ಕರಾವಳಿ

ಮೂಲ್ಕಿ: ದುಷ್ಕರ್ಮಿಗಳ ತಂಡದಿಂದ ಯುವಕನ ಬರ್ಬರ ಹತ್ಯೆ : ಇಬ್ಬರು ಗಂಭೀರ

Pinterest LinkedIn Tumblr

ಮಂಗಳೂರು: ದುಷ್ಕರ್ಮಿಗಳ ತಂಡವೊಂದು ಯುವಕನೋರ್ವನನ್ನು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆಗೈದ ಘಟನೆ ಶುಕ್ರವಾರ ಸಂಜೆ ದ.ಕ.ಜಿಲ್ಲೆಯ ಮೂಲ್ಕಿ ಸಮೀಪ ನಡೆದಿದೆ.

ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲ್ಕಿ ಹೆಚ್ ಡಿ ಎಫ್ ಸಿ ಬ್ಯಾಂಕ್ ಮುಂಭಾಗ ಜನ ಸಂಚಾರವಿರುವಾಗಲೇ ಈ ಘಟನೆ ನಡೆದಿದ್ದು, ದುಷ್ಕರ್ಮಿಗಳಿ ಮೂಡುಬಿದಿರೆಯ ಉದ್ಯಮಿ ಅಬ್ದುಲ್‌ ಲತೀಫ್‌ (38) ಎಂಬವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬಾಟಲಿಯಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾರೆ.

ಈ ವೇಳೆ ಲತೀಫ್‌ ಅವರ ಜೊತೆಯಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ಕಾರ್ನಾಡ್ ದರ್ಗಾ ರೋಡ್ ನಿವಾಸಿ ಮುನೀರ್ ಹಾಗೂ ಆತನ ಪುತ್ರ ಇಯಾಜ್ ಎಂದು ಗುರುತಿಸಲಾಗಿದೆ.

ಅಬ್ದುಲ್‌ ಲತೀಫ್‌ ಅವರು ತಮ್ಮ ಸಂಬಂಧಿಗಳ ಜತೆಗೆ ಬ್ಯಾಂಕಿನ ಬಳಿಗೆ ಬಂದಿದ್ದರು. ಉಳಿದವರು ಒಳಗೆ ಹೋಗಿದ್ದರೆ ಲತೀಫ್‌ ಕಾರಿನಲ್ಲಿಯೇ ಇದ್ದರು. ಈ ವೇಳೆ ಬ್ಯಾಂಕಿನಿಂದ ಹೊರಕ್ಕೆ ಬರುತ್ತಿದ್ದ ತನ್ನ ಹತ್ತಿರದ ಸಂಬಂಧಿಯ ಮೇಲೆ ಕಾರು ಮತ್ತು ಇತರ ವಾಹನಗಳ ಮೂಲಕ ಬಂದ ಸುಮಾರು 8 ಮಂದಿಯ ಗುಂಪೊಂದು ಹಲ್ಲೆಗೆ ಮುಂದಾಗುತ್ತಿದ್ದಂತೆ ಅದನ್ನು ತಡೆಯಲು ಧಾವಿಸಿದ ಲತೀಫ್‌ ಮೇಲೆಯೇ ಮಾರಕಾಸ್ತ್ರದಿಂದ ಕೊಚ್ಚಿ ಬಾಟಲಿಯಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸುವಷ್ಟರಲ್ಲಿ ಆರೋಪಿಗಳು ಪರಾರಿಯಾಗಿದ್ದರು. ಮೂಲ್ಕಿ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ಮೂಲ್ಕಿ ಇನ್‌ಸ್ಪೆಕ್ಟರ್‌ ಜಯರಾಮ ಗೌಡ ಅವರ ನೇತೃತ್ವದ ತಂಡ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದೆ.

Comments are closed.