ಕುಂದಾಪುರ: ಕುಂದಾಪುರ ಮೂಲದ ಹೆಸ್ಕುತ್ತೂರು ಪ್ರೌಢ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಬಾಬು ಶೆಟ್ಟಿ ಎನ್ನುವರು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಂದ ಅಭಿನಂದನೆಗೆ ಪಾತ್ರರಾಗಿದ್ದು ಜಿಲ್ಲೆಗೆ ಇದೊಂದು ಹೆಮ್ಮೆಯ ಸಂಗತಿಯಾಗಿದೆ. ಅಷ್ಟಕ್ಕೂ ಕುಂದಾಪುರದ ವಕ್ವಾಡಿಯ ಶಿಕ್ಷಕ ಬಾಬು ಶೆಟ್ಟಿಯವರು ಮಾಡಿದ ಕೆಲಸವೇನು ಅನ್ನೋದಕ್ಕೆ ಈ ಸ್ಟೋರಿ ನೋಡಿ.
(ಶಿಕ್ಷಣ ಸಚಿವ ಸುರೇಶ್ ಕುಮಾರ್)
(ಹೆಸ್ಕುತ್ತೂರು ಪ್ರೌಢ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ಬಾಬು ಶೆಟ್ಟಿ)
ಉಡುಪಿಗೆ ಭೇಟಿ ಕೊಟ್ಟಿದ್ದ ಸಚಿವರು ತಮ್ಮ ಅಧೀಕೃತ ಫೇಸ್ ಬುಕ್ ಖಾತೆಯಲ್ಲಿ ಹೀಗೆ ಬರೆದುಕೊಂಡಿದ್ದಾರೆ. ‘ಉಡುಪಿಯಲ್ಲಿ ಎಸ್.ಎಸ್.ಎಲ್.ಸಿ. ಪರೀಕ್ಷೆಗಳ ಸಿದ್ಧತೆಯ ಪರಿಶೀಲನಾ ಸಭೆ ನಡೆಸುತ್ತಿದ್ದಾಗ ಈ ಮಹನೀಯರ ಪರಿಚಯವಾಯಿತು. ಇವರ ಹೆಸರು ಶ್ರೀ #ಬಾಬು_ಶೆಟ್ಟಿ. ಕುಂದಾಪುರ ವಲಯದ ಹೆಸ್ಕತ್ತೂರು ಸರಕಾರಿ ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ನ ಶಾಲೆಯ ಎಸ್.ಎಸ್.ಎಲ್.ಸಿ. ತರಗತಿಯ ನಲವತ್ತಮೂರು ಮಕ್ಕಳ ಮನೆಗೆ ತಾನೇ ತೆರಳಿ ಅವರಿಗೆ ಪಾಠ ಹೇಳಿ, ತಿಳಿಯದ ಸಂಗತಿಗಳ ಕುರಿತು ಮತ್ತೆ ಮತ್ತೆ ತಿಳುವಳಿಕೆ ನೀಡುತ್ತಿರುವ ಮಹನೀಯ.
ಪುಣ್ಯಾತ್ಮ ಶಿಕ್ಷಕ ಎಂದ ಸಚಿವರು!
ತನ್ನ ಶಾಲೆಯಲ್ಲಿ ಕಡುಬಡವ ವಿದ್ಯಾರ್ಥಿಗಳ ಮನೆಗೂ ಹೋಗಿ ತನ್ನ ಈ ಕಾಯಕ ಮಾಡುತ್ತಿರುವ ಈ ಪುಣ್ಯಾತ್ಮನಿಗೆ ಫೋನ್ ಮಾಡಿ ಅಭಿನಂದಿಸಿದೆ.
ಕಳೆದ 23 ವರ್ಷಗಳಿಂದ ತನ್ನ ತರಗತಿಯ ಮಕ್ಕಳು ನೂರಕ್ಕೆ ನೂರು ತೇರ್ಗಡೆಯಾಗುತ್ತಿರುವ ಸಂಗತಿಯನ್ನು ಬಹಳ ಹೆಮ್ಮೆಯಿಂದ, ಆದರೆ ವಿನೀತನಾಗಿ ಹಂಚಿಕೊಂಡರು. ಬಾಬುಶೆಟ್ಟಿ ಯವರಂತಹ ಶಿಕ್ಷಕರೇ ನಮ್ಮ ಶಾಲೆಗಳ ವಿಶ್ವಾಸಾರ್ಹತೆ ಹೆಚ್ಚಿಸುತ್ತಿರುವವರು ಎಂದು ಸಚಿವರು ಬರೆದುಕೊಂಡಿದ್ದಾರೆ.
(ವರದಿ- ಯೋಗೀಶ್ ಕುಂಭಾಸಿ)
Comments are closed.