವ ಮಂಗಳೂರು ಮಹಾನಗರ ಪಾಲಿಕೆಯ ಮಂಗಳಾ ಸಭಾಂಗಣ ( ಪರಿಷತ್ ಸಭಾಂಗಣ) ದಲ್ಲಿ ಶನಿವಾರ ಮೇ 23 ರಂದು ಬೆಳಿಗ್ಗೆ 10:30 ಕ್ಕೆ ಆರಂಭವಾಗಲಿರುವುದು.

ಭಾರತೀಯ ಜನತಾ ಪಾರ್ಟಿಯ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸನ್ಮಾನ್ಯ ಬಿ.ಎಲ್.ಸಂತೋಷ್ ಅವರು ನವದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವಿದ್ಯಾಮಿತ್ರ ಕನ್ನಡ APP ಗೆ ಚಾಲನೆ ನೀಡಿ ಶಿಕ್ಷಕರಿಗೆ, ವಿದ್ಯಾರ್ಥಿಗಳಿಗೆ, ಪೋಷಕರಿಗೆ ಸಂದೇಶ ನೀಡಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾರತೀಯ ಜನತಾ ಪಾರ್ಟಿ ರಾಜ್ಯಾಧ್ಯಕ್ಷರೂ, ಸಂಸದರೂ ಆದ ಸನ್ಮಾನ್ಯ ನಳಿನ್ ಕುಮಾರ್ ಕಟೀಲ್ ವಹಿಸಲಿದ್ದು, ದಕ ಉಸ್ತುವಾರಿ ಸಚಿವರಾದ ಸನ್ಮಾನ್ಯ ಕೋಟಾ ಶ್ರೀನಿವಾಸ ಪೂಜಾರಿ, ಮಹಾಪೌರರಾದ ಶ್ರೀ ದಿವಾಕರ್ ಪಾಂಡೇಶ್ವರ್, ಉಪವೇಯರ್ ಶ್ರೀಮತಿ ವೇದಾವತಿ, ಪಾಲಿಕೆ ಆಯುಕ್ತರಾದ ಶಾನಾಡಿ ಅಜಿತ್ ಕುಮಾರ್ ಹೆಗ್ಡೆ, ರೋಟರಿ ಬೆಂಗಳೂರು ಪಶ್ಚಿಮ ಅಧ್ಯಕ್ಷರಾದ ಶ್ರೀ ಬಾಲಚಂದ್ರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಂಗಳೂರು ನಗರ ಉತ್ತರ ಶಾಸಕರಾದ ಡಾ.ವೈ ಭರತ್ ಶೆಟ್ಟಿ ಪತ್ರಿಕಾ ಪ್ರಕಟನೆಯ ಮೂಲಕ ತಿಳಿಸಿದ್ದಾರೆ.

Comments are closed.