ಕರಾವಳಿ

ಕಾಲು ಕಳೆದುಕೊಂಡ ವ್ಯಕ್ತಿ ಚಿಕಿತ್ಸೆಗಾಗಿ ಮಾಡಿದ್ದ ಬ್ಯಾಂಕ್ ಸಾಲ ತೀರಿಸಿ ಮಾನವೀಯತೆ ಮೆರೆದ ಟೀಂ ಬಿ ಹ್ಯೂಮನ್

Pinterest LinkedIn Tumblr

ಮಂಗಳೂರು :ಕಾಲು ಕಳೆದುಕೊಂಡ ವ್ಯಕ್ತಿಯೊಬ್ಬರು ತನ್ನ ಚಿಕಿತ್ಸೆಗಾಗಿ ಬ್ಯಾಂಕ್‌ನಿಂದ ಮಾಡಿದ್ದ ಸಾಲವನ್ನು ‘ಟೀಂ ಬಿ ಹ್ಯೂಮನ್’ ತಂಡವು ತೀರಿಸಿ ಮಾನವೀಯತೆ ಮೆರೆದ ವಿದ್ಯಮಾನ ನಗರದ ಹೊರವಲಯದಲ್ಲಿ ನಡೆದಿದೆ.

ಸೋಮೇಶ್ವರ ಪುರಸಭಾ ವ್ಯಾಪ್ತಿಯ ಪುಷ್ಪಕಿರಣ್ (51) ಎಂಬವರು ವೃತ್ತಿಯಲ್ಲಿ ಟಿವಿ ಟೆಕ್ನಿಶಿಯನ್ ಆಗಿದ್ದರು. ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳೊಂದಿಗೆ ಸೋಮೇಶ್ವರದ ನೆಹರೂ ನಗರದಲ್ಲಿ ವಾಸವಾಗಿದ್ದರು. ಎಪ್ರಿಲ್ 27ರಂದು ವಾಂತಿ ಮಾಡಲಾರಂಭಿಸಿದ್ದ ಪುಷ್ಪಕಿರಣ್‌ರನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಪರೀಕ್ಷಿಸಿದ ವೈದ್ಯರು ರಕ್ತದಲ್ಲಿ ಹಿಮೋಗ್ಲೋಬಿನ್ ಕೊರತೆ ಇದೆ ಎಂದು ಹೇಳಿದ್ದು ಆ ಬಳಿಕ ರಕ್ತವನ್ನೂ ನೀಡಲಾಗಿತ್ತು. ಆ ಬಳಿಕ ಪುಷ್ಪಕಿರಣ್‌ರ ಮೊಣಕಾಲಿನ ಕೆಳಗಿದ್ದ ಸಣ್ಣದಾದ ಗಾಯವೊಂದು ಕಾಲಿಡೀ ಹರಡಿದ್ದು, ಗ್ಯಾಂಗ್ರಿನ್ ಆಗಿದೆ ಎಂದು ವೈದ್ಯರು ತಿಳಿಸಿದ್ದರು.

ಆ ಬಳಿಕ ತೊಕ್ಕೊಟ್ಟಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ದುರದೃಷ್ಟವಶಾತ್ ಪುಷ್ಪಕಿರಣ್‌ನ ಮೊಣಕಾಲಿನ ಕೆಲಭಾಗವನ್ನು ಕತ್ತರಿಸಬೇಕಾಯಿತು.

ಆ ಬಳಿಕ ಪುಷ್ಪಕಿರಣ್ ಕೆಲಸ ಮಾಡಲಾಗದೆ ಮನೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಸೋಮೇಶ್ವರದ ರೆಸಾರ್ಟ್‌ವೊಂದರಲ್ಲಿ ಸ್ವಚ್ಛತಾ ಕೆಲಸ ಮಾಡುತ್ತಿದ್ದ ಇವರ ಪತ್ನಿ ರೇಖಾ ತನ್ನ ಪತಿಯ ಚಿಕಿತ್ಸೆಗಾಗಿ ಬ್ಯಾಂಕ್ ಸಾಲ ಮಾಡಿದ್ದರು.

ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸಂದೇಶವನ್ನು ಗಮನಿಸಿದ ‘ಟೀಂ ಬಿ ಹ್ಯೂಮನ್’ ತಂಡವು ಬ್ಯಾಂಕ್‌ನಿಂದ ಮಾಡಿದ್ದ 40 ಸಾವಿರ ರೂ. ಸಾಲವನ್ನು ಪಾವತಿಸಲು ಚೆಕ್ ನೀಡಿ ಪುಷ್ಪಕಿರಣ್-ರೇಖಾ ದಂಪತಿಯನ್ನು ಸಾಲಮುಕ್ತಗೊಳಿಸಿದೆ.

ಸದ್ಯ ಪುಷ್ಪಕಿರಣ್‌ಗೆ ದುಡಿಯಲು ಸಾಧ್ಯವಿಲ್ಲ. ಹಾಸಿಗೆಯಲ್ಲೇ ವಿಶ್ರಾಂತಿ ಪಡೆಯಲಿರುವುದರಿಂದ ದಿನವಹಿ ಖರ್ಚಿಗೆ ಸಮಸ್ಯೆಯಾಗಲಿದೆ. ದಾನಿಗಳ ನೆರವು ಇನ್ನೂ ಬೇಕಿದೆ. ಯಾರಾದರು ಸಹಾಯ ಮಾಡಲು ಇಚ್ಛಿಸುವುದಾದರೆ ಟೀಂ ಬಿ ಹ್ಯೂಮನ್ ತಂಡವನ್ನು ಸಂಪರ್ಕಿಸಬಹುದಾಗಿದೆ.

ಸಾಲ ಪಾವತಿಯ ಸಂದರ್ಭ ‘ಟೀಂ ಬಿ ಹ್ಯೂಮನ್’ನ ಸ್ಥಾಪಕಾಧ್ಯಕ್ಷ ಆಸೀಫ್ ಡೀಲ್ಸ್, ಭಾಷಾ ಕಂಡತ್‌ಪಳ್ಳಿ, ಶಮೀಮ್, ಅಲ್ತಾಫ್, ಸಾದಿಕ್, ಅಹ್ನಾಫ್ ಡೀಲ್ಸ್, ಶಿಯಾ ಡೀಲ್ಸ್ ಉಪಸ್ಥಿತರಿದ್ದರು

Comments are closed.