ಕರಾವಳಿ

ಹೊರನಾಡ ಕನ್ನಡಿಗರನ್ನು ರೈಲಲ್ಲಿ ತವರೂರಿಗೆ ಸುರಕ್ಷಿತವಾಗಿ ತೆರಳಲು ಸರಕಾರ ಅವಕಾಶ ನೀಡಲಿ : ಎಲ್. ವಿ. ಅಮೀನ್

Pinterest LinkedIn Tumblr

ಮುಂಬಯಿ : ಕೊರೋನ ಇಂದಿನ ಸಂದಿಗ್ಧ ಪರಿಸ್ಥಿತಿಯಲ್ಲಿ ಕರಾವಳಿಯ ಎಲ್ಲಾ ರಾಜಕೀಯ ಧುರೀಣರು ತಮ್ಮಿಂದಾಗುವ ಸಹಕಾರ ಪ್ರೋತ್ಸಾಹ ನೀಡುತ್ತಿರುವುದು ಅಭಿಮಾನದ ಸಂಗತಿ. ಆದರೆ ಈ ಪರಿಸ್ಥಿತಿಯಲ್ಲಿ ಮಹಾರಾಷ್ಟ್ರದ ತುಳು-ಕನ್ನಡಿಗರನ್ನು ರೈಲಿನಲ್ಲಿ ಸುರಕ್ಷಿತವಾಗಿ ತಾಯ್ನಾಡಿಗೆ ತೆರಳಲು ಕರ್ನಾಟಕ ಸರಕಾರವು ಅವಕಾಶ ನೀಡಬೇಕು ಎಂದು ಮುಂಬಯಿ ಮಹಾನಗರದ ಉಧ್ಯಮಿ, ಸಮಾಜ ಸೇವಕ, ಬಿಲ್ಲವರ ಅಸೋಷಿಯೇಶನಿನ ಮಾಜಿ ಅಧ್ಯಕ್ಷ ಹಾಗೂ ದಕ್ಷಿಣ ಭಾರತ ಬಿಜೆಪಿ ಘಟಕದ ಮುಂಬಯಿ ವಲಯದ ಮಾಜಿ ಅಧ್ಯಕ್ಷರೂ ಆದ ಎಲ್. ವಿ. ಅಮೀನ್ ವಿನಂತಿಸಿದ್ದಾರೆ.

ಈ ಸಂದರ್ಭದಲ್ಲಿ ರೈಲು ಪ್ರಯಾಣವು ಸುರಕ್ಷಿತವಾಗಿದ್ದು ಕರಾವಳಿಯ ಎಲ್ಲಾ ಶಾಸಕರು ಪಕ್ಷಬೇದ ಮರೆತು, ಅನಾನುಕೂಲತೆಯಿಂದಾಗಿ ಊರಿಗೆ ಪ್ರಯಾಣಿಸಲಿಚ್ಚಿಸುವ ತುಳು ಕನ್ನಡಿಗರನ್ನು ಸೂಕ್ತ ತಪಾಸಣೆಯ ನಂತರ ರೈಲಿನಲ್ಲಿ ಪ್ರಯಾಣಿಸಿ ಊರಿಗೆ ತಲಪುವಂತೆ ಸರಕಾರಕ್ಕೆ ಒತ್ತಾಯ ಮಾಡಬೇಕು. ಈ ರೀತಿ ನೇರವಾಗಿ ಪ್ರಯಾಣಿಸುದರಿಂದ ಊರಿಗೆ ತಲಪಿದ ನಂತರ ಅವರು ಹಾಗೂ ಇತರರು ಆರೋಗ್ಯಕರವಾಗಿರಲು ಸಾಧ್ಯ. ಬಸ್ಸಲ್ಲಿ ಪ್ರಯಾಣಿಸಿದಲ್ಲಿ ಗಡಿ ಪ್ರದೇಶ ಹಾಗೂ ಇತರ ಸಾರ್ವಜನಿಕ ಸ್ಥಳಗಳಲ್ಲಿ ಹಲವು ತಾಸುಗಳ ತನಕ ಕಾಯಾಬೇಕಾಗಿದ್ದು ಇದರಿಂದ ಸಾರ್ವಜನಿಕ ಸಂಪರ್ಕ ಹೊಂದಲು ಸಾಧ್ಯ ಎಂದರು.

ಕಾರ್ಕಳ ಶಾಸಕ ಸುನಿಲ್ ಕುಮಾರ್ ಬಗ್ಗೆ ಮಾತನಾಡಿದ ಅಮೀನ್ ಅವರು ಪೂನಾ ಹಾಗೂ ಮುಂಬಯಿಯಿಂದ ಊರಿಗೆ ಹೋದ ಅನೇಕ ತುಳು ಕನ್ನಡಿಗರಿಗೆ ಸುನಿಲ್ ಕುಮಾರ್ ಅವರು ವಿಶೇಷ ರೀತಿಯಲ್ಲಿ ಸಹಕರಿಸಿದನ್ನು ಬಹಳ ಅಭಿಮಾನದಿಂದ ಹೇಳಬೇಕಾಗಿದೆ. ಈ ಸಮಯದಲ್ಲಿ ಊರಿಗೆ ಹೋದವರಿಗೆ, ರಾಜಕಾರಣವನ್ನು ಬದಿಗೊತ್ತಿ ಕ್ವಾರಂಟೈನ್ ನಲ್ಲಿದ್ದವರಿಗೆ ಕಾರ್ಕಳದಲ್ಲಿ ಉತ್ತಮವಾಗಿ ಸೇವೆ ನೀಡಿ ಜನ ಸಾಮಾನ್ಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಸುನಿಲ್ ಕುಮಾರ್ ಅವರು ಕೇವಲ ತನ್ನ ಕ್ಷೇತ್ರದ ತುಳು ಕನ್ನಡಿಗರನ್ನು ಮಾತ್ರವಲ್ಲದೆ ಮುಂಬಯಿಯಲ್ಲಿ ರುವ ಕರಾವಳಿಯ ಅನೇಕ ತುಳು ಕನ್ನಡಿಗರಿಗೆ ದೂರವಾಣಿ ಹಾಗೂ ವಾಟ್ಸಪ್ ಮೂಲಕ ಸಂದೇಶ ನೀಡಿ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.

ಚುನಾವಣೆಗೆ ಮೊದಲು ಮಹಾನಗರಕ್ಕೆ ಆಗಮಿಸಿ ತನ್ನ ಕ್ಷೇತ್ರದಲ್ಲಿ ತಾನು ಮಾಡಿದ ಕಾರ್ಯದ ಲೆಕ್ಕಾಚಾರವನ್ನು ತಿಳಿಸುತ್ತಾ ಮುಂಬಯಿಯಲ್ಲಿರುವ ತನ್ನ ಕ್ಷೇತ್ರದ ಜನರಲ್ಲಿ ಅಲ್ಲಿ ಇನ್ನು ಏನಾದರೂ ಅಭಿವೃದ್ದಿ ಕಾರ್ಯ ಆಗಬೇಕಾಗಿದ್ದಲ್ಲಿ ನನಗೆ ತಿಳಿಸಿರಿ ಎಂದಿದ್ದರು.

ಈ ರೀತಿ ಮುಂಬಯಿಯಲ್ಲಿ ನೆಲೆಸಿದ ತನ್ನ ಕ್ಷೇತ್ರದ ಜನರ ಮನಸ್ಸನ್ನು ಗೆದ್ದ ಈ ಶಾಸಕರು ಚುನಾವಣೆ ನಂತರವೂ ಕೋರೋನಾದಿಂದಾಗಬಹುದಾದ ಆಪತ್ತನ್ನು ಮರೆತು ಹೊರನಾಡ ತುಳು ಕನ್ನಡಿಗರ ಜನಸೇವೆಯಲ್ಲಿ ಯಶಸ್ವಿಯನ್ನು ಗಳಿಸುತ್ತಿರುವ ಕೇವಲ ಕೆಲವೇ ರಾಜಕಾರಿಣಿಗಳಲ್ಲಿ ಒಬ್ಬರು ಎಂದರು.

ಈಗಾಗಲೇ ವಿಮಾನಗಳು ಪ್ರಾರಂಭ ಮಾಡುತ್ತೇವೆ ಎಂದು ಟಿಕೆಟ್ ಖರೀದಿಸಿ ಬಹಳಷ್ಟು ಜನರು ವಿಮಾನ ನಿಲ್ಧಾಣಕ್ಕೆ ತೆರಳಿದ ನಂತರ ಕೊನೆ ಗಳಿಗೆಯಲ್ಲಿ ವಿಮಾನ ರದ್ದಾಗಿ ಜನರಿಗೆ ಸಮಸ್ಯೆ ಎದುರಾಗಿದೆ. ವಿಮಾನದಲ್ಲಿ ಪ್ರಯಾಣಿಸಿದವರಿಗೆ ಕ್ವಾರಂಟೀನ್ ಬಗ್ಗೆ ಕರ್ನಾಟಕ ಸರಕಾರವು ಕೇಂದ್ರದ ನೀತಿಯನ್ನು ಪಾಲಿಸಬೇಕಾಗಿದೆ ಎಂದರು.

ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರುಗಳಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಉಮಾನಾಥ್ ಕೋಟ್ಯಾನ್ ಮೊದಲಾದವರು ಕ್ವಾರಂಟೈನ್ ಕೇಂದ್ರದಲ್ಲಿ ಯಶಸ್ವಿಯಾಗಿ ಸೇವೆ ಸಲ್ಲಿಸಿರುವರು. ಪೂನಾ ಮತ್ತು ಮುಂಬಯಿಯ ತುಳು ಕನ್ನಡಿಗರನ್ನು ಕ್ವಾರಂಟೈನ್ ಮಾಡಿಸಿ ಅವರಿಗೆ ಧೈರ್ಯ ತುಂಬುವ ಮಾತುಗಳನ್ನು ಆಡಿ ಇಡೀ ಕರ್ನಾಟಕದಲ್ಲೇ ವಿಭಿನ್ನ ರೀತಿಯಲ್ಲಿ ಕ್ವಾರಂಟೈನ್ ಕೇಂದ್ರದಲ್ಲಿ ಸೇವೆ ಮಾಡಿಸಿದ ಶಾಸಕ ಸುನಿಲ್ ಕುಮಾರ್ ಮತ್ತು ಅವರ ಟೀಮ್ ನ ಸೇವೆ ನಿಜವಾಗಿಯೂ ಒಂದು ವಿಶೇಷತೆಯಿದೆ ಇದೆ ಎಂದ ಎಲ್. ವಿ. ಅಮೀನ್ ಕರಾವಳಿಗೆ ಆದಷ್ಟು ಬೇಗನೆ ರೈಲು ಸೇವೆ ಆರಂಭಗೊಳ್ಳಲಿ ಎಂದರು.

ವರದಿ : ಈಶ್ವರ ಎಂ. ಐಲ್

Comments are closed.