ಮಂಗಳೂರು, ಜೂ 03 : ನಗರದ ಮೆಡಿಕಲ್ ಕಾಲೇಜುಗಳಲ್ಲಿ ಕೋವಿಡ್ – 19 ಸ್ಯಾಂಪಲ್ ಟೆಸ್ಟ್ ಮಾಡದ ಹಿನ್ನಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅವರು ಅಧಿಕಾರಿಗಳ ವಿರುದ್ಧ ಗರಂ ಆದ ಘಟನೆ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇಂದು ನಡೆದ ವೈದ್ಯಕೀಯ ಶಿಕ್ಷಣ ಸಚಿವರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ 8 ಮೆಡಿಕಲ್ ಕಾಲೇಜುಗಳಿದ್ದರೂ. ಕೇವಲ 4 ಮೆಡಿಕಲ್ ಕಾಲೇಜಿನಲ್ಲಿ ಮಾತ್ರ ಟೆಸ್ಟ್ ನಡೆಯುತ್ತಿದೆ. ಇನ್ನುಳಿದ ಕಾಲೇಜುಗಳಲ್ಲಿ ಯಾಕೆ ಟೆಸ್ಟ್ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರಲ್ಲದೇ ಒಂದು ವಾರದ ಒಳಗೆ ಎಲ್ಲಾ ಮೆಡಿಕಲ್ ಕಾಲೇಜುಗಳಲ್ಲಿ ಟೆಸ್ಟ್ ಮಾಡಬೇಕು. ಟೆಸ್ಟ್ ಮಾಡದ ಕಾಲೇಜುಗಳ ಅಡ್ಮೀಷನ್ ಹೋಲ್ಡ್ ಮಾಡುತ್ತೇನೆ ಎಂದು ವೈದ್ಯಕೀಯ ಕಾಲೇಜುಗಳಿಗೆ ಖಡಕ್ ಎಚ್ಚರಿಕೆ ನೀಡಿದರು.
ಕೊರೊನಾ ಬಗ್ಗೆ ಜನರು ಭಯಭೀತಗೊಂಡಿದ್ದಾರೆ. ಅಲ್ಲದೇ, ಕೊರೊನಾವನ್ನು ಸಾಮಾಜಿಕ ಪಿಡುಗು ಅಂತ ಬಣ್ಣಿಸಲಾಗುತ್ತಿದ್ದು. ಸೋಂಕಿತರನ್ನು ಕಳಂಕಿತರನ್ನಾಗಿ ನೋಡಲಾಗುತ್ತಿದೆ. ಇದನ್ನು ಹೋಗಲಾಡಿಸೋದು ಬಹುದೊಡ್ಡ ಸವಾಲಾಗಿದೆ. 100ರಲ್ಲಿ 90 ಮಂದಿಗೆ ಜ್ವರದ ಲಕ್ಷಣವೂ ಕಂಡುಬಂದಿಲ್ಲ. ಬೇರೆ ಖಾಯಿಲೆ ಇದ್ದವರಿಗೆ ಮಾತ್ರ ಕೊರೊನಾ ಕಾಡುತ್ತಿದೆ ಎಂದರು.
ಇನ್ನು ಮುಂದೆ ಕಂಟೈನ್ಮೆಂಟ್ ಝೋನ್ ಇರುವುದಿಲ್ಲ. ಮನೆಯಲ್ಲಿರುವ ವ್ಯಕ್ತಿಗೆ ಸೋಂಕು ಇದ್ದರೆ ಅವರನ್ನು ಮನೆಯಲ್ಲೇ ಸೀಲ್‌ಡೌನ್ ಮಾಡಲಾಗುತ್ತದೆ. ಮನೆಯನ್ನು ಕೇವಲ 14 ದಿನ ಸೀಲ್‌ಡೌನ್ ಮಾಡುತ್ತೇವೆ.
ಈ ಹಿಂದೆ ಮಹಾರಾಷ್ಟ್ರದಿಂದ ಬಂದ ಎಲ್ಲರನ್ನೂ ಟೆಸ್ಟ್ ಮಾಡಿದ್ದೆವು. ಆದರೆ, ಇನ್ನು ಸೋಂಕು ಲಕ್ಷಣ ಇದ್ದವರಿಗೆ ಮಾತ್ರ ಕೊರೊನಾ ಟೆಸ್ಟ್. ಅವಶ್ಯಕತೆ ಇದ್ದವರಿಗಷ್ಟೇ ಕೊರೊನಾ ಟೆಸ್ಟ್ ಮಾಡುತ್ತೇವೆ. ಮಹಾರಾಷ್ಟ್ರದಿಂದ ಬಂದವವರು ಅವರವರ ಮನೆಯಲ್ಲಿ ಕ್ವಾರಂಟೈನ್ ಆಗಬೇಕು.
ಜನರ ಜೀವ ಉಳಿಸುವ ಕೆಲಸವನ್ನು ಮೂರು ತಿಂಗಳಿನಲ್ಲಿ ಮಾಡಿದ್ದೇವೆ. ಈಗ ಜೀವನ ಉಳಿಸುವ ಕೆಲಸ ಮಾಡಬೇಕಾಗಿದೆ ಎಂದು ಸಚಿವರು ತಿಳಿಸಿದರು.
Comments are closed.