ಮುಲ್ಕಿ,ಜೂನ್.06: ಮುಲ್ಕಿಯಲ್ಲಿ ಶುಕ್ರವಾರ ಸಂಜೆ ನಡೆದ ಮೂಡುಬಿದಿರೆಯ ಉದ್ಯಮಿ ಅಬ್ದುಲ್ ಲತೀಫ್ (38) ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಮುಲ್ಕಿ ಠಾಣಾ ಪೊಲೀಸರು ಆರೋಪಿಗಳು ಕೃತ್ಯಕ್ಕೆ ಬಳಸಿದ ವಸ್ತು ಹಾಗೂ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಕಾರ್ನಾಡ್ ಬಪ್ಪನಾಡಿನ ಮುಹಮ್ಮದ್ ಹಾಸಿಮ್ (27), ನಿಸಾರ್ ಯಾನೆ ರಿಯಾಜ್ (33) ಹಾಗೂ ಮುಹಮ್ಮದ್ ರಾಝಿಂ(24), ಉಚ್ಚಿಲ ಬಡಾ ಗ್ರಾಮದ ಅಬೂಬಕ್ಕರ್ ಸಿದ್ದೀಕ್ (27) ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ.
ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಮೂಲ್ಕಿ ಹೆಚ್ ಡಿ ಎಫ್ ಸಿ ಬ್ಯಾಂಕ್ ಮುಂಭಾಗ ಶುಕ್ರವಾರ ಸಂಜೆ ಜನ ಸಂಚಾರವಿರುವಾಗಲೇ ದುಷ್ಕರ್ಮಿಗಳ ತಂಡವೊಂದು ಉದ್ಯಮಿ ಅಬ್ದುಲ್ ಲತೀಫ್ ರನ್ನು ಮಾರಕಾಸ್ತ್ರಗಳಿಂದ ಕಡಿದು ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದೆ.
ಈ ವೇಳೆ ಲತೀಫ್ ಅವರ ಜೊತೆಯಲ್ಲಿದ್ದ ಇಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ಕಾರ್ನಾಡ್ ದರ್ಗಾ ರೋಡ್ ನಿವಾಸಿ ಮುನೀರ್ ಹಾಗೂ ಆತನ ಪುತ್ರ ಇಯಾಜ್ ಎಂದು ಗುರುತಿಸಲಾಗಿದೆ.
ಅಬ್ದುಲ್ ಲತೀಫ್ ಅವರು ತಮ್ಮ ಸಂಬಂಧಿಗಳ ಜತೆಗೆ ಬ್ಯಾಂಕಿನ ಬಳಿಗೆ ಬಂದಿದ್ದರು. ಉಳಿದವರು ಒಳಗೆ ಹೋಗಿದ್ದರೆ ಲತೀಫ್ ಕಾರಿನಲ್ಲಿಯೇ ಇದ್ದರು. ಈ ವೇಳೆ ಬ್ಯಾಂಕಿನಿಂದ ಹೊರಕ್ಕೆ ಬರುತ್ತಿದ್ದ ತನ್ನ ಹತ್ತಿರದ ಸಂಬಂಧಿಯ ಮೇಲೆ ಕಾರು ಮತ್ತು ಇತರ ವಾಹನಗಳ ಮೂಲಕ ಬಂದ ಸುಮಾರು 8 ಮಂದಿಯ ಗುಂಪೊಂದು ಹಲ್ಲೆಗೆ ಮುಂದಾಗುತ್ತಿದ್ದಂತೆ ಅದನ್ನು ತಡೆಯಲು ಧಾವಿಸಿದ ಲತೀಫ್ ಮೇಲೆಯೇ ಮಾರಕಾಸ್ತ್ರದಿಂದ ಕೊಚ್ಚಿ ಬಾಟಲಿಯಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿಮಧ್ಯೆ ಅವರು ಮೃತಪಟ್ಟಿದ್ದರು.
ಘಟನೆಗೆ ಸಂಬಂಧಿಸಿದಂತೆ ಮುಲ್ಕಿ ಪೊಲೀಸ್ ಠಾಣೆಯಲ್ಲಿ ಕೊಲೆ, ಕೊಲೆ ಯತ್ನ ಪ್ರಕರಣದ ದಾಖಲಾಗಿತ್ತು. ಅದರಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಲ್ಕಿ ಪೊಲೀಸ್ ಠಾಣಾ ಪೊಲೀಸರು ಮತ್ತು ಮಂಗಳೂರು ಉತ್ತರ ಉಪ ವಿಭಾಗದ ರೌಡಿ ನಿಗ್ರಹ ದಳದವರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಘಟನೆಯ ಗಾಯಾಳುಗಳು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆಯಲ್ಲಿದ್ದಾರೆ. ಈ ಹಿಂದಿನ ಹಳೇ ದ್ವೇಷದಿಂದ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Comments are closed.